ನ್ಯೂಸ್

ಕೈಸಾಲದ ಕೋಲಾಹಲ; ಹಲ್ಲೆಗೀಡಾಗಿದ್ದ ಯುವಕ ಸಾವು, ಹಾವೇರಿಯ ವ್ಯಕ್ತಿ ಆತ್ಮಹತ್ಯೆ

ಬೆಂಗಳೂರು: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ದೌರ್ಜನ್ಯ ಮಿತಿಮೀರಿದ್ದು, ಸಾಲದ ಬಡ್ಡಿ ತೀರಿಸಲಾಗದೆ ಕಿರುಕುಳ ಸಹಿಸಿಕೊಳ್ಳಲಾಗದೆ ಜನರು ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಯಾದಗಿರಿಯಲ್ಲಿ ಖಾಸಗಿ ಫೈನಾನ್ಸ್​ನಿಂದ ಹಣ ಪಡೆದಿದ್ದ ಯುವಕನೊಬ್ಬ ಹಲ್ಲೆಗೀಡಾಗಿ ಮೃತಪಟ್ಟರೆ, ಕೆಲವೆಡೆ ಗ್ರಾಮಸ್ಥರು ರಾತ್ರೋರಾತ್ರಿ ಮನೆ ತೊರೆದು ಹೋಗುತ್ತಿದ್ದಾರೆ. ಪರಿಸ್ಥಿತಿ ಗಂಭೀರ ಸ್ವರೂಪ ಪಡೆದಿರುವ ನಡುವೆಯೇ ಸಿಎಂ ಸಿದ್ದರಾಮಯ್ಯ ಶನಿವಾರ ಮೈಕ್ರೋ ಫೈನಾನ್ಸ್ ಹಾವಳಿ ತಡೆ ಸಂಬಂಧ ಕರೆದಿರುವ ಸಭೆ ಮಹತ್ವ ಪಡೆದುಕೊಂಡಿದೆ.

ಮೈಕ್ರೋ ಫೈನಾನ್ಸ್ ಕಿರುಕುಳ ಹೆಚ್ಚುತ್ತಿರುವ ಕುರಿತು ವಿಜಯವಾಣಿ ಸರಣಿ ವರದಿ ಪ್ರಕಟಿಸುತ್ತಿದೆ. ಜ.20ರಂದು ‘ಮನೆಹಾಳು ಮೈಕ್ರೋ ಫೈನಾನ್ಸ್’ ಶೀರ್ಷಿಕೆಯಡಿ ಮುಖಪುಟದಲ್ಲಿ ಪ್ರಕಟವಾದ ವಿಶೇಷ ವರದಿ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ದನಿ ಎತ್ತಿದ ಬಳಿಕ ಸರ್ಕಾರ ಸಭೆ ನಡೆಸುವ ತೀರ್ವನಕ್ಕೆ ಬಂದಿದೆ. ಗ್ರಾಮೀಣ ಭಾಗದಲ್ಲಿ ‘ನೀವು ಆತ್ಮಹತ್ಯೆ ಮಾಡಿಕೊಳ್ಳುತ್ತಿರೋ ಅಥವಾ ಊರು ಬಿಟ್ಟು ಹೋಗುತ್ತಿರೋ ಅದು ನಮಗೆ ಬೇಕಿಲ್ಲ. ದುಡ್ಡು ಕಟ್ಟಿ, ಆಮೇಲೆ ನೀವೇನಾದರೂ ಮಾಡಿಕೊಳ್ಳಿ’ ಎಂದು ಮೈಕ್ರೋ ಫೈನಾನ್ಸ್ ನೌಕರರು ಸಾಲಗಾರರ ಮನೆ ಬಾಗಿಲಿಗೆ ಹೋಗಿ ಕಿರುಕುಳ ಕೊಡುತ್ತಿದ್ದಾರೆ. ಬೇಸತ್ತ ಹಲವು ಮಹಿಳೆಯರು ಊರು ತೊರೆಯುವ ತೀರ್ವನಕ್ಕೆ ಬಂದರೆ ಕೆಲವರು ಸಿಎಂ ಸಿದ್ದರಾಮಯ್ಯಗೆ ಮಾಂಗಲ್ಯ ಉಳಿಸಿ ಎಂದು ಅಂಚೆ ಮೂಲಕ ಪತ್ರ ರವಾನಿಸಿದ್ದಾರೆ.

ಬಡವರೇ ಟಾರ್ಗೆಟ್: ಬಡವರು ಮತ್ತು ಮಧ್ಯವರ್ಗದವರನ್ನೇ ಟಾರ್ಗೆಟ್ ಮಾಡಿ ಮೈಕ್ರೋ ಫೈನಾನ್ಸ್ ಹಾಗೂ ಖಾಸಗಿ ಸಂಸ್ಥೆಗಳ ಸಾಲ ದಂಧೆ ನಡೆಯುತ್ತಿದೆ. ಪ್ರತಿನಿತ್ಯ ಕಿರುಕುಳ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

ಜಿಲ್ಲಾ ಕಾವಲು ಸಮಿತಿ ರಚನೆ: ಮೈಕ್ರೋ ಫೈನಾನ್ಸ್ ಹಾವಳಿ ತಪ್ಪಿಸಲು ಜಿಲ್ಲಾ ಮಟ್ಟದಲ್ಲಿ ಕಾವಲು ಸಮಿತಿ ರಚಿಸಲು ಸೂಚಿಸಲಾಗಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ವಿಜಯಪುರದಲ್ಲಿ ತಿಳಿಸಿದ್ದಾರೆ.

ಬಾಣಂತಿ ಕುಟುಂಬಕ್ಕೆ ಮನೆ ಮರಳಿಸಿದ ಸಚಿವೆ: ಸಾಲ ತೀರಿಸಲಾಗದ ಬೆಳಗಾವಿ ತಾಲೂಕಿನ ತಾರಿಹಾಳ ಗ್ರಾಮದ ಮಾಧುರಿ ಲೋಹಾರ್ ಎಂಬ ಬಾಣಂತಿ ಹಾಗೂ ಅವರ ಕುಟುಂಬಸ್ಥರನ್ನು ಮೈಕ್ರೋ ಫೈನಾನ್ಸ್ ಸಿಬ್ಬಂದಿ ಮನೆಯಿಂದ ಹೊರ ಹಾಕಿ ಬೀಗ ಹಾಕಿದ್ದರು. ಈ ವಿಚಾರವನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗಂಭೀರವಾಗಿ ಪರಿಗಣಿಸಿ ಮೈಕ್ರೋಫೈನಾನ್ಸ್ ಪ್ರತಿನಿಧಿಗಳ ಜತೆ ಮಾತನಾಡಿದ್ದರು. ಸಾಲದ ಅಸಲನ್ನಷ್ಟೇ ತುಂಬಿಸಿಕೊಳ್ಳುವಂತೆ ಸೂಚಿಸಿ ಅದಕ್ಕೆ ಕಾಲಾವಕಾಶ ಕಲ್ಪಿಸಿಕೊಟ್ಟಿದ್ದರು. ಆ ಬಳಿಕ ಅಧಿಕಾರಿಗಳು ಶುಕ್ರವಾರ ಬೀಗ ತೆರವುಗೊಳಿಸಿ ಕುಟುಂಬಸ್ಥರನ್ನು ಮನೆಗೆ ಸೇರಿಸಿದ್ದಾರೆ.

ಇಂದು ಸಿಎಂ ನೇತೃತ್ವದ ಸಭೆ: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್, ಖಾಸಗಿ ಸಂಸ್ಥೆಗಳ ದೌರ್ಜನ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಶನಿವಾರ ಮಹತ್ವದ ಸಭೆ ಕರೆದಿದ್ದಾರೆ. ಸಭೆಯಲ್ಲಿ ಮೈಕ್ರೋಫೈನಾನ್ಸ್ ಸಂಸ್ಥೆಗಳಿಗೆ ಮೂಗುದಾರ ಹಾಕಲು ಕಾನೂನು ಕ್ರಮಗಳನ್ನು ಬಿಗಿಗೊಳಿಸುವ ಜತೆಗೆ ಜನರಲ್ಲಿ ಜಾಗೃತಿ ಮೂಡಿಸುವ ಕುರಿತು ತೀರ್ಮಾನ ಕೈಗೊಳ್ಳುವುದು ಬಹುತೇಕ ಖಚಿತವಾಗಿದೆ.

ನೊಂದ ಸಂತ್ರಸ್ತೆಯರಿಂದ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಗ್ರಾಮೀಣ ಮಹಿಳೆಯರು ಮೈಕ್ರೋಫೈನಾನ್ಸ್ ಹಾವಳಿಯಿಂದ ಬೇಸತ್ತು ತಾಳಿ ಮಾರಿ ಬಡ್ಡಿ ಪಾವತಿಸುತ್ತಿದ್ದಾರೆ. ಹೀಗಾಗಿ ಜಿಲ್ಲಾ ಮಟ್ಟದಲ್ಲಿ ಕಿರುಕುಳ ತಡೆಗೆ ಮತ್ತು ಜಾಗೃತಿ ಮೂಡಿಸಲು ಸಮಿತಿ ರಚಿಸಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದರು.

ಫೈನಾನ್ಸ್ ಸಿಬ್ಬಂದಿ ವಿರುದ್ಧ ಎಫ್​ಐಆರ್: ರಾಣೆಬೆನ್ನೂರಿನಲ್ಲಿ ಸಾಲದ ಕಂತು ತುಂಬುವ ವಿಚಾರದಲ್ಲಿ ಕಿರುಕುಳ ನೀಡಿದ ಮೈಕ್ರೋ ಫೈನಾನ್ಸ್​ನ ಸಿಬ್ಬಂದಿ ವಿರುದ್ಧ ಮಹಿಳೆಯೊಬ್ಬರು ಹಲಗೇರಿ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ದೂರು ದಾಖಲಿಸಿದ್ದಾರೆ. ರಾಣೆಬೆನ್ನೂರಿನ ಸಮಸ್ತಾ ಫೈನಾನ್ಸ್​ನ ವ್ಯವಸ್ಥಾಪಕ ಹಾಗೂ 12 ಜನರ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಬೆಳಗಾವಿ ಜಿಲ್ಲೆ ಮೊದಲು: ಬೆಳಗಾವಿ ಜಿಲ್ಲೆಯಲ್ಲಿ 2,245 ಫೈನಾನ್ಸ್​ಗಳು ಇದ್ದು, 8.50 ಲಕ್ಷ ಜನರು ಸಾಲ ಪಡೆದುಕೊಂಡಿದ್ದಾರೆ. ರಾಜ್ಯದಲ್ಲಿ ಅತಿ ಹೆಚ್ಚು ಫೈನಾನ್ಸ್ ನೀಡುವವರು ಮತ್ತು ಸಾಲ ವಿತರಣೆ ಆಗಿರುವುದು ಬೆಳಗಾವಿ ಜಿಲ್ಲೆಯಲ್ಲಿ ಎಂದು ಜಿಲ್ಲಾ ಎಸ್​ಪಿ ಡಾ. ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.

ರಾಜ್ಯದ ಎಲ್ಲೆಲ್ಲಿ ದೌರ್ಜನ್ಯ ಬೆಳಕಿಗೆ?

  1. ಯಾದಗಿರಿಯ ನಿವಾಸಿ ಖಾಸಿಂ ಎಂಬಾತ ಮೀಟರ್ ಬಡ್ಡಿ ದಂಧೆಕೋರ ಯಾಸಿನ್​ಗೆ 35 ಸಾವಿರ ರೂ. ಸಾಲ ತೀರಿಸದ್ದರಿಂದ ಹಲ್ಲೆಗೀಡಾಗಿ ಮೃತಪಟ್ಟಿದ್ದಾನೆ.
  2. ಹಾವೇರಿ ಜಿಲ್ಲೆ ಬಂಕಾಪುರ ಪಟ್ಟಣದ ಕೊಟ್ಟಿಗೇರಿಯ ನಾಗಪ್ಪ ಪುಟ್ಟಪ್ಪ ಗುಂಜಾಳ (36) 15 ಲಕ್ಷ ರೂ. ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಫೈನಾನ್ಸ್ ಸಿಬ್ಬಂದಿ ಕಿರುಕುಳವೇ ಆತ್ಮಹತ್ಯೆಗೆ ಕಾರಣ ಎಂದು ಹೇಳಲಾಗಿದೆ.
  3. ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ರಟ್ಟಿಹಳ್ಳಿಯ ಬಡ ಕುಟುಂಬವೊಂದು 2018ರಲ್ಲಿ 28 ಸಾವಿರ ರೂ. ಸಾಲ ಪಡೆದು ಕಂತುಗಳ ಮೂಲಕ ಸಾಲ ತೀರಿಸಿದೆ. ಇದೀಗ ಸಾಲ 52 ಸಾವಿರ ರೂ. ಬಾಕಿಯಿದೆ, ಸಾಲ ಕಟ್ಟಿ ಎಂದು ಮೈಕ್ರೋ ಫೈನಾನ್ಸ್​ನವರು ಕಿರುಕುಳ ನೀಡುತ್ತಿದ್ದಾರೆಂದು ಸವಿತಾ ರುದ್ರೇಶ ನಾಯಕ ದಂಪತಿ ಆರೋಪಿಸಿದ್ದಾರೆ.
  4. ಹಾವೇರಿಯ ರಾಣೆಬೆನ್ನೂರಿನ ರೂಪಾ ಮಂಜುನಾಥ ಎಂಬಾಕೆ 16 ಜನರ ಹೆಸರಿನಲ್ಲಿ 13.75 ಲಕ್ಷ ರೂ. ಸಾಲ ಪಡೆದು ಪರಾರಿಯಾಗಿದ್ದು, ಇದೀಗ ಮಹಿಳೆಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕುರಿತು ಶಹರ ಠಾಣೆಯಲ್ಲಿ ದೂರು ದಾಖಲಾಗಿದೆ.
  5. ರಾಮನಗರ ಜಿಲ್ಲೆಯ ಮಾಗಡಿಯ ಮಹಿಳೆಯೊಬ್ಬರಿಗೆ 2.5 ಲಕ್ಷ ರೂ. ಸಾಲ ನೀಡಿದ್ದ ವ್ಯಕ್ತಿ ಸಾಲ ತೀರಿಸಲಾಗದ್ದಕ್ಕೆ ಕಿಡ್ನಿ ಮಾರಿ ಹಣ ನೀಡುವಂತೆ ಧಮಕಿ ಹಾಕಿದ್ದಾನೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
  6. ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್​ನಿಂದ ಕಿರುಕುಳವಾಗುತ್ತಿರುವ ಬಗ್ಗೆ ಸಾಕಷ್ಟು ದೂರುಗಳಂತೂ ಬಂದಿವೆ. ಈ ನಿಟ್ಟಿನಲ್ಲಿ ಚರ್ಚೆ ನಡೆಸಲು ಮುಖ್ಯಮಂತ್ರಿ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಯಾವ ರೀತಿಯ ಪ್ರಕರಣಗಳು ದಾಖಲಾಗಿವೆ? ಎಷ್ಟು ಕಿರುಕುಳ ಪ್ರಕರಣಗಳಿವೆ? ಕಾನೂನು ಬದಲಾವಣೆ ಯಾವ ರೀತಿ ಆಗಬೇಕು ಎಂಬ ವಿಚಾರಗಳ ಬಗ್ಗೆ ರ್ಚಚಿಸಲಾಗುತ್ತದೆ.

|ಡಾ.ಜಿ.ಪರಮೇಶ್ವರ, ಗೃಹಸಚಿವ

ಫೈನಾನ್ಸ್​ಗಳಿಂದ ಸಾಲ ಸೌಲಭ್ಯ ನೀಡುವ ಮುನ್ನ ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಬ್ಯಾಂಕ್, ಸಹಕಾರಿ ಇಲಾಖೆ, ಜಿಲ್ಲಾಡಳಿತ ಮಾಡಬೇಕು. ಮಧ್ಯವರ್ತಿಗಳು, ಮೀಟರ್ ಬಡ್ಡಿ ದಂಧೆ ಮಾಡುವವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಿ.

|ಸತೀಶ ಜಾರಕಿಹೊಳಿ, ಲೋಕೋಪಯೋಗಿ ಸಚಿವ

ಮೈಕ್ರೋ ಫೈನಾನ್ಸ್ ಹಾವಳಿಯಿಂದ ಜನರು ಹಳ್ಳಿ ಬಿಟ್ಟು ಹೋಗುತ್ತಿದ್ದಾರೆ. ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. 2018ರಲ್ಲಿ ಜಾರಿಗೆ ತಂದಿದ್ದ ಋಣಮುಕ್ತ ಬಿಲ್ ಏನಾಗಿದೆ? ಕಾಂಗ್ರೆಸ್ ಕೇವಲ ಅಧಿಕಾರಕ್ಕಾಗಿ ಗá-ದ್ದಾಟ ನಡೆಸುತ್ತಿದೆ. ಗ್ಯಾರಂಟಿ ಯೋಜನೆ ಏನಾಯಿತು..?

|ಎಚ್.ಡಿ.ಕá-ಮಾರಸ್ವಾಮಿ, ಕೇಂದ್ರ ಸಚಿವ

ಮೈಕ್ರೋ ಫೈನಾನ್ಸ್ ಕಿರುಕುಳದ ಸಂಬಂಧ ಕಠಿಣ ಕಾನೂನು ರೂಪಿಸುವ ಚಿಂತನೆ ಆಗಿದೆ. ಬಡ್ಡಿ, ಸುಸ್ತಿಬಡ್ಡಿ ಹಾಕಿ ಸಾಲಗಾರರಿಗೆ ತೊಂದರೆ ಕೊಟ್ಟರೆ ಕ್ರಮ ಕೈಗೊಳ್ಳುತ್ತೇವೆ. ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

| ಎನ್. ಚಲುವರಾಯಸ್ವಾಮಿ, ಕೃಷಿ ಸಚಿವ