ನ್ಯೂಸ್

ಮೆಟ್ರೋ ಪ್ರಯಾಣ ದರ ಏರಿಕೆ; ಜನಸಾಮಾನ್ಯರ ಗಾಯದ ಮೇಲೆ ಬರೆ ಎಳೆದ ಸರ್ಕಾರ: ಆರ್​.ಅಶೋಕ ಕಿಡಿ | Metro Fare Hike

Metro Fare Hike: ನಮ್ಮ ಮೆಟ್ರೋ ಪ್ರಯಾಣ ದರವನ್ನು ಏಕಾಏಕಿ ಶೇ.50ರಷ್ಟು ಏರಿಕೆ ಮಾಡುವ ಮೂಲಕ ಸರ್ಕಾರ ಜನಸಾಮಾನ್ಯರ ಗಾಯದ ಮೇಲೆ ಬರೆ ಎಳೆದಿದೆ ಎಂದು ವಿಪಕ್ಷ ನಾಯಕ ಆರ್​.ಅಶೋಕ ಕಿಡಿ ಕಾಡಿದ್ದಾರೆ.

ಈ ಕುರಿತು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿರುವ ಅರ್.ಅಶೋಕ್​, ಪೆಟ್ರೋಲ್, ಡೀಸೆಲ್, ಹಾಲು, ಬಸ್ಸು ದರ ಏರಿಕೆಯ ಬರೆಯಿಂದ ಈಗಾಗಲೇ ಹೈರಾಣಗಿರುವ ರಾಜ್ಯದ ಜನತೆಗೆ ಕಾಂಗ್ರೆಸ್ ಸರ್ಕಾರ ಬೆಂಗಳೂರು ಮೆಟ್ರೋ ದರವನ್ನ ಏಕಾಏಕಿ 50% ಏರಿಸುವ ಮೂಲಕ ಜನಸಾಮಾನ್ಯರ ಗಾಯದ ಮೇಲೆ ಮತ್ತೊಂದು ಬರೆ ಎಳೆದಿದೆ ಎಂದು ಸರ್ಕಾರವನ್ನು ಟೀಕಿಸಿದ್ದಾರೆ.

ಮೆಟ್ರೋ ದರ 50% ಏರಿಕೆ ಮಾಡಿರುವುದರಿಂದ ಅನೇಕ ಜನಸಾಮಾನ್ಯರಿಗೆ ಈಗ ಮೆಟ್ರೋ ಸಂಚಾರ ಕೈಗೆಟುಕದ ಪರಿಸ್ಥಿತಿ ಎದುರಾಗಿದ್ದು. ಮೆಟ್ರೋ ಪ್ರಯಾಣಕ್ಕಿಂತ ಸ್ವಂತ ಸ್ಕೂಟರ್, ಬೈಕಿನ ಪ್ರಯಾಣ ಜೇಬಿಗೆ ಹಿತ ಎನ್ನುವಂತಾಗಿದೆ ಎಂದಿದ್ದಾರೆ.

ಸಾರ್ವಜನಿಕ ಸಾರಿಗೆಯನ್ನು ಪ್ರೋತ್ಸಾಹಿಸಿ, ಬೆಂಗಳೂರಿನ ಟ್ರಾಫಿಕ್ ಸಮಸ್ಯೆ, ಪರಿಸರ ಮಾಲಿನ್ಯಕ್ಕೆ ಪರಿಹಾರ ಕಂಡುಕೊಳ್ಳಬೇಕಾದ ಸರ್ಕಾರ, ಜನರನ್ನು ಮೆಟ್ರೋದಿಂದ ವಿಮುಖರಾಗುವಂತೆ ಮಾಡುತ್ತಿದೆ.

ಈ ಕೂಡಲೇ ಮೆಟ್ರೋ ದರ ಏರಿಕೆಯ ನಿರ್ಧಾರವನ್ನ ಹಿಂಪಡೆಯಬೇಕು ಎಂದು ವಿಪಕ್ಷ ನಾಯಕ ಸರ್ಕಾರವನ್ನು ಒತ್ತಾಯಿಸಿದ್ದಾರೆ.