ನ್ಯೂಸ್

ಪುರುಷರ ಪ್ರಯಾಣ ಪ್ರಯಾಸ, ಮೀಸಲು ಆಸನ ಕೇಳದ ಸ್ಥಿತಿ!

| ರವಿ ಗೋಸಾವಿ ಬೆಳಗಾವಿ

ಶೂನ್ಯ ದರ ಟಿಕೆಟ್ ವಿತರಿಸುವ ಎಲ್ಲ ಬಸ್​ಗಳು ದಿನವಿಡೀ ಮಹಿಳಾ ಪ್ರಯಾಣಿಕರಿಂದಲೇ ತುಂಬಿ ತುಳುಕುತ್ತಿದ್ದು, ಕುಳಿತುಕೊಳ್ಳಲು ಆಸನಗಳೇ ಸಿಗದ ಕಾರಣ ಪುರುಷರ ಪ್ರಯಾಣ ಪ್ರಯಾಸವಾಗಿ ಮಾರ್ಪಟ್ಟಿದೆ.

ಮಹಿಳಾ ಪ್ರಯಾಣಿಕರ ಸಂಖ್ಯೆ ದಿಢೀರ್ ಹೆಚ್ಚಳವಾಗುವುದನ್ನು ನಿರೀಕ್ಷಿಸಿದ್ದ ಸರ್ಕಾರವು ಮಹಿಳೆಯರ ಉಚಿತ ಪ್ರಯಾಣದ ಬಸ್​ಗಳಲ್ಲಿ ಪುರುಷರಿಗೆ ಶೇ.50 ಆಸನಗಳ ಮೀಸಲು ಘೊಷಿಸಿದೆ. ಆದರೆ, ಸುಲಭವಾಗಿ ಮೀಸಲು ಸೀಟು ಬಿಟ್ಟುಕೊಡದ ಮಹಿಳೆಯರಿಂದಾಗಿ ಪ್ರಯಾಣಿಕರ ನಡುವೆ ಪ್ರತಿ ಬಸ್​ನಲ್ಲೂ ವಾಗ್ವಾದ ನಡೆಯುತ್ತಿದೆ.

ಈ ಕುರಿತು ‘ವಿಜಯವಾಣಿ’ ಜತೆ ಪ್ರಯಾಣಿಕ ರುದ್ರಗೌಡ ಪಾಟೀಲ ಮಾತನಾಡಿ, ಈವರೆಗೂ ಮಹಿಳೆಯರಿಗೆ ಮೀಸಲಿದ್ದ ಆಸನಗಳಲ್ಲಿ ಪುರುಷರು ಕುಳಿತಿದ್ದರೆ ನಿಷ್ಠುರವಾಗಿ ಸೀಟು ಬಿಟ್ಟು ಕೊಡಿ ಎಂದು ಕೇಳುತ್ತಿದ್ದರು. ಈಗ ಸೀಟು ಬಿಟ್ಟುಕೊಡಿ ಎಂದು ಸ್ತ್ರೀಯರನ್ನು ಒತ್ತಾಯಿಸಲು ಮುಜುಗರವಾಗುತ್ತದೆ. ಸೀಟಿಗಾಗಿ ಧ್ವನಿ ಎತ್ತಿದರೆ ಈ ಸೀಟು ‘ಪುರುಷರಿಗಾಗಿ’ ಮೀಸಲಿದೆ ಎಂದು ಹೇಳಿಕೊಳ್ಳಲು ಯಾವುದೇ ಸೀಟಿನ ಮೇಲೂ ಮೀಸಲು ಎಂದು ನಮೂದಿಸಿಲ್ಲ ಎಂದು ಮಹಿಳೆಯರು ವಾದಿಸುತ್ತಾರೆ ಎಂದು ಗೋಳು ತೋಡಿಕೊಂಡರು.

ಚಿಲ್ಲರೆ ಸರಿದೂಗಿಸುವುದೇ ಸವಾಲು: ಬಸ್​ಗಳಲ್ಲಿ ಉಚಿತ ಟಿಕೆಟ್​ಗಳೇ ಹೆಚ್ಚಾಗಿದ್ದರಿಂದಾಗಿ ಟಿಕೆಟ್ ಖರೀದಿಸುವ ಪುರುಷ ಪ್ರಯಾಣಿಕರಿಗೆ ಚಿಲ್ಲರೆ ಸರಿದೂಗಿಸುವುದೇ ನಿರ್ವಾಹಕರಿಗೆ ಸಮಸ್ಯೆಯಾಗಿದೆ.

ಪುರುಷ ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆ ಕುರಿತು ನಿರ್ವಾಹಕರು ಗಮನಕ್ಕೆ ತಂದಿದ್ದಾರೆ. ವಾಹನದ ಯಾವೆಲ್ಲ ಭಾಗದಲ್ಲಿ ಪುರುಷರಿಗಾಗಿ ಮೀಸಲಿಡಬೇಕು ಎನ್ನುವುದರ ಬಗ್ಗೆ ಚರ್ಚೆ ನಡೆಯುತ್ತದೆ. ಸರ್ಕಾರದಿಂದ ಸ್ಪಷ್ಟ ಸೂಚನೆ ಬಂದ ತಕ್ಷಣ ಮೀಸಲು ನಮೂದಿಸಲಾಗುವುದು. | ಗಣೇಶ ರಾಥೋಡ, ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿ