ನ್ಯೂಸ್

ತನ್ನದೇ ಶ್ರದ್ಧಾಂಜಲಿ ಪೋಸ್ಟರ್​ಗಳನ್ನು ನೋಡಿ ಕಕ್ಕಾಬಿಕ್ಕಿಯಾದ ಮಹಿಳೆ; ಪತಿಯ ಕುಟುಂಬದ ವಿರುದ್ಧ ದೂರು

ಪೆರಂಬಲೂರ್​: 23 ವರ್ಷದ ಯುವತಿ ತನ್ನದೇ ಫೋಟೋ ಇರುವ ಶ್ರದ್ಧಾಂಜಲಿ ಪೋಸ್ಟರ್​ಗಳನ್ನು ನೋಡಿ ಕಕ್ಕಾಬಿಕ್ಕಿಯಾದ ಘಟನೆ ತಮಿಳುನಾಡಿನ ಪೆರಂಬಲೂರಿನಲ್ಲಿ ನಡೆದಿದೆ.

ತನ್ನ ಫೋಟೋ ಹಾಕಿ ಶ್ರದ್ಧಾಂಜಲಿ ಕೋರಿದ ಪೋಸ್ಟರ್​ಗಳನ್ನು ಅಂಟಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಕೆ ಪೊಲೀಸರಿಗೆ ದೂರು ನೀಡಿದ್ದಾರೆ.

ಪೆರಂಬಲೂರ್​ ಜಿಲ್ಲೆಯ ಎಲಂಬಲೂರು ರಸ್ತೆಯಲ್ಲಿರುವ ಮೆಟ್ಟುಥೇರು ನಿವಾಸಿ ರೋಶನಿಗೆ ಈ ಕೆಟ್ಟ ಅನುಭವ ಆಗಿದೆ. ಪದವೀಧರೆಯಾಗಿರುವ ಇವರು ಸೇಲಂ ಜಿಲ್ಲೆಯ ಕಟ್ಟುಕೊಟ್ಟೈಗಿ ಗ್ರಾಮದ ವೀರರಾಘವನ್​ ಎಂಬುವನನ್ನು ವಿವಾಹವಾಗಿದ್ದು ದಂಪತಿ ಹೊಸುರ್​​ನಲ್ಲಿ ವಾಸವಾಗಿದ್ದರು. ರೋಶಿನಿ ಸದ್ಯ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.

ಆದರೆ ವೀರರಾಘವನ್​ ಮತ್ತು ರೋಶಿನಿ ಕುಟುಂಬದ ಮಧ್ಯೆ ಕೆಲವು ವಿಚಾರಕ್ಕೆ ಜಗಳ ನಡೆದಿತ್ತು. ಇದರಿಂದ ಮನನೊಂದಿದ್ದ ವೀರರಾಘವನ್​ ಮಾರ್ಚ್​​​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅದಾದ ಮೇಲೆ ರೋಶಿನಿ ತನ್ನ ತಂದೆ-ತಾಯಿಯೊಂದಿಗೆ ತವರು ಮನೆಯಲ್ಲೇ ನೆಲೆಸಿದ್ದರು. ಇದನ್ನೂ ಓದಿ: ರವಿಕುಮಾರ್‌ಗೆ ಕರೊನಾ ಸೋಂಕು; ಶಿರಾ ಬಿಜೆಪಿ ಪ್ರಚಾರಕ್ಕೆ ಹಿನ್ನಡೆ

ಆದರೆ ಶುಕ್ರವಾರ ಬೆಳಗ್ಗೆ ಒಮ್ಮೆಲೇ ಪೆರಂಬೂರು ಜಿಲ್ಲೆಯ ಹಲವು ಕಡೆಗಳಲ್ಲಿ ರೋಶಿನಿಗೆ ಶ್ರದ್ಧಾಂಜಲಿ ಸಲ್ಲಿಸಲಾದ ಪೋಸ್ಟರ್​​ಗಳು ಕಂಡುಬಂದವು. ರೋಶಿನಿ ಅಕ್ಟೋಬರ್​ 7ರಂದು ಮೃತಪಟ್ಟಿದ್ದಾಳೆ ಎಂದು ಪ್ರಕಟಿಸಿ, ಫೋಟೋವನ್ನೂ ಹಾಕಲಾಗಿತ್ತು. ಅದನ್ನು ನೋಡಿದ ರೋಶಿನಿ ಸಂಬಂಧಿಕರು ಕರೆ ಮಾಡಿ ವಿಚಾರಿಸಿದರು. ಅಷ್ಟೇ ಅಲ್ಲ ಅನೇಕರು ಸಾಂತ್ವನವನ್ನೂ ಹೇಳಿದರು. ಇದೆಲ್ಲದರಿಂದ ಕಂಗಾಲಾದ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಕೃತ್ಯದ ಹಿಂದೆ ತನ್ನ ಮೃತ ಪತಿಯ ಕುಟುಂಬದವರ ಕೈವಾಡ ಇದೆ ಎಂದು ಆರೋಪಿಸಿರುವ ರೋಶಿನಿ, ಅವರು ನನ್ನ ಪತಿ ತೀರಿಕೊಂಡ ಬಳಿಕ ನನ್ನನ್ನು ಮನೆಯಿಂದ ಓಡಿಸಿದ್ದಾರೆ. ಇದೀಗ ಹೀಗೆ ಮಾಡಿ ಅವಮಾನಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಟಿಟಿಡಿಯ ಹೊಸ ಎಕ್ಸಿಕ್ಯೂಟಿವ್ ಆಫೀಸರ್ ಆಗಿ ಅಧಿಕಾರ ಸ್ವೀಕರಿಸಿದ ಜವಾಹರ ರೆಡ್ಡಿ

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)