ತಿರುವನಂತಪುರ: ಅತ್ಯಾಚಾರ ಪ್ರಕರಣದಲ್ಲಿ ಬಂಧನವಾಗಿ, ಕೆಲ ದಿನಗಳ ಕಾಲ ಜೈಲು ವಾಸ ಅನುಭವಿಸಿ, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಕೇರಳದ ಇನ್ಸ್ಟಾಗ್ರಾಂ ಸೆಲೆಬ್ರಿಟಿ ಹಾಗೂ ರೀಲ್ಸ್ ಸ್ಟಾರ್ ವಿನೀತ್, ಇದೀಗ ಮತ್ತೊಮ್ಮೆ ಬಂಧನಕ್ಕೊಳಗಾಗಿದ್ದಾನೆ.
ಯುವತಿಯೊಬ್ಬಳು ನೀಡಿದ ದೂರಿನ ಆಧಾರದ ಮೇಲೆ ವಿನೀತ್ನನ್ನು ಬಂಧಿಸಲಾಗಿದೆ. ಚಿನ್ನಾಭರಣಗಳನ್ನು ಪಡೆದುಕೊಂಡು ದೈಹಿಕ ದೌರ್ಜನ್ಯ ಎಸಗಿದ್ದಾನೆ ಎಂದು ಸಂತ್ರಸ್ತೆ ಆರೋಪ ಮಾಡಿದ್ದಾಳೆ. ಈ ಘಟನೆ ಶನಿವಾರ ಸಂಜೆ ನಡೆದಿದೆ.
ಇನ್ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದ ತಿರುವನಂತಪುರಂ ಮೂಲದ ಸಂತ್ರಸ್ತೆಯ ಬಳಿ ಆರೋಪಿ ವಿನೀತ್, ಆರು ಸವರನ್ ಚಿನ್ನವನ್ನು ಪಡೆದುಕೊಂಡಿದ್ದ. ಅದನ್ನು ಹಿಂತಿರುಗಿಸುವಂತೆ ಸಂತ್ರಸ್ತೆ ಒತ್ತಾಯ ಮಾಡಿದ್ದಳು. ಆಕೆಗೆ ಕಾಲ್ ಮಾಡಿ, ತಾನಿರುವಲ್ಲಿಗೆ ಬಂದರೆ ಆಭರಣಗಳನ್ನು ಮರಳಿಸುವುದಾಗಿ ಹೇಳಿದ್ದ.
ವಿನೀತ್ನ ಮಾತು ನಂಬಿದ ಸಂತ್ರಸ್ತೆ ಕಿಲಿಮನೂರಿಗೆ ತೆರಳಿದಳು. ಅಲ್ಲಿಗೆ ಬಂದ ವಿನೀತ್, ಆಕೆಯನ್ನು ಬೈಕ್ನಲ್ಲಿ ಕೂರಿಸಿಕೊಂಡು, ಮನೆಗೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾನೆ. ಇದಾದ ಬಳಿಕ ಸಂತ್ರಸ್ತೆ ಕಿಲಿಮನೂರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಇದೀಗ ವಿನೀತ್ನನ್ನು ಪೊಲೀಸರು ಮತ್ತೆ ಬಂಧಿಸಿದ್ದಾರೆ.
ಹಾಡಹಗಲಲ್ಲೇ ಪೆಟ್ರೋಲ್ ಪಂಪ್ ಮ್ಯಾನೇಜರ್ನಿಂದ ಬರೋಬ್ಬರಿ 2.5 ಲಕ್ಷ ರೂ. ಸುಲಿಗೆ ಮಾಡಿರುವ ಆರೋಪದ ಮೇಲೆ ವಿನೀತ್ (26) ಮತ್ತು ಆತನ ಸ್ನೇಹಿತ ಜೀತು (22) ಇಬ್ಬರನ್ನು ಕೇರಳ ಪೊಲೀಸರು ಕಳೆದ ಏಪ್ರಿಲ್ 12ರಂದು ಬಂಧಿಸಿದ್ದರು. ಮಾರ್ಚ್ 23 ರಂದು ಕನಿಯಾಪುರಂನಲ್ಲಿ ಕಳ್ಳತನ ನಡೆದಿತ್ತು. ನಿಫಿ ಫ್ಯೂಯೆಲ್ಸ್ ಮ್ಯಾನೇಜರ್ ಬ್ಯಾಂಕ್‌ಗೆ ಡೆಪಾಸಿಟ್ ಇಡಬೇಕಾದ ಮೊತ್ತದೊಂದಿಗೆ ಪಲ್ಲಿಪುರಂ ಶಾಖೆಗೆ ಬರುವಾಗ ವಿನೀತ್ ಮತ್ತು ಜೀತು ಈ ಕೃತ್ಯ ಎಸಗಿದ್ದಾರೆ. ಕಳುವು ಮಾಡಿದ್ದ ದ್ವಿಚಕ್ರ ವಾಹನದಲ್ಲಿ ವಿನೀತ್ ಮತ್ತು ಆತನ ಸಹಚರರು ಹಣ ದೋಚಿದ್ದರು. ದ್ವಿಚಕ್ರ ವಾಹನದ ನಂಬರ್ ಪ್ಲೇಟ್ ಬದಲಾಯಿಸಿರುವುದು ಪತ್ತೆಯಾಗಿತ್ತು. ಸಿಸಿಟಿವಿ ದೃಶ್ಯಾವಳಿ ಆಧರಿಸಿ ತನಿಖೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದರು. ಸುಲಿಗೆ ಮಾಡಿದ ಬಳಿಕ ಜಿಲ್ಲೆ ಬಿಟ್ಟು ಹಲವೆಡೆ ಲಾಡ್ಜ್ಗಳಲ್ಲಿ ಆರೋಪಿಗಳು ತಂಗಿದ್ದರು. ಪೊಲೀಸರು ಆರೋಪಿಯನ್ನು ತ್ರಿಶೂರ್‌ನ ಲಾಡ್ಜ್‌ನಲ್ಲಿ ಬಂಧಿಸಿದ್ದರು. ಬಳಿಕ ಈ ಪ್ರಕರಣ ಜಾಮೀನಿನ ಮೇಲೆ ವಿನೀತ್ ಬಿಡುಗಡೆಯಾಗಿದ್ದ.
ವಿನೀತ್ ಇನ್ಸ್ಟಾಗ್ರಾಂ ರೀಲ್ಸ್ ಮೂಲಕವೇ ಕೇರಳದಲ್ಲಿ ಖ್ಯಾತಿ ಪಡೆದುಕೊಂಡಿದ್ದಾನೆ. ವಿಡಿಯೋ ಮೂಲಕ ಹುಡುಗಿಯರನ್ನು ಮರಳು ಮಾಡುವುದೇ ಈತನ ಕೆಲಸ. ಕೇರಳದ ಥಂಪನೂರ್ ಪೊಲೀಸರು ಈತನನ್ನು ಕಳೆದ ವರ್ಷ ಆಗಸ್ಟ್ನಲ್ಲಿ ಬಂಧಿಸಿದ್ದರು. ನಾನು ಪೊಲೀಸ್ ಕೆಲಸಕ್ಕೆ ರಾಜೀನಾಮೆ ನೀಡಿ, ಚಾನೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಸುಳ್ಳು ಹೇಳಿ ನಂಬಿಸುತ್ತಿದ್ದ. ಆದರೆ, ಆತ ಓದಿರುವುದು ದ್ವಿತೀಯ ಪಿಯುಸಿ ಎಂಬುದು ಪೊಲೀಸ್ ತನಿಖೆಯಲ್ಲಿ ಬಯಲಾಯಿತು. ರೀಲ್ಸ್ ಮಾಡುತ್ತಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯನಾಗಿರುತ್ತಿದ್ದ ವಿನೀತ್, ಜಾಲತಾಣ ಮೂಲಕ ಹುಡುಗಿಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ. ಪರಿಚಯ ಪ್ರೇಮಕ್ಕೆ ತಿರುಗಿದಾಗ ಹುಡಗಿಯರ ಮೇಲೆ ಅನುಮಾನ ಪಡುತ್ತಿದ್ದ. ಬೇರೊಬ್ಬರ ಜೊತೆ ನಿನಗೆ ಸಂಬಂಧ ಇದೆ ಎಂದು ಕತೆ ಕಟ್ಟುತ್ತಿದ್ದ. ಆತನನ್ನು ನಂಬಿಸಲು ಆತನ ಬಲೆಗೆ ಬಿದ್ದ ಹುಡುಗಿಯರು ತಮ್ಮ ಈಮೇಲ್ ಮತ್ತು ಇನ್ಸ್ಟಾಗ್ರಾಂ ಐಡಿ ಹಾಗೂ ಪಾಸ್ವರ್ಡ್ ನೀಡುತ್ತಿದ್ದರು. ನಂತರ ಹುಡುಗಿಯರು ಇನ್ಸ್ಟಾಗ್ರಾಂ ಖಾತೆಗಳನ್ನು ವಿನೀತ್ ನಿರ್ವಹಿಸುತ್ತಿದ್ದ. ತನ್ನ ಸೂಚನೆಗಳನ್ನು ಅನುಸರಿಸಲು ಹುಡುಗಿಯರನ್ನು ಒತ್ತಾಯಿಸುತ್ತಿದ್ದ.
ಹೊಸ ಕಾರು ಖರೀದಿ ಮಾಡಿದ್ದೇನೆ. ಒಂದು ಡ್ರೈವ್ ಹೋಗೋಣ ನನಗೆ ಕಂಪನಿ ಕೊಡಿ ಎಂದು ಆಹ್ವಾನಿಸುತ್ತಿದ್ದ. ಆತನ ಆಹ್ವಾನವನ್ನು ನಂಬಿ ಆತನೊಂದಿಗೆ ಬರುತ್ತಿದ್ದ ವಿದ್ಯಾರ್ಥಿನಿಯರನ್ನು ತಿರುವನಂತಪುರದಲ್ಲಿರುವ ಲಾಡ್ಜ್ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸುಗುತ್ತಿದ್ದ. ವಿದ್ಯಾರ್ಥಿನಿಯೊಬ್ಬಳು ನಡೆದ ಘಟನೆಯನ್ನು ತನ್ನ ಸ್ನೇಹಿತೆಯೊಬ್ಬಳಿಗೆ ಹೇಳಿದ ಬಳಿಕ ಆಕೆ ದೂರು ದಾಖಲಿಸಿದಳು. ತಕ್ಷಣ ತನಿಖೆ ಆರಂಭಿಸಿದ ಪೊಲೀಸರು ವಿನೀತ್ನನ್ನು ಬಂಧಿಸಿದ್ದರು. ಬಳಿಕ ಈ ಪ್ರಕರಣದಲ್ಲಿ ಜಾಮೀನಿನ ಮೇಲೆ ಆತ ಹೊರಬಂದಿದ್ದ.
ಅಂದಹಾಗೆ ವಿನೀತ್ ಸಾಮಾಜಿಕ ಜಾಲತಾಣದಲ್ಲಿ ಮೀಸೆಕಾರ ವಿನೀತ್ ಎಂದು ಖ್ಯಾತಿ ಪಡೆದಿದ್ದಾನೆ. ಬಂಧಿತ ವಿನೀತ್ ವೆಲಾಲ್ಲೂರ್ ನಿವಾಸಿ. ವಿನೀತ್ ಮೇಲೆ ಸುಮಾರು 10 ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಿವೆ. (ಏಜೆನ್ಸೀಸ್)