ನ್ಯೂಸ್

ಬೆಟ್​ ಕಟ್ಟಿ ಲಾಫಿಂಗ್​ ಗ್ಯಾಸ್​ ಬಾಟಲ್​ ನುಂಗಿದ ಯುವಕ: ವೈದ್ಯರ ಬಳಿ ಹೋದವನಿಗೆ ಕಾದಿತ್ತು ಬಿಗ್​ ಶಾಕ್!​

ಲಂಡನ್​: ಸ್ನೇಹಿತರ ಬಳಿ ಬೆಟ್ಟಿಂಗ್​​ ಕಟ್ಟಿ ಲಾಫಿಂಗ್​ ಗ್ಯಾಸ್​ (ನಗುವ ಅನಿಲ) ಬಾಟಲ್​ ನುಂಗಿದ ಯುವಕ ಪ್ರಾಣ ಭೀತಿಯಿಂದ ಒದ್ದಾಡಿದ ಘಟನೆ ಲಂಡನ್​ನಲ್ಲಿ ನಡೆದಿದ್ದು, ಒಂದು ವೇಳೆ ಹೊಟ್ಟೆಯಲ್ಲಿ ಬಾಟಲ್​ ಸಡಿಲಗೊಂಡರೆ ಜೀವ ಹೋಗುವ ಸಾಧ್ಯತೆ ಇತ್ತೆಂದು ವೈದ್ಯರು ಎಚ್ಚರಿಕೆ ನೀಡಿದ್ದರು.

ಜಾನ್​ ಫಿನ್ಸನ್​ ಎಂಬಾತ ಪಾರ್ಟಿಯೊಂದರಲ್ಲಿ ಭಾಗವಹಿಸಿದ್ದ. ಈ ಸಂದರ್ಭದಲ್ಲಿ ತನ್ನ ಸ್ನೇಹಿತರೊಂದಿಗೆ ಬೆಟ್​ ಕಟ್ಟಿ ಪೂರ್ತಿ ಬಾಟಲ್​ ನುಂಗಿದ್ದಾನೆ. ಇದಾದ ಬೆನ್ನಲ್ಲೇ ಆತನ ಮತ್ತೊಬ್ಬ ಸ್ನೇಹಿತ, ನಿನ್ನ ಆರೋಗ್ಯಕ್ಕೆ ಕುತ್ತಾಗುವ ಸಾಧ್ಯತೆ ಇದೆ ವೈದ್ಯರ ಬಳಿ ಪರೀಕ್ಷಿಸು ಎಂದು ಎಚ್ಚರಿಸಿದ ಬೆನ್ನಲ್ಲೇ 22 ವರ್ಷದ ಜಾನ್​, ನಡೆದ ಘಟನೆಯನ್ನು ವೈದ್ಯರ ಬಳಿ ವಿವರಿಸಿದ್ದಾನೆ.

ಇದಾದ ಬಳಿಕ ವೈದ್ಯರು ಎಕ್ಸ್​ರೇ ತೆಗೆದು ನೋಡಿದಾಗ ಬಾಟಲ್​ ಯುವಕನ ಹಟ್ಟೆಯ ತಳಭಾಗದಲ್ಲಿ ಸೇರಿರುವುದು ಪತ್ತೆಯಾಗುತ್ತದೆ. ಒಂದು ವೇಳೆ ಬಾಟಲ್​ನಲ್ಲಿನ ಅನಿಲವು ಸೋರಿಕೆಯಾದರೆ ಜೀವಕ್ಕೆ ತೊಂದರೆ ಎದುರಾಗುವ ಸಾಧ್ಯತೆ ಇದೆ ಎಂಬುದನ್ನು ಅರಿತ ವೈದ್ಯರು, ಶ್ವಾಸನಾಳದ ತಜ್ಞರಿಗೆ ಕರೆ ಮಾಡುತ್ತಾರೆ. ಆಪರೇಷನ್​ ಮಾಡುವವರೆಗೂ ಏನನ್ನು ತಿನ್ನಬಾರದು ಹಾಗೂ ಕುಡಿಯಬಾರದು ಎಂದು ವೈದ್ಯರು ಎಚ್ಚರಿಕೆ ನೀಡಿರುತ್ತಾರೆ.

ಯುವಕನ ಅದೃಷ್ಟ ಚೆನ್ನಾಗಿತ್ತು ಎಂದು ಕಾಣುತ್ತದೆ. ಬಾಟಲನ್ನು ಯಶಸ್ವಿಯಾಗಿ ಹೊರತೆಗೆಯಲಾಯಿತು. ಆದರೆ, ಎಚ್ಚರಿಸಿದ ವೈದ್ಯರು ಇಂತಹ ಪ್ರಕರಣ ಹಸುಗಳಲ್ಲಿ ಮಾತ್ರ ಕಂಡಬಂದಿದೆ. ಯಾವುದೇ ಕಾರಣಕ್ಕೂ ಮುಂದೊಮ್ಮೆ ಈ ರೀತಿ ಮಾಡಬೇಡ ಎಂದು ಬುದ್ಧಿಮಾತು ಹೇಳಿ ಕಳುಹಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಫಿನ್ಶನ್​, ನಾನು ಏನು ಮಾಡಿದೆ ಎಂಬುದರ ಬಗ್ಗೆ ನನಗೆ ಹೆಮ್ಮೆ ಇಲ್ಲ. ಹಾಗೇ ನನ್ನನ್ನು ಅನುಸರಿಸುವಂತೆ ಯಾರಿಗೂ ಹೇಳುವುದಿಲ್ಲ ಎಂದಿದ್ದಾನೆ. ಅಂದಹಾಗೆ ಗುರುತನ್ನು ಮುಚ್ಚಿಡಲು ಫಿನ್ಶನ್​ ಎಂದು ಹೆಸರು ಬದಲಿಸಲಾಗಿದೆ. (ಏಜೆನ್ಸೀಸ್​)