ಕೋಟಾ: ಮೆಡಿಕಲ್ ಸ್ಟೂಡೆಂಟ್ ಆಗಿದ್ದ 19 ವರ್ಷದ ವಿದ್ಯಾರ್ಥಿಯೊಬ್ಬ, ಮೇ.05 ರಂದು ನೀಟ್ ಪರೀಕ್ಷೆ ಬರೆದ ಬಳಿಕ ತನ್ನ ಮನೆಯಿಂದ ಕಾಣೆಯಾದ ಘಟನೆ ರಾಜಸ್ಥಾನದ ಕೋಟಾದಲ್ಲಿ ವರದಿಯಾಗಿದೆ. ಕೋಟಾದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ, ತನ್ನ ಎಕ್ಸಾಂ ಮುಗಿಸಿದ ಮರುದಿನವೇ ದಿಢೀರ್ ಎನ್ನುವಂತೆ ಮನೆಯಿಂದ ನಾಪತ್ತೆಯಾಗಿದ್ದಾನೆ. ಇದರಿಂದ ಆತನ ಪೋಷಕರು ಕಂಗಾಲಾಗಿದ್ದು, ಸ್ಥಳೀಯ ಪೊಲೀಸರಲ್ಲಿ ತಮ್ಮ ಪುತ್ರನನ್ನು ಹುಡುಕಿಕೊಡಿ ಎಂದು ದೂರು ಸಲ್ಲಿಸಿದ್ದಾರೆ.
ಮನೆ ಬಿಟ್ಟು ಹೋದ ಯುವಕನನ್ನು ರಾಜೇಂದ್ರ ಮೀನಾ ಎಂದು ಹೇಳಲಾಗಿದ್ದು, ರಾಜಸ್ಥಾನದ ಸವಾಯಿ ಮಾಧೋಪುರ ಜಿಲ್ಲೆಯ ನಿವಾಸಿ ಎನ್ನಲಾಗಿದೆ. ಕಳೆದ ಮೂರು ವರ್ಷಗಳಿಂದ ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಯುವಕ, ಮೇ.05ರಂದು ಎಕ್ಸಾಂಗೆ ಹಾಜರಾಗಿದ್ದ ಎಂದು ವರದಿಯಾಗಿದೆ.
ಪರೀಕ್ಷೆ ಬರೆದ ರಾಜೇಂದ್ರ ಮನೆಗೆ ಬಂದ ಬಳಿಕ ಊರು ಬಿಡಲು ಚಿಂತಿಸಿದ್ದು, "ನನಗೆ ಓದನ್ನು ಮುಂದುವರೆಸಲು ಸಾಧ್ಯವಾಗ್ತಿಲ್ಲ. ಹಾಗಾಗಿ ಐದು ವರ್ಷಗಳ ಕಾಲ ನಾನು ನಿಮ್ಮಿಂದ ದೂರ ಉಳಿಯುತ್ತೇನೆ. 5 ವರ್ಷಗಳ ಬಳಿಕ ಮನೆಗೆ ಹಿಂತಿರುಗುವೆ. ಸದ್ಯಕ್ಕೆ ನನ್ನ ಬಳಿ 8 ಸಾವಿರ ರೂ. ಹಣವಿದೆ. ಪ್ರಮಾಣ ಮಾಡಿ ಹೇಳ್ತೀನಿ ಅಪ್ಪ-ಅಮ್ಮ, ವರ್ಷಕ್ಕೆ ಒಂದು ಬಾರಿಯಾದರೂ ಕರೆ ಮಾಡಿ, ನಿಮ್ಮೊಂದಿಗೆ ಮಾತನಾಡ್ತೀನಿ" ಎಂದು ವಾಟ್ಸ್ಆ್ಯಪ್ ಸಂದೇಶದಲ್ಲಿ ತಿಳಿಸಿದ್ದಾನೆ.
ಇದನ್ನೂ ಓದಿ: ಎರಡು ತಲೆ ಹಾವನ್ನು ಅರಣ್ಯಾಧಿಕಾರಿಗಳಿಗೆ ಹಸ್ತಾಂತರ ಪ್ರಾಮಾಣಿಕತೆ; ನಿಸರ್ಗ ಹೋಟೆಲ್ ಮಾಲೀಕರ ಸೇವೆಗೆ ಮೆಚ್ಚುಗೆ
ಈ ವಿಷಯಕ್ಕೆ ಪ್ರತಿಕ್ರಿಯಿಸಿದ ರಾಜೇಂದ್ರ ತಂದೆ, "ನನ್ನ ಹೆಂಡತಿಯ ಆರೋಗ್ಯ ಸರಿಯಿಲ್ಲ. ಆಕೆ ಪ್ರತಿದಿನ ಕಣ್ಣೀರಿಡುತ್ತಿದ್ದಾಳೆ. ಅವನು ನನ್ನ ಕಿರಿಯ ಪುತ್ರ, ತನ್ನ ಸ್ವಇಚ್ಛೆಯಿಂದ ಕೋಟಾಗೆ ತೆರಳಿ, ವಿದ್ಯಾಭ್ಯಾಸ ಮಾಡ್ತೀನಿ ಎಂದು ಹೋದವನು. ನಾವೇನು ಬಲವಂತದಿಂದ ಓದು ಎಂದು ಹೇಳಿದ್ದಲ್ಲ. ಆದರೆ, ಈ ಘಟನೆ ಇದೀಗ ನಮಗೆ ಭಾರೀ ಆಘಾತ ತಂದೊಡ್ಡಿದ್ದು, ಮುಂದೇನು ಮಾಡಬೇಕೆಂದು ತಿಳಿಯುತ್ತಿಲ್ಲ. ದಯವಿಟ್ಟು ನಮ್ಮ ಮಗನನ್ನು ಹುಡುಕಿಕೊಡಿ" ಎಂದು ಅಳಲು ತೋಡಿಕೊಂಡಿದ್ದಾರೆ,(ಏಜೆನ್ಸೀಸ್).