ನ್ಯೂಸ್

ಜಪಾನ್​ ಯುವತಿಯ ಭಾರತ ಪ್ರೀತಿ: ಹಿಂದಿಯಲ್ಲೇ ಮಾತನಾಡೋ ಬೆಡಗಿಗೆ ಪಾನಿಪುರಿ ಇಷ್ಟವಂತೆ

ಟೋಕಿಯೋ: ಸದ್ಯ ಜಪಾನ್​ನ ಟೋಕಿಯೋ ಭಾರತದಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ. ಒಲಿಂಪಿಕ್ಸ್ ಕ್ರೀಡಾಕೂಟ ಅಲ್ಲಿಯೇ ನಡೆಯುತ್ತಿರುವುದು ಚರ್ಚೆಗೆ ಕಾರಣವಾಗಿದೆ. ಆದರೆ ಅದರ ಹೊರೆತಾಗಿಯೂ ಒಂದು ವಿಚಾರದಲ್ಲಿ ಈ ಟೋಕಿಯೋ ಭಾರತದಲ್ಲಿ ಚರ್ಚೆಯಾಗುತ್ತದೆ. ಅದೇನೆಂದರೆ ಅಲ್ಲಿನ ಯುವತಿ ಮಾಯೋ.

ಮಾಯೋ ಅಪ್ಪಟ ಜಪಾನ್​ನ ಯುವತಿ. ಆದರೆ ಆಕೆಗೆ ಭಾರತ ಇಷ್ಟವಂತೆ. ಭಾರತವನ್ನು ಹಲವು ವಿಚಾರದಲ್ಲಿ ಇಷ್ಟಪಡುತ್ತಾಳಂತೆ ಆಕೆ. ಭಾರತವನ್ನು ಅರ್ಥ ಮಾಡಿಕೊಳ್ಳಬೇಕೆಂದು ಇಲ್ಲಿಗೆ ಬಂದು ಸಾಕಷ್ಟು ವಿಚಾರಗಳನ್ನು ಕಲಿತು ಹೋಗಿದ್ದಾಳೆ. ಇಲ್ಲಿ ಕಲಿತ ಹಿಂದಿ ಸಂಪೂರ್ಣವೆನಿಸಿಲ್ಲವೆಂದು ಅಲ್ಲೇ ಒಂದು ವಿಶ್ವವಿದ್ಯಾಲಯದಲ್ಲಿ ಮೂರು ವರ್ಷಗಳ ಕಾಲ ಹಿಂದಿ ಕೋರ್ಸ್ ಮಾಡಿದ್ದಾಳೆ.

ಆಕೆಯ ತಂದೆಗೂ ಭಾರತವೆಂದರೆ ಹೆಚ್ಚು ಇಷ್ಟವಾಗಿತ್ತಂತೆ. ಯಾವಾಗಲೂ ಭಾರತ ಎಂದು ಹೇಳುತ್ತಿರುತ್ತಿದ್ದರಂತೆ. ಅವರಿಂದ ಸ್ಫೂರ್ತಿ ಪಡೆದುಕೊಂಡ ಮಾಯೋ ಕೂಡ ಭಾರತದ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದಾಳೆ. ಆಕೆಗೆ ಇಲ್ಲಿನ ಪಾನಿಪುರಿ ಎಂದರೆ ಅಚ್ಚುಮೆಚ್ಚಿನ ಸ್ನ್ಯಾಕ್ಸ್ ಅಂತೆ.

ಭಾರತದಲ್ಲಿ ಮಾತೇ ಮುಖ್ಯ ಎನ್ನುತ್ತಾಳೆ ಮಾಯೋ. ನಾವು ಜಪಾನ್​ನಲ್ಲಿ ಕಡಿಮೆ ಮಾತಾಡುವುದನ್ನೇ ಒಳ್ಳೆಯೆದೆಂದು ಸುಮ್ಮನಿರುತ್ತೇವೆ. ಆದರೆ ಭಾರತದಲ್ಲಿ ಪರಿಚಯ ಇಲ್ಲದವರ ಜತೆಯೂ ಮಾತಾನಾಡುತ್ತೇವೆ. ಬಸ್ಸು, ರೈಲು ಹೀಗೆ ಎಲ್ಲೆಂದರಲ್ಲಿ ಅಪರಿಚಿತರ ಜತೆ ಮಾತುಕತೆ ಆರಂಭವಾಗಿಬಿಡುತ್ತದೆ. ಜಪಾನ್​ನಲ್ಲಿ ಪೂಜಿಸಲಾಗುವ ದೇವರೊಬ್ಬರನ್ನು ಇಲ್ಲಿ ಸರಸ್ವತಿ ಹೆಸರಿನಲ್ಲಿ ಪೂಜಿಸಲಾಗುತ್ತದೆ. ಭಾರತ ಮತ್ತು ಜಪಾನ್ ನಡುವೆ ಸಾಕಷ್ಟು ಸಾಮಾನ್ಯ ವಿಚಾರಗಳಿವೆ ಎನ್ನುತ್ತಾಳೆ ಮಾಯೋ.

ಅಂದ ಹಾಗೆ ಈ ಮಾಯೋ ತನ್ನದೇ ಆದ ಒಂದು ಯೂಟ್ಯೂಬ್ ಚಾನೆಲ್​ ಅನ್ನೂ ಹೊಂದಿದ್ದಾಳೆ. ಮಾಯೋ ಜಪಾನ್ ಹೆಸರಿನ ಯೂಟ್ಯೂಬ್ ಚಾನೆಲ್ ಮಾಡಿಕೊಂಡು ಅದರಲ್ಲಿ ಭಾರತ ಮತ್ತು ಜಪಾನ್ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾಳೆ. ಎರಡೂ ದೇಶಗಳ ನಡುವಿನ ಸೌಮ್ಯತೆ ಏನು? ವ್ಯತ್ಯಾಸ ಏನು ಎನ್ನುವುದರ ಚರ್ಚೆ ನಡೆಸುತ್ತಾಳೆ. ಅಷ್ಟೇ ಅಲ್ಲದೆ ಹಿಂದಿನಯನ್ನು ಜಪಾನ್ ಜನರಿಗೆ ಹಾಗೂ ಅಲ್ಲಿನ ಭಾಷೆಯನ್ನು ಭಾರತೀಯರಿಗೆ ಕಲಿಸುತ್ತಾಳೆ. ಇದೀಗ ಆಕೆ ಮರಾಠಿಯನ್ನೂ ಕಲಿಯುವ ಪ್ರಯತ್ನದಲ್ಲಿದ್ದಾಳಂತೆ. (ಏಜೆನ್ಸೀಸ್)