| ಮಂಜುನಾಥ ಕೋಳಿಗುಡ್ಡ ಬೆಳಗಾವಿ
ಕ್ಷೀಪ್ರವಾಗಿ ಬೆಳೆಯುತ್ತಿರುವ ಎರಡನೇ ಹಂತದ ನಗರಗಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ‘ಮಾಸ್ಟರ್ ಪ್ಲಾ್ಯನ್’ ರೂಪಿಸಲು ಸರ್ಕಾರ ಮುಂದಾಗಿದ್ದು, ನಗರ ಸ್ಥಳೀಯ ಸಂಸ್ಥೆ ಗಳಿಗೆ ಜನಸಂಖ್ಯೆ, ಪ್ರದೇಶ ವಿಸ್ತರಣೆ ಆಧಾರದ ಮೇಲೆ 50ರಿಂದ 100 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಲು ನಿರ್ಧರಿಸಿದೆ.
ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆ ಮಾದರಿಯಲ್ಲೇ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಪ್ರದೇಶಗಳಿಗೆ ಮೂಲಭೂತ ಸೌಕರ್ಯ ಹಾಗೂ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಹೂಡಿಕೆದಾರರಿಗೆ ಸೂಕ್ತ ವೇದಿಕೆ ಕಲ್ಪಿಸುವ ಉದ್ದೇಶದಿಂದ ಮುಂದಿನ 20-25 ವರ್ಷಗಳ ಬೆಳವಣಿಗೆ ಗಮನದಲ್ಲಿಟ್ಟುಕೊಂಡು ಎರಡನೇ ಹಂತದ ನಗರ ಪ್ರದೇಶಗಳನ್ನು ಸಮಗ್ರ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಯೋಜನೆ ರೂಪಿಸುತ್ತಿದೆ.
ಸಂಘ-ಸಂಸ್ಥೆಗಳು, ನಗರ ಯೋಜನಾ ತಜ್ಞರ ಅಭಿಪ್ರಾಯ ಮತ್ತು ಸಲಹೆ ಸೂಚನೆ ಪಡೆದುಕೊಳ್ಳಲಿದ್ದು, ಯೋಜನೆ ವ್ಯಾಪ್ತಿಗೆ ಹೊಸ ಹೊಸ ಪ್ರದೇಶಗಳನ್ನು ಸೇರ್ಪಡೆಗೊಳಿಸುವ ಜತೆಗೆ ಸೂಕ್ತ ಮೂಲಸೌಕರ್ಯ ಒದಗಿಸುವುದು ಯೋಜನೆಯ ಒಂದು ಭಾಗವಾಗಿದೆ.
ಈಗಾಗಲೆ ಬೆಂಗಳೂರು, ಮೈಸೂರು, ಕಲಬುರಗಿ, ಶಿವಮೊಗ್ಗ, ಹುಬ್ಬಳ್ಳಿ-ಧಾರವಾಡ, ದಾವಣಗೆರೆ, ಮಂಗಳೂರುಗಳಂಥ ಮಹಾನಗರ ಪಾಲಿಕೆಯ ಪ್ರದೇಶಗಳು ಮಾಸ್ಟರ್ ಪ್ಲಾ್ಯನ್ ಅಡಿಯಲ್ಲಿ ಅಭಿವೃದ್ಧಿ ಹೊಂದಿವೆ. ಐಟಿ, ಬಿಟಿ ಕಂಪನಿಗಳು ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿವೆ. ಆದರೆ, ಎರಡನೇ ಹಂತದ ನಗರಗಳಲ್ಲಿ ಹೂಡಿಕೆ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬಾಗಲಕೋಟೆ, ಬಸವಕಲ್ಯಾಣ, ಗೋಕಾಕ, ನಿಪ್ಪಾಣಿ, ಬೀದರ, ಗದಗ, ಚಾಮರಾಜನಗರ, ಚಿಕ್ಕಮಂಗಳೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾಂಡೇಲಿ, ಗಂಗಾವತಿ, ಹಾಸನ, ಹಾವೇರಿ, ಮಂಡ್ಯ, ಕೊಪ್ಪಳ, ಮಡಿಕೇರಿ, ಮುಧೋಳ, ನೆಲಮಂಗಲ ಅಂತಹ ನಗರ ಪ್ರದೇಶಗಳನ್ನು ಸಮಗ್ರ ಅಭಿವೃದ್ಧಿಪಡಿಸಿ ಹೂಡಿಕೆದಾರರನ್ನು ಆಕರ್ಷಿಸುವ ಮೂಲಕ ಉದ್ಯೋಗ ಅವಕಾಶ ಹೆಚ್ಚಿಸಲು ಸರ್ಕಾರ ಯೋಜನೆ ಹಾಕಿಹಾಕೊಂಡಿದೆ. ಎಲ್ಲವೂ ಅಂದುಕೊಂಡಂತೆ ಆದರೆ ವರ್ಷಾಂತ್ಯದಲ್ಲಿ ಅನುಷ್ಠಾನಕ್ಕೆ ಬರುವ ಸಾಧ್ಯತೆ ಇದೆ ಎಂದು ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೆ ಗೋಕಾಕ, ನಿಪ್ಪಾಣಿ ನಗರಸಭೆ ಮಾಸ್ಟರ್ ಪ್ಲ್ಯಾನ್ ಅಡಿಯಲ್ಲಿ ಅಭಿವೃದ್ಧಿ ಆಗುತ್ತಿವೆ. ಇನ್ನೂ ಕೆಲ ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಪ್ರದೇಶಗಳನ್ನು ಸಮಗ್ರ ಅಭಿವೃದ್ಧಿಗೊಳಿಸಲು ಮಾಸ್ಟರ್ ಪ್ಲಾ್ಯನ್ ಪ್ರಸ್ತಾವನೆ ಸರ್ಕಾರದ ಹಂತದಲ್ಲಿದೆ. ಶೀಘ್ರ ಅನುಷ್ಠಾನಗೊಳ್ಳುವ ಸಾಧ್ಯತೆಯಿದೆ. | ಮಲ್ಲಿಕಾರ್ಜುನ ಕಲಾದಗಿ, ಯೋಜನಾ ನಿರ್ದೇಶಕ, ಬೆಳಗಾವಿ ಜಿಲ್ಲಾ ಯೋಜನಾ ಕೋಶ