ನ್ಯೂಸ್

ಪಾಕಿಸ್ತಾನದ ಕರಾಚಿ ಯೂನಿವರ್ಸಿಟಿ ಬಳಿ ಭಾರಿ ಸ್ಫೋಟ: 3 ಸಾವು, 16ಕ್ಕೂ ಹೆಚ್ಚು ಮಂದಿ ಗಂಭೀರ

ಕರಾಚಿ: ಪಾಕಿಸ್ತಾನ ಸರ್ಕಾರ ವಿರುದ್ಧ ಬೃಹತ್​ ಪ್ರತಿಭಟನೆಗಳು ನಡೆಯುತ್ತಿರುವ ನಡುವೆಯೇ ಸಿಂಧ್​ ಪ್ರಾಂತ್ಯದ ಬಂದರು ನಗರ ಕರಾಚಿ ನಗರದಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಕರಾಚಿ ಯೂನಿವರ್ಸಿಟಿ ಮಸ್ಕನ್​ ಚೌರಂಗಿ ಗುಲ್ಶಾನ್​- ಐ- ಇಕ್ಬಾಲ್​ ಎದುರಿನ 4 ಅಂತಸ್ತಿನ ಕಟ್ಟಡದಲ್ಲಿ ಬುಧವಾರ ಸ್ಫೋಟ ಸಂಭವಿಸಿದೆ.

ಪ್ರಾಥಮಿಕ ವರದಿಗಳ ಪ್ರಕಾರ ಮೂವರು ಸಾವಿಗೀಡಾಗಿದ್ದು, ಸುಮಾರು 15 ಮಂದಿ ಗಂಭೀರವಾಗಿ ಗಾಯಗೊಂಡಿರುವುದಾಗಿ ತಿಳಿದುಬಂದಿದೆ. ಗಾಯಾಳುಗಳನ್ನು ಸ್ಥಳೀಯ ಪಟೇಲ್​ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಫೋಟದ ಸ್ವರೂಪವನ್ನು ಪೊಲೀಸರು ಪರೀಕ್ಷಿಸುತ್ತಿದ್ದು, ಘಟನಾ ಸ್ಥಳವನ್ನು ಸದ್ಯದ ಮಟ್ಟಿಗೆ ಬಿಗಿಬಂದೋಬಸ್ತ್​ ಮಾಡಲಾಗಿದ್ದು, ಸ್ಥಳೀಯರನ್ನು ಸ್ಥಳಾಂತರಿಸಲಾಗಿದೆ. ಆದಾಗ್ಯ ಇದೊಂದು ಸಿಲಿಂಡರ್​ ಸ್ಫೋಟದ ರೀತಿ ಕಾಣುತ್ತಿದೆ ಎಂದು ಮಬೀನಾ ಟೌನ್​ ಪೊಲೀಸ್​ ಎಸ್​ಎಚ್​ಒ ತಿಳಿಸಿದ್ದಾರೆ. ಆದರೂ, ಬಾಂಬ್​ ನಿಷ್ಕ್ರೀಯ ದಳ ಸ್ಥಳಕ್ಕೆ ದೌಡಾಯಿದ್ದು, ಸ್ಫೋಟಕ್ಕೆ ಕಾರಣವನ್ನು ಹುಡುಕುತ್ತಿದ್ದಾರೆಂದು ಪಾಕ್​ ಮಾಧ್ಯಮ ಡೌನ್​ ವರದಿ ಮಾಡಿದೆ.

4 ಅಂತಸ್ತಿನ ಕಟ್ಟಡದ ಎರಡನೇ ಮಹಡಿಯಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಕಟ್ಟಡದ ಪಕ್ಕದ ರಸ್ತೆಯಲ್ಲಿ ಹೋಗುತ್ತಿದ್ದ ವಾಹನಗಳಿಗೂ ಹಾನಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಘಟನೆಗೆ ಸಿಂಧ್​ ಪ್ರಾಂತ್ಯದ ಮುಖ್ಯಮಂತ್ರಿ ಮುರಾದ್​ ಅಲಿ ಶಾ ಸಂತಾಪ ವ್ಯಕ್ತಪಡಿಸಿ, ಸಂಪೂರ್ಣ ವರದಿ ನೀಡುವಂತೆ ಕರಾಚಿ ಪೊಲೀಸ್​ ಕಮೀಷನರ್​ರನ್ನು ಕೇಳಿದ್ದಾರೆ. ಅಲ್ಲದೆ, ಗಾಯಾಳುಗಳಿಗೆ ಅಗತ್ಯ ನೆರವಿಗೆ ಸೂಚನೆಯನ್ನು ಸಹ ನೀಡಿದ್ದಾರೆ. (ಏಜೆನ್ಸೀಸ್​)