ಗಾಂಧಿನಗರ: ಇತ್ತೀಚಿನ ವರ್ಷಗಳಲ್ಲಿ ಮದುವೆಗೆ ಸಂಬಂಧಿಸಿದ ಸುದ್ದಿಗಳು ಸಖತ್ ವೈರಲ್ ಆಗುತ್ತಿದ್ದು, ಕ್ಷುಲಕ ಕಾರಣಕ್ಕೆ ಮದುವೆಗಳು (Marriage) ಮುರಿದು ಬೀಳುತ್ತಿವೆ. ಕೆಲ ದಿನಗಳ ಹಿಂದೆ ದೆಹಲಿಯಲ್ಲಿ ವರನೋರ್ವ ದಿಬ್ಬಣದಲ್ಲಿ ಚೋಲಿ ಕೆ ಪೀಚೆ ಕ್ಯಾ ಹೈ ಹಾಡಿನಲ್ಲಿ ನೃತ್ಯ ಮಾಡಿದ್ದಕ್ಕೆ ವಧುವಿನ ತಂದೆ ಮದುವೆಯನ್ನು ರದ್ದುಪಡಿಸಿದ್ದರು. ಇದೀಗ ಅಡುಗೆ ಕಡಿಮೆ ಮಾಡಿಸಿದ್ದಾರೆ ಎಂದು ಆರೋಪಿಸಿ ವರನ ಕುಟುಂಬಸ್ಥರು ಮದುವೆಯನ್ನು ನಿಲ್ಲಿಸಿರುವ ಘಟನೆ ಗುಜರಾತ್ನ ಸೂರತ್ನಲ್ಲಿ ನಡೆದಿದೆ.
ರಾಹುಲ್ ಪ್ರಮೋದ್ ಮಹ್ತೊ ಜತೆ ಅಂಜಲಿ ಕುಮಾರಿ ಅವರು ವಿವಾಹವನ್ನು (Marriage) ನಿಶ್ಚಯಿಸಲಾಗಿತ್ತು. ಸೂರತ್ನ ಲಕ್ಷ್ಮೀ ಹಾಲ್ನಲ್ಲಿ ಇವರ ಮದುವೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವರನ ಕುಟುಂಬಸ್ಥರು ಅಡುಗೆ ಕಡಿಮೆ ಮಾಡಲಾಗಿದೆ ಎಂದು ಆರೋಪಿಸಿ ಗಲಾಟೆಯನ್ನು ತೆಗೆದಿದ್ದು, ಮದುವೆ ಸಮಾರಂಭವನ್ನು ರದ್ದುಪಡಿಸಿದ್ದಾರೆ. ಆದರೆ, ಈ ವೇಳೆಗಾಗಲೇ ವಧು ಹಾಗೂ ವರರಿಬ್ಬರು ಬಹುತೇಕ ವಿಧಿ-ವಿಧಾನಗಳನ್ನು ನೆರವೇರಿಸಿದ್ದರು.
ವರನ ಕುಟುಂಬಸ್ಥರ ನಡೆಯನ್ನು ಖಂಡಿಸಿದ ವಧುವಿನ ಕುಟುಂಬಸ್ಥರು ಕುಂಟು ನೆಪ ನೀಡಿ ಮದುವೆಯನ್ನು (Marriage) ನಿಲ್ಲಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ಧಾರೆ. ಬಳಿಕ ಡಿಸಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ಮದುವೆ ಮನೆಯನ್ನು ತಲುಪಿದ್ದು, ವರನ ಕುಟುಂಬಸ್ಥರ ಜತೆ ಮಾತುಕತೆ ನಡೆಸಿದ್ದು, ಮನವೊಲಿಸಿ ಮದುವೆ ಕಾರ್ಯವನ್ನು ಪೊಲೀಸ್ ಠಾಣೆಯಲ್ಲಿ ಪೂರ್ಣಗೊಳಿಸಿದ್ದು, ಸುಖಾಂತ್ಯ ಕಂಡಿದೆ.
ಇನ್ನೂ ಈ ಬಗ್ಗೆ ಮಾತನಾಡಿರುವ ವಧು ಅಂಜಲಿ ಕುಮಾರಿ, ರಾಹುಲ್ ನನ್ನನ್ನು ಮದುವೆಯಾಗಲು ಸಿದ್ದವಿದ್ದರು ಕೂಡ ಆತನ ಕುಟುಂಬಸ್ಥರು ಮಾತ್ರ ಗಲಾಟೆ ಮಾಡಿದರು. ನಾವು ಎಷ್ಟೇ ಕೇಳಿಕೊಂಡರು ರಾಹುಲ್ ಕುಟುಂಬಸ್ಥರು ದೊಡ್ಡ ಗಲಾಟೆಯನ್ನೇ ಮಾಡುತ್ತಿದ್ದರು. ಆದರೆ, ಪೊಲೀಸರು ಮಧ್ಯಪ್ರವೇಶಿಸಿ ನಮ್ಮಿಬ್ಬರ ಮದುವೆಯನ್ನು ಮಾಡಿಸಿದ್ದಾರೆ ಎಂದು ವಧು ಅಂಜಲಿ ಕುಮಾರಿ ಹೇಳಿದ್ದಾರೆ.