ಲಖನೌ: ವಿಧಾನಸಭೆ ಚುನಾವಣೆ ಘೋಷಣೆಯಾಗಿರುವ ಉತ್ತರ ಪ್ರದೇಶದಲ್ಲಿ ಪಕ್ಷಾಂತರ ಪರ್ವ ಶುರುವಾಗಿದೆ. ಆಡಳಿತಾರೂಢ ಬಿಜೆಪಿಯಿಂದ ಪ್ರಭಾವಿ ಸಮುದಾಯಗಳ ನಾಲ್ವರು ನಾಯಕರು ದೂರ ಸರಿದಿದ್ದಾರೆ. ಇದೇ ವೇಳೆ ವಿಪಕ್ಷಗಳಿಂದ ಮೂವರು ನಾಯಕರು ಬಿಜೆಪಿ ಸೇರಿಕೊಂಡಿದ್ದಾರೆ. ಸಹರಣಪುರದ ಬೆಹಾತ್ನ ಕಾಂಗ್ರೆಸ್ ಶಾಸಕ ನರೇಶ್ ಸೈನಿ, ಫಿರೋಜಾಬಾದ್ ಸಿರ್ಸಾಗಂಜ್ನ ಸಮಾಜವಾದಿ ಪಕ್ಷದ ಶಾಸಕ ಹರಿಓಮ್ ಯಾದವ್, ಸಮಾಜವಾದಿ ಪಕ್ಷದ ಮಾಜಿ ಶಾಸಕ ಡಾ.ಧರ್ಮಪಾಲ್ ಸಿಂಗ್ ಬುಧವಾರ ಪಕ್ಷ ಸೇರಿದ್ದಾಗಿ ಬಿಜೆಪಿ ಟ್ವೀಟ್ ಮಾಡಿದೆ. ಇದಕ್ಕೂ ಮುನ್ನ, ಬಿಜೆಪಿಯ ನಾಲ್ವರು ಶಾಸಕರು ಮಂಗಳವಾರ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದರು. ವಿನಯ್ ಶಾಖ್ಯ, ರೋಶನ್ ಲಾಲ್ ವರ್ವ, ಬ್ರಿಜೇಶ್ ಪ್ರಜಾಪತಿ ಮತ್ತು ಭಗವತಿ ಸಾಗರ್ ಬಿಜೆಪಿ ಬಿಟ್ಟ ಶಾಸಕರು. ಇವರು ಸಚಿವರಾಗಿದ್ದ ಸ್ವಾಮಿ ಪ್ರಸಾದ್ ಮೌರ್ಯ ಅವರ ಬೆಂಬಲಿಗರು.
14ಕ್ಕೆ ಎಸ್ಪಿ ಸೇರಲಿದ್ದಾರೆ ಮೌರ್ಯ: ಒಬಿಸಿ ಸಮುದಾಯದ ಪ್ರಮುಖ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಅವರು ಯೋಗಿ ಸಚಿವ ಸಂಪುಟದಲ್ಲಿದ್ದರು. ಯೋಗಿ ಆಳ್ವಿಕೆಯಲ್ಲಿ ದಲಿತರು, ಹಿಂದುಳಿದ ವರ್ಗ, ಯುವಕರನ್ನು ನಿರ್ಲಕ್ಷಿಸಲಾಗಿದೆ ಎಂದು ರಾಜೀನಾಮೆ ಪತ್ರದಲ್ಲಿ ಮೌರ್ಯ ಉಲ್ಲೇಖಿಸಿದ್ದರು.
ಶುಭ ಸೂಚನೆ ಎಂದ ಅಖಿಲೇಶ್: ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸತೊಡಗಿದೆ. ಕ್ರಾಂತಿಕಾರಿ ಸಾಮಾಜಿಕ ನ್ಯಾಯವೂ ಸಿಗಲಿದೆ. ಒಬಿಸಿ ನಾಯಕರು ಬಿಜೆಪಿ ಬಿಟ್ಟು ಸಮಾಜವಾದಿ ಪಕ್ಷದ ಕಡೆಗೆ ಹೆಜ್ಜೆ ಹಾಕಿರುವುದೇ ಇದಕ್ಕೆ ನಿರ್ದಶನ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.
ಇನ್ನೊಬ್ಬ ಒಬಿಸಿ ನಾಯಕ: ಸ್ವಾಮಿ ಪ್ರಸಾದ್ ಮೌರ್ಯ ಅವರ ಬಳಿಕ ಯೋಗಿ ಸಚಿವ ಸಂಪುಟದ ಇನ್ನೊಬ್ಬ ಒಬಿಸಿ ನಾಯಕ ದಾರಾ ಸಿಂಗ್ ಚೌಹಾಣ್ ಸಚಿವ ಸ್ಥಾನಕ್ಕೆ ಮತ್ತು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಚೌಹಾಣ್ ಅವರು ಪರಿಸರ ಮತ್ತು ಅರಣ್ಯ ಖಾತೆ ಸಚಿವರಾಗಿದ್ದರು. 2015ರಲ್ಲಿ ಬಿಜೆಪಿ ಸೇರಿದ್ದ ಚೌಹಾಣ್ ಈ ಹಿಂದೆ ಬಹುಜನ ಸಮಾಜ ಪಕ್ಷ (ಬಿಎಸ್ಪಿ)ದಲ್ಲಿದ್ದರು. ಬಿಜೆಪಿಗೆ ಬಂದ ಕೂಡಲೆ ಅವರನ್ನು ಒಬಿಸಿ ಮೋರ್ಚಾದ ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು. 2009-14ರ ಅವಧಿಯಲ್ಲಿ ಅವರು ಬಿಎಸ್ಪಿಯಿಂದ ಲೋಕಸಭಾ ಸದಸ್ಯರಾಗಿದ್ದರು. 90ರ ದಶಕದ ಕೊನೆಯಲ್ಲಿ ರಾಜ್ಯಸಭೆ ಸದಸ್ಯರೂ ಆಗಿದ್ದರು. ಶೀಘ್ರದಲ್ಲೇ ಮುಂದಿನ ನಡೆಯನ್ನು ಪ್ರಕಟಿಸುವುದಾಗಿ ಚೌಹಾಣ್ ಬುಧವಾರ ತಿಳಿಸಿದ್ದಾರೆ. ಚೌಹಾಣ್ ಕೂಡ ಸ್ವಾಮಿ ಪ್ರಸಾದ್ ಮೌರ್ಯ ಬೆಂಬಲಿಗರು.
ಅಯೋಧ್ಯೆಯಿಂದ ಯೋಗಿ ಸ್ಪರ್ಧೆ?: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಉತ್ತರ ಪ್ರದೇಶ ವಿಧಾನಸಭೆಗೆ ಅಯೋಧ್ಯೆ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ದಟ್ಟವಾಗಿದೆ. ಇದು ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರ ಹುಮ್ಮಸ್ಸು ಹೆಚ್ಚಿಸಲು ನೆರವಾಗಲಿದೆ ಎಂಬ ಅಭಿಪ್ರಾಯ ಪಕ್ಷದೊಳಗೆ ಇದೆ ಎಂದು ಮೂಲಗಳು ತಿಳಿಸಿವೆ.
ಮೌರ್ಯ ವಿರುದ್ಧ ಅರೆಸ್ಟ್ ವಾರಂಟ್: ಏಳು ವರ್ಷ ಹಳೆಯ ಕೇಸ್ಗೆ ಸಂಬಂಧಿಸಿ ಸುಲ್ತಾನಪುರದ ಕೋರ್ಟ್ ವಿಚಾರಣೆಗೆ ಹಾಜರಾಗದ ಮಾಜಿ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ವಿರುದ್ಧ ಅರೆಸ್ಟ್ ವಾರಂಟ್ ಹೊರಡಿಸಿದೆ. ಹಿಂದು ದೇವರ ವಿರುದ್ಧ 2014ರಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಇದರ ವಿರುದ್ಧ ದಾವೆ ಹೂಡಲಾಗಿತ್ತು. ಜ.24ರಂದು ಈ ಕೇಸ್ನ ವಿಚಾರಣೆ ಇದೆ.