ನ್ಯೂಸ್

ವಿಧಾನಸಭೆಯಲ್ಲಿ ಏಳು ಶ್ರೀನಿವಾಸ!; ಒಂದೇ ಹೆಸರಿನ ಹಲವರು..

rashmirhebbur

ಬೆಂಗಳೂರು: ಹಾನಗಲ್ ವಿಧಾನಸಭಾ ಕ್ಷೇತ್ರದಿಂದ ಶ್ರೀನಿವಾಸ ಮಾನೆ ಶಾಸಕರಾಗಿ ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸಿದ್ದಾರೆ. ಈ ಮೂಲಕ ಒಂದು ಅಚ್ಚರಿಯೂ ನಡೆಯುವುದಿದೆ. ಹಾಲಿ ವಿಧಾನಸಭೆಯಲ್ಲಿ ‘ಶ್ರೀನಿವಾಸ’ ಎಂಬ ಹೆಸರಿನ ಏಳನೇ ಶಾಸಕರಿವರು. ಶ್ರೀನಿವಾಸ ಶೆಟ್ಟಿ ಹಾಲಾಡಿ(ಕುಂದಾಪುರ), ಶ್ರೀನಿವಾಸ ವಾಸು(ಗುಬ್ಬಿ), ಶ್ರೀನಿವಾಸ ಗೌಡ (ಕೋಲಾರ), ಶ್ರೀನಿವಾಸಮೂರ್ತಿ ಅಖಂಡ (ಪುಲಕೇಶಿ ನಗರ), ಶ್ರೀನಿವಾಸಮೂರ್ತಿ (ನೆಲಮಂಗಲ), ಶ್ರೀನಿವಾಸ ಎಂ.(ಮಂಡ್ಯ) ಜತೆಗೆ ಇದೀಗ ಶ್ರೀನಿವಾಸ ಮಾನೆ (ಹಾನಗಲ್) ಸೇರಿಕೊಂಡಿದ್ದಾರೆ. ಒಂದೇ ಹೆಸರಿನ ಅತಿ ಹೆಚ್ಚು ಶಾಸಕರಿದ್ದರೆ ಅದು ‘ಶ್ರೀನಿವಾಸ’ ಹೆಸರಿನವರು ಎಂಬುದು ವಿಶೇಷ.

ಅಂದಹಾಗೆ ವಿಧಾನಸಭೆ ಸದಸ್ಯರ ಪಟ್ಟಿಯಲ್ಲಿ ಒಂದೇ ಹೆಸರಿನ ಹಲವು ಶಾಸಕರಿದ್ದಾರೆ. ಉದಾಹರಣೆಗೆ ‘ಬಸವರಾಜ’ ಹೆಸರಿನ ನಾಲ್ವರಿದ್ದಾರೆ. ಬಸವರಾಜ ಮತ್ತಿಮೂಡ (ಕಲಬುರಗಿ ಗ್ರಾಮಾಂತರ), ಬಸವರಾಜ ದಡೇ ಸೂಗೂರು (ಕನಕಗಿರಿ), ಬಸವರಾಜ ಭೈರತಿ (ಕೆ.ಆರ್.ಪುರ), ಬಸವರಾಜ ಬೊಮ್ಮಾಯಿ (ಶಿಗ್ಗಾವಿ) ಜತೆಗೆ ಬಸನಗೌಡರು ಮೂವರಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ (ವಿಜಯಪುರ), ಬಸವನಗೌಡ (ಬಿ.ಸಿ.ಪಾಟೀಲ್- ಹಿರೇಕೇರೂರು), ಬಸನಗೌಡ ತುರುವಿಹಾಳ್ (ಮಸ್ಕಿ). ಸಿಂದಗಿಯಲ್ಲಿ ರಮೇಶ್ ಭೂಸನೂರು ಶಾಸಕರಾಗುವ ಮೂಲಕ ಈ ಹೆಸರಿನ ಮೂರನೇ ಶಾಸಕರಿವರು. ರಮೇಶ್ ಜಾರಕಿಹೊಳಿ, ರಮೇಶ್​ಕುಮಾರ್ ಈ ಪಟ್ಟಿಯಲ್ಲಿದ್ದಾರೆ.

ಕುಮಾರಸ್ವಾಮಿ ಮತ್ತು ಮಹೇಶ ಹೆಸರಿನವರೂ ಮೂವರಿದ್ದಾರೆ. ಎಂ.ಪಿ. ಕುಮಾರಸ್ವಾಮಿ (ಮೂಡಿಗೆರೆ), ಎಚ್.ಡಿ. ಕುಮಾರಸ್ವಾಮಿ (ಚನ್ನಪಟ್ಟಣ), ಎಚ್.ಕೆ. ಕುಮಾರಸ್ವಾಮಿ (ಸಕಲೇಶಪುರ). ಮಹೇಶ್ ಕಮಠಳ್ಳಿ (ಅಥಣಿ), ಮಹೇಶ್ ಸಾ.ರಾ (ಕೃಷ್ಣರಾಜನಗರ), ಮಹೇಶ್ ಎನ್.(ಕೊಳ್ಳೆಗಾಲ). ಉಳಿದಂತೆ ಮಹಾಂತೇಶ್, ವಿಶ್ವನಾಥ್, ಸೋಮಶೇಖರ, ಪರಮೇಶ್ವರ, ಶಿವಶಂಕರ, ಕೃಷ್ಣಪ್ಪ, ನಾರಾಯಣ, ಉಮೇಶ್, ಅಶೋಕ್, ಹಾಲಪ್ಪ ಹೆಸರಿನವರು ಇಬ್ಬರಿದ್ದಾರೆ.

ಒಂದು ಸೀಟು ಗೆದ್ದು, ಇನ್ನೊಂದು ಸೀಟಿನಲ್ಲಿ ಸೋತಿದ್ದರೂ ಬಿಜೆಪಿ ತನ್ನ ಮತಗಳಿಕೆ ಪ್ರಮಾಣವನ್ನು ಹೆಚ್ಚಿಸಿಕೊಂಡಿರುವುದು ಜನ ಬೆಂಬಲಕ್ಕೆ ಸಾಕ್ಷಿ. ಹಾನಗಲ್ ಸೋಲಿನಿಂದ ಸರ್ಕಾರದ ಮೇಲೆ ಗಂಭೀರ ಪರಿಣಾಮ ಬೀರುವುದಿಲ್ಲ. ಒಂದು ಸ್ಥಾನ ಗೆದ್ದೊಡನೆ ಸರ್ಕಾರದ ವಿರುದ್ಧ ಜನಾಭಿಪ್ರಾಯವೆಂಬ ಕಾಂಗ್ರೆಸ್ ನಾಯಕರ ಹೇಳಿಕೆ ಖಂಡನೀಯ.

| ಎನ್.ರವಿಕುಮಾರ್ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ

ಸೋತಾಗ ಮತಯಂತ್ರಗಳನ್ನು ದೂಷಿಸದೆ, ಜನತೆಯ ತೀರ್ಪನ್ನು ತಲೆಬಾಗಿ ಸ್ವೀಕರಿಸುವುದು ಬಿಜೆಪಿಯ ಸುಸಂಸ್ಕೃತಿ. ಉದಾಸಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಲು ಕಾಂಗ್ರೆಸ್​ಗೆ ಜನರು ಒಂದು ಅವಕಾಶ ನೀಡಿದ್ದಾರೆ.

| ಡಾ.ಕೆ.ಸುಧಾಕರ್ ಆರೋಗ್ಯ ಸಚಿವ