ಕೇರಳ: ಇದೇ ವರ್ಷದ ಫೆಬ್ರವರಿ 22ರಂದು ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಕಂಡ ಮಲಯಾಳಂ ಬ್ಲಾಕ್ಬಸ್ಟರ್ ಸಿನಿಮಾ ‘ಮಂಜುಮ್ಮೆಲ್ ಬಾಯ್ಸ್’(Manjummel Boys), ಅಪಾರ ಜನಮನ್ನಣೆ ಗಳಿಸುವುದರ ಜತೆ ಬಾಕ್ಸ್ ಆಫೀಸ್ ದಾಖಲೆಗಳನ್ನು ಧೂಳಿಪಟ ಮಾಡಿತು. ಚಿದಂಬರಂ ಎಸ್. ಪೊದುವಾಳ್ ನಿರ್ದೇಶನದ (Director) ಈ ಚಿತ್ರವು ಇದೀಗ ಮಾಲಿವುಡ್ನಲ್ಲಿ ಹೊಸ ದಾಖಲೆಯನ್ನೇ ನಿರ್ಮಿಸಿದೆ. ಕರ್ನಾಟಕ, ತಮಿಳುನಾಡು ಸೇರಿದಂತೆ ಇತರೆ ರಾಜ್ಯಗಳಲ್ಲಿ ಸದ್ದು ಮಾಡಿದ ಮಂಜುಮ್ಮೆಲ್ ಬಾಯ್ಸ್, ಕಳೆದ ಕೆಲವು ತಿಂಗಳುಗಳ ಹಿಂದೆ ದೊಡ್ಡ ಸಂಕಷ್ಟದಲ್ಲಿ ಸಿಲುಕಿಕೊಂಡ ವಿಷಯ ಎಲ್ಲರಿಗೂ ತಿಳಿದೇ ಇದೆ.
ಈ ಹಿಂದಿನ ದಾಖಲೆಗಳನ್ನು ಪುಡಿ ಪುಡಿ ಮಾಡುವ ಮೂಲಕ ಮಾಲಿವುಡ್ನಲ್ಲಿ ತನ್ನದೇ ಹೊಸ ದಾಖಲೆ ಬರೆದು, ‘ಇಂಡಸ್ಟ್ರಿ ಹಿಟ್’ ಎಂಬ ಪಟ್ಟ ಪಡೆದಿರುವ 'ಮಂಜುಮ್ಮೆಲ್ ಬಾಯ್ಸ್' ಚಿತ್ರವನ್ನು ತಮಿಳು ನಟ ಕಮಲ್ ಹಾಸನ್ ನಟಿಸಿದ್ದ ಸೂಪರ್ಹಿಟ್ ‘ಗುಣ’ ಚಿತ್ರ ಶೂಟ್ ಆದ ಗುಹೆಯಲ್ಲೇ ಚಿತ್ರೀಕರಿಸಲಾಯಿತು. ಬಾಕ್ಸ್ ಆಫೀಸ್ನಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ ಮಂಜುಮ್ಮೆಲ್ ಬಾಯ್ಸ್, ಅತೀ ಕಡಿಮೆ ಬಜೆಟ್ನಲ್ಲಿ ನಿರ್ಮಾಣಗೊಂಡು, ಬ್ಲಾಕ್ಬಸ್ಟರ್ ಹಿಟ್ ಸಾಲಿಗೆ ಸೇರಿದ ಸಿನಿಮಾ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಈ ಯಶಸ್ವಿ ಚಿತ್ರವನ್ನು ನಿರ್ದೇಶಿಸಿದ ಚಿದಂಬರಂ, ಇದೀಗ ತಮ್ಮ ಫಿಲಂ ರಿಮೇಕ್ ಆಗುವುದು ನನಗಿಷ್ಟವಿಲ್ಲ ಎಂದಿದ್ದಾರೆ.
ತಮ್ಮ ಸಿನಿಮಾವನ್ನು ಬೇರೆ ಭಾಷೆಗೆ ರೀಮೇಕ್ ಮಾಡುವ ಕಲ್ಪನೆಯನ್ನು ಬಲವಾಗಿ ವಿರೋಧಿಸಿದ ನಿರ್ದೇಶಕರು, "ಮಂಜುಮ್ಮೆಲ್ ಬಾಯ್ಸ್‌ನಂತಹ ಸಿನಿಮಾ ಇತರೆ ಭಾಷೆಯಲ್ಲಿ ರೀಮೇಕ್ ಆದರೆ ನಿಜಕ್ಕೂ ಅದು ಚೆನ್ನಾಗಿ ಮೂಡಿಬರುವುದಿಲ್ಲ. ನನ್ನ ಪ್ರಕಾರ, ಅಂತಹ ಪ್ರಯತ್ನಗಳ ಸಮಯದಲ್ಲಿ ಕೆಲವು ಭಾವನೆಗಳು ಮರೆಯಾಗಿ ಹೋಗುತ್ತವೆ. ನಾವು ಚಿತ್ರೀಕರಿಸಿದ್ದು ನೈಜ ಕಥೆ ಆಧರಿಸಿ ಮತ್ತು ಘಟನೆ ನಡೆದ ಗುಹೆಯಲ್ಲಿ. ಇದು ಕೇರಳ ಜನರ ಸಾಂಸ್ಕೃತಿಕ ಸಂಪರ್ಕ. ಚಿತ್ರ ಯಶಸ್ವಿಯಾಗಿ ಓಡಲು ಸಾಕಷ್ಟು ಅಂಶಗಳಿವೆ. ಹೀಗಾಗಿ ಇದನ್ನು ರೀಮೇಕ್ ಮಾಡುವ ಪ್ರಯತ್ನ ಮಾಡಿದ್ರೆ, ಅದೆಷ್ಟು ಅನುವಾದ ಮಾಡಲಾಗುತ್ತದೆಯೋ ತಿಳಿಯದು" ಎಂದು ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).