Thug Life: ‘ಕನ್ನಡ ತಮಿಳಿನಿಂದ ಹುಟ್ಟಿದ್ದು’ ಎಂದು ಭಾಷೆ ಕುರಿತು ತಮಿಳು ನಟ ಕಮಲ್ ಹಾಸನ್ ನೀಡಿದ ವಿವಾದಾತ್ಮಕ ಹೇಳಿಕೆ ಕೇವಲ ಅವರಿಗೆ ಮಾತ್ರವಲ್ಲದೇ ಅವರು ಅಭಿನಯದ ಚಿತ್ರಕ್ಕೂ ಭಾರೀ ಮುಖಭಂಗವನ್ನೇ ಉಂಟುಮಾಡಿತು ಎಂಬುದಕ್ಕೆ ಥಗ್ ಲೈಫ್ಸೋಲೇ ಜ್ವಲಂತ ಸಾಕ್ಷಿ. ಕನ್ನಡಿಗರಲ್ಲಿ ಕ್ಷಮೆ ಕೇಳುವುದಿಲ್ಲ ಎಂಬ ಸೊಕ್ಕಿನ ಮಾತುಗಳನ್ನಾಡಿದ ಕಮಲ್ಗೆ ಛೀಮಾರಿ ಹಾಕಿದ ಕನ್ನಡಿಗರು, ನಟನ ಚಿತ್ರವನ್ನು ನೋಡಲು ಬಯಸಲಿಲ್ಲ. ಅಂತೆಯೇ ಕರುನಾಡಿನಲ್ಲಿ ಥಗ್ ಲೈಫ್ ಸರಿಯಾದ ಓಪನಿಂಗ್ ಕೂಡ ಸಿಗಲಿಲ್ಲ. ತವರಿನಲ್ಲೇ ಅಬ್ಬರಿಸದ ಚಿತ್ರದ ಸೋಲು ಕುರಿತು ಕಡೆಗೂ ನಿರ್ದೇಶಕರು ಮೌನ ಮುರಿದಿದ್ದಾರೆ.
ಇದನ್ನೂ ಓದಿ: ಕ್ಯಾನ್ಸರ್ನಿಂದ ಬಳಲುತ್ತಿರುವ ವೃದ್ಧೆ ಕಸದ ತೊಟ್ಟಿಯಲ್ಲಿ ಪತ್ತೆ! ಮೊಮ್ಮಗನ ಕೃತ್ಯ ಬಯಲಿಗೆ: ವರದಿ | Cancer Patient
37 ವರ್ಷಗಳ ಬಳಿಕ ಸ್ಟಾರ್ ನಿರ್ದೇಶಕ ಮಣಿರತ್ನಂ ಹಾಗೂ ಕಮಲ್ ಹಾಸನ್ ಕಾಂಬಿನೇಷನ್ನಲ್ಲಿ ಮೂಡಿಬಂದ ಥಗ್ ಲೈಫ್ ಖಂಡಿತ ಸೂಪರ್ ಹಿಟ್ ಆಗಲಿದೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ, ದೊಡ್ಡ ವಿವಾದ ಹಾಗೂ ಚಿತ್ರದಲ್ಲಿ ಮನರಂಜನಾ ಅಂಶಗಳಿಲ್ಲದ ಕಾರಣ ಥಗ್ ಲೈಫ್ ಸಿನಿರಸಿಕರ ಮೆಚ್ಚುಗೆ, ಪ್ರಶಂಸೆಯಿಂದ ದೂರ ಉಳಿಯಿತು. ಬಾಕ್ಸ್ ಆಫೀಸ್ನಲ್ಲಿ ಹೀನಾಯ ಸೋಲು ಅನುಭವಿಸಿದ ಬಹುನಿರೀಕ್ಷಿತ ಚಿತ್ರದ ಕುರಿತು ಇಲ್ಲಿಯವರೆಗೆ ಎಲ್ಲಿಯೂ ಮಾತನಾಡದ ಮಣಿರತ್ನಂ, ಕಡೆಗೂ ಈ ಬಗ್ಗೆ ಮೌನ ಮುರಿದಿದ್ದಾರೆ.
ನಾಯಕನ್ ರೀತಿ ಥಗ್ ಲೈಫ್ ನಿರೀಕ್ಷಿಸಿದ್ದ ಸಿನಿಪ್ರೇಕ್ಷಕರಲ್ಲಿ ನಾನು ಹೇಳುವುದೊಂದೇ. ನಮ್ಮನ್ನು ಕ್ಷಮಿಸಿ. ಹಿಂದಿನ ಇತಿಹಾಸ ಮತ್ತೇ ಸೃಷ್ಟಿಸುವಲ್ಲಿ ನಾವು ಎಡವಿದ್ದೀವಿ. ಹೊಸದೊಂದು ಪ್ರಯತ್ನಕ್ಕೆ ದಾಪುಗಾಲಿಟ್ಟೆವು. ಆದರೆ, ಅದು ಸರಿಯಾದ ಹಾದಿ ಹಿಡಿಯಲಿಲ್ಲ. ಅತಿಯಾದ ನಿರೀಕ್ಷೆಗಳನ್ನು ಹೊಂದಿದ್ದರಿಂದ, ನಮಗೆ ಅನಿರೀಕ್ಷಿತ ಫಲಿತಾಂಶಗಳು ಸಿಕ್ಕಿವೆ ಎಂದು ಹೇಳಿದರು.
ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್ಗಳಲ್ಲಿ ಪ್ರೇಕ್ಷಕರಿಲ್ಲದೆ ಮುಖಭಂಗ ಅನುಭವಿಸಿದ ಥಗ್ ಲೈಫ್, ಇದೀಗ ಬಾಕ್ಸ್ ಆಫೀಸ್ನಲ್ಲಿ ಭಾರೀ ನಷ್ಟವನ್ನು ಎದುರಿಸಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಹೆಸರಾಂತ ಒಟಿಟಿ ಪ್ಲಾಟ್ಫಾರ್ಮ್ ಮೊರೆ ಹೋಗಿರುವ ಚಿತ್ರತಂಡ, ತಮ್ಮ ಚಿತ್ರವನ್ನು ನೆಟ್ಫ್ಲಿಕ್ಸ್ಗೆ ಮಾರಾಟ ಮಾಡಲು ಮುಂದಾಗಿದೆ. ಇದಕ್ಕಾಗಿ ಮಾತುಕತೆ ಕೂಡ ನಡೆಸಿದೆ. ಆದರೆ, ಮೊದಲ ಹಂತದ ಮಾತುಕತೆ ಯಾವುದೇ ಲಾಭ ತಂದುಕೊಟ್ಟಿಲ್ಲ ಎಂದು ವರದಿಯಾಗಿದೆ,(ಏಜೆನ್ಸೀಸ್).