

Iran Israel Conflict: ಮಧ್ಯಪ್ರಾಚ್ಯದಲ್ಲಿ ಭುಗಿಲೆದ್ದಿರುವ ಉದ್ವಿಗ್ನತೆ ಹೀಗೇ ಮುಂದುವರಿದರೆ ಗ್ಯಾಸ್ ಸಿಲಿಂಡರ್ ಮಾತ್ರವಲ್ಲದೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳೂ ತೀವ್ರವಾಗಿ ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ. ಇರಾನ್ನ ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ನಡೆಸಿದ ವೈಮಾನಿಕ ದಾಳಿಯ ಬೆನ್ನಲ್ಲೇ ಕಚ್ಚಾ ತೈಲ ಬೆಲೆಗಳು ದುಬಾರಿಯತ್ತ ಸಾಗಿವೆ. ವಿಶ್ವದ ಬಹುತೇಕ ರಾಷ್ಟ್ರಗಳು ತೈಲದ ಮೇಲೆ ಅವಲಂಬಿತವಾಗಿದೆ. ತನ್ನ ಮೇಲೆ ಟ್ರಂಪ್ ದೇಶ ದಾಳಿ ನಡೆಸಿದ ಕೂಡಲೇ ಇರಾನ್ ಸಂಸತ್ತು ಹಾರ್ಮುಜ್ ಜಲಸಂಧಿಯನ್ನು ಮುಚ್ಚಲು ಅನುಮೋದನೆ ನೀಡಿರುವುದು ಮಹತ್ವದ ಬೆಳವಣಿಗೆ.
ಈ ನಿರ್ಧಾರ ಜಾರಿಗೆ ಬಂದರೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಭಾರಿ ಏರಿಕೆಯಾಗುವ ಮುನ್ಸೂಚನೆ ಸಿಕ್ಕಿದೆ. ವಿಶ್ವದ ಕಚ್ಚಾ ತೈಲ ಪೂರೈಕೆಯ ಸುಮಾರು ಐದನೇ ಒಂದು ಭಾಗವು ಈ ಸಮುದ್ರ ಮಾರ್ಗದ ಮೂಲಕವೇ ಹಾದುಹೋಗುತ್ತದೆ. ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ, ಕಚ್ಚಾ ತೈಲ ಸಾಗಣೆ ವೆಚ್ಚ ದುಪ್ಪಟ್ಟಾಗುವ ಸಾಧ್ಯತೆ ಹೆಚ್ಚಿದೆ. ವರದಿಗಳ ಪ್ರಕಾರ, ಪ್ರಸ್ತುತ ತೈಲ ಬೆಲೆಯಲ್ಲಿ ಶೇ.12ರಷ್ಟು ಏರಿಕೆ ಕಂಡುಬಂದಿದೆ.
ಹಾರ್ಮುಜ್ ಜಲಸಂಧಿಯನ್ನು ಮುಚ್ಚುವ ನಿರ್ಧಾರದ ಹಿನ್ನೆಲೆ ಕೇಂದ್ರ ಸರ್ಕಾರ ಕಚ್ಚಾ ತೈಲ ಪೂರೈಕೆಯ ವಿಷಯದ ಬಗ್ಗೆ ಗಮನಹರಿಸಿದೆ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ. "ದೇಶೀಯ ಕಚ್ಚಾ ತೈಲ ಪೂರೈಕೆಯಲ್ಲಿ ಯಾವುದೇ ಅಡಚಣೆಯಾಗದಂತೆ ನೋಡಿಕೊಳ್ಳಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು" ಎಂದಿದ್ದಾರೆ.
"ಭಾರತವು ದಿನಕ್ಕೆ 5.5 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಬಳಕೆ ಮಾಡುತ್ತದೆ. ಇದರಲ್ಲಿ 1.5ರಿಂದ 2 ಮಿಲಿಯನ್ ಬ್ಯಾರೆಲ್ಗಳು ಹಾರ್ಮುಜ್ ಜಲಸಂಧಿಯ ಮೂಲಕ ಬರುತ್ತವೆ. ಉಳಿದ ಬ್ಯಾರೆಲ್ಗಳು ಇತರ ಮಾರ್ಗಗಳ ಮೂಲಕ ಬರುತ್ತವೆ ಎಂದು ಪುರಿ ಹೇಳಿದ್ದಾರೆ. ಪ್ರಸ್ತುತ ತೈಲ ಕಂಪನಿಗಳು 3 ವಾರಗಳವರೆಗೆ ಸಾಕಷ್ಟು ಮೀಸಲು ಹೊಂದಿವೆ. ಅವುಗಳಲ್ಲಿ ಒಂದು 25 ದಿನಗಳವರೆಗೆ ಸಾಕಷ್ಟು ದಾಸ್ತಾನು ಹೊಂದಿದೆ. ಅಗತ್ಯವಿದ್ದರೆ ಇತರ ವಿಧಾನಗಳ ಮೂಲಕ ಪೂರೈಕೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ" ಎಂದು ತಿಳಿಸಿದ್ದಾರೆ. ಈ ವಿಷಯದ ಬಗ್ಗೆ ಸಂಬಂಧಿತ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದ್ದು, ಚಿಂತಿಸುವ ಅಗತ್ಯವಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.
ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧವು ಕಚ್ಚಾ ತೈಲ ಪೂರೈಕೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳಿದ್ದಾರೆ. ಜಾಗತಿಕ ತೈಲ ರಫ್ತಿನಲ್ಲಿ ಮಧ್ಯಪ್ರಾಚ್ಯವು ಪ್ರಮುಖ ಪ್ರದೇಶವಾಗಿರುವುದರಿಂದ ಪರಿಸ್ಥಿತಿ ತೀರ ಹದಗೆಟ್ಟಿದೆ. ಯುಎಸ್ ಇಂಧನ ಮಾಹಿತಿ ಆಡಳಿತದ ಮಾಹಿತಿಯ ಪ್ರಕಾರ, ಕಳೆದ ವಾರ ಕಚ್ಚಾ ತೈಲ ದಾಸ್ತಾನುಗಳು 11.5 ಮಿಲಿಯನ್ ಬ್ಯಾರೆಲ್ಗಳಷ್ಟು ಕುಸಿದಿವೆ,(ಏಜೆನ್ಸೀಸ್).