

ಲಾತೂರು: ಪ್ರತಿ ವರ್ಷ ಕಾಶೀ ಪೀಠದಿಂದ ಕೊಡಮಾಡುವ ‘ಮಾಲತಿ ಮಹಾರುದ್ರಪ್ಪಾ ಖೇಣಿ ಮಾತೃಶಕ್ತಿ ರಾಷ್ಟ್ರೀಯ ಪುರಸ್ಕಾರ’ವನ್ನು ಈ ಬಾರಿ ಆಪರೇಷನ್ ಸಿಂಧೂರದಲ್ಲಿ ಹುತಾತ್ಮರಾದ ವೀರಯೋಧರ ಪತ್ನಿಯರಿಗೆ ನೀಡುವ ಮೂಲಕ ದೇಶ ರಕ್ಷಣೆಗೆ ಪ್ರಾಣತೆತ್ತವರ ಬೆಂಬಲಕ್ಕೆ ಕಾಶೀ ಪೀಠ ಮುಂದಾಗಿದೆ.
ಲಾತೂರ್ನಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ನಾಂದೇಡದ ಸಚಿನ್ ವನಂಜೇ ಪತ್ನಿ ಮಾಧುರಿ ವನಂಜೆ ಹಾಗೂ ಅಹಲ್ಯಾನಗರದ ಸಂದೀಪ ಗಾಯಕರ ಪತ್ನಿ ದೀಪಾಲಿ ಗಾಯಕರ ಇವರಿಗೆ ಕಾಶೀ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯು ತಲಾ 1 ಲಕ್ಷ ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ.
ಇದೇ ವೇಳೆ ಡಾ. ರಾಜೇಂದ್ರ ವೈದ್ಯನಾಥ, ಲಾತುರದ ತಾನಾಜಿ ರೋಂಗೇ, ಸೋಲಾಪುರದ ಹಕ್ ಮಹಿದಾ ಮೆಹನೂಲ್, ಪುಣೆಯ ನಳಿನಿ ಗಂಗಾಧರ ಚಿರಮೆ, ಸಿದ್ದೇಶ್ವರ ಮೇತ್ರೇ, ಸುನೀತಾ ದೇಶಮುಖ, ಮಾರುತಿ ಮಹಾರಾಜ, ರಾಮೇಶ್ವರ ಬದ್ಧರ್ ಇವರಿಗೆ 10 ಸಾವಿರ ನಗದು ಸಹಿತ ವಿವಿಧ ಪುರಸ್ಕಾರಗಳನ್ನು ನೀಡಲಾಯಿತು.
ಸಮಾರಂಭದಲ್ಲಿ ಆಶೀರ್ವಚನ ನೀಡಿದ ಕಾಶಿ ಜಗದ್ಗುರುಗಳು, ಯೋಗಿ ಮತ್ತು ಯೋಧ ಇಬ್ಬರ ತ್ಯಾಗವನ್ನು ದೇಶ ಮರೆಯುವಂತಿಲ್ಲ. ಯೋಗಿಯು ತನ್ನ ಯೋಗ ಸಾಧನೆಯಿಂದ ಎಲ್ಲ ಮೋಹಗಳನ್ನು ಕಳೆದುಕೊಂಡು ಶಾಶ್ವತ ಸದ್ಗತಿ ಪಡೆದುಕೊಳ್ಳುತ್ತಾನೆ. ಅಂತೆಯೇ ಯೋಧನು ಕೂಡ ತನ್ನ ಪರಿವಾರದ ಮೋಹ-ಮಮಕಾರಗಳನ್ನು ತ್ಯಾಗ ಮಾಡಿ ದೇಶಕ್ಕಾಗಿ ಪ್ರಾಣವನ್ನು ಕೊಡುತ್ತಾನೆ. ಈ ಹಿನ್ನಲೆಯಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿಯವರು ನೀಡಿರುವ ಜೈ ಜವಾನ್ ಜೈ ಕಿಸಾನ್ ಘೋಷಣೆ ಅರ್ಥಪೂರ್ಣವಾಗಿದೆ ಎಂದರು.
ಸಮಾರಂಭದಲ್ಲಿ ಸಂಸದರಾದ ಶಿವರಾಜ್ ಕಾಳಗೆ, ಔಸಾ ಹಿರೇಮಠದ ಡಾ. ಶಾಂತವೀರಲಿಂಗ ಶಿವಾಚಾರ್ಯ ಸ್ವಾಮಿಗಳು, ಶ್ರೀ ಗಹನೀನಾಥ ಮಹಾರಾಜರು, ವೀರಶೈವ ಸಮಾಜದ ಪದಾಧಿಕಾರಿಗಳು, ಗಣ್ಯರು ಪಾಲ್ಗೊಂಡಿದ್ದರು.