ಹೈದರಾಬಾದ್: ಸಾಧಿಸುವ ಛಲವೊಂದಿದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದು ಮತ್ತು ಯಾವುದೇ ನ್ಯೂನತೆಯೂ ಕೂಡ ಅಡ್ಡಿಯಾಗುವುದಿಲ್ಲ ಎಂಬ ಮಾತಿಗೆ ತೆಲಂಗಾಣದ ಗೊಲ್ಲೆ ಪ್ರವೀಣ್ ಕುಮಾರ್ ಎಂಬುವರು ತಾಜಾ ಉದಾಹರಣೆಯಾಗಿದ್ದಾರೆ. ನೈಟ್ ವಾಚ್ಮನ್ ಕೆಲಸ ಮಾಡುತ್ತಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿ, ಕೇವಲ 10 ದಿನಗಳ ಅಂತರದಲ್ಲಿ ಎರಡು ಸರ್ಕಾರಿ ಕೆಲಸ ಗಿಟ್ಟಿಸುವ ಮೂಲಕ ಪ್ರವೀಣ್ ಇತರರಿಗೆ ಮಾದರಿಯಾಗಿ ನಿಂತಿದ್ದಾರೆ.
ಪ್ರವೀಣ್ ಕುಮಾರ್ಗೆ 31 ವರ್ಷ. ಹೈದರಾಬಾದ್ನ ಒಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ರಾತ್ರಿ ಪಾಳಿಯ ವಾಚ್ಮನ್ ಆಗಿ ಕೆಲಸ ಮಾಡುತ್ತಿದ್ದರು. ಶೀಘ್ರದಲ್ಲೇ ಸರ್ಕಾರಿ ಸಂಸ್ಥೆಯಲ್ಲಿ ಪ್ರಾಧ್ಯಪಕ ವೃತ್ತಿಯನ್ನು ಆರಂಭಿಸಲಿದ್ದು, ಅವರ ಪರಿಶ್ರಮ ಇಂದು ಅವರ ಬದುಕನ್ನೇ ಬದಲಿಸಿದೆ. ಅಂದಹಾಗೆ ಪ್ರವೀಣ್ ಅವರು ವಾಣಿಜ್ಯ ಶಾಸ್ತ್ರದಲ್ಲಿ ಜೂನಿಯರ್ ಲೆಕ್ಚರರ್ ಹಾಗೂ ಪಿಜಿ ಟೀಚರ್ ಮತ್ತು ಟ್ರೈನ್ಡ್ ಗ್ರಾಜುಯೇಟ್ ಟೀಚರ್ (ಸಾಮಾಜಿಕ ಅಧ್ಯಯನ) ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ.
ವಾಣಿಜ್ಯ ಮತ್ತು ಶಿಕ್ಷಣ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಪ್ರವೀಣ್, ಒಸ್ಮಾನಿಯಾ ಯೂನಿವರ್ಸಿಟಿಯ ಎಜುಕೇಷನಲ್ ಮಲ್ಟಿಮೀಡಿಯಾ ರೀಸರ್ಚ್ ಸೆಂಟರ್ನಲ್ಲಿ ವಾಚ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ತಿಂಗಳಿಗೆ ಕೇವಲ 9 ಸಾವಿರ ಸಂಬಳ ಪಡೆಯುತ್ತಿದ್ದ ಪ್ರವೀಣ್, ಇದೀಗ ಹೊಸ ಉದ್ಯೋಗಿದಿಂದ 73 ಸಾವಿರದಿಂದ 83 ಸಾವಿರ ರೂ.ವರೆಗೂ ಸಂಪಾದಿಸಲಿದ್ದಾರೆ.
ಕೇವಲ 10 ದಿನಗಳಲ್ಲಿ 2 ಸರ್ಕಾರಿ ಕೆಲಸ ಪಡೆದ ಪ್ರವೀಣ್ ಅವರ ಕತೆ ಇಲ್ಲಿಗೆ ಮುಗಿದಿಲ್ಲ ಏಕೆಂದರೆ, ಮೂರನೇ ಸರ್ಕಾರಿ ಕೆಲಸವೂ ಸಹ ಸಮೀಪದಲ್ಲಿದೆ. ಮತ್ತೊಂದು ಪರೀಕ್ಷೆಯನ್ನು ಬರೆದಿದ್ದು, ಶೀಘ್ರದಲ್ಲೇ ಫಲಿತಾಂಶ ಪ್ರಕಟವಾಗಲಿದೆ. ಈ ಪರೀಕ್ಷೆಯಲ್ಲೂ ಖಂಡಿತ ಪಾಸ್ ಆಗೇ ಆಗುತ್ತೇನೆ ಎಂಬ ವಿಶ್ವಾಸವನ್ನು ಪ್ರವೀಣ್ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ಪ್ರವೀಣ್ ಅವರು ತೆಲಂಗಾಣದ ಮಚೇರಿಯಲ್ ಜಿಲ್ಲೆಯ ಸಣ್ಣ ಗ್ರಾಮವೊಂದರ ಪ್ರತಿಭಾವಂತ. ಅವರ ತಂಡ ಮೇಸ್ತ್ರಿಯಾಗಿ ಮತ್ತು ತಾಯಿ ಬೀಡಿ ಸುತ್ತವ ಕೆಲಸ ಮಾಡುತ್ತಾರೆ. ಕುಟುಂಬದ ಆರ್ಥಿಕ ಸಂಕಷ್ಟದ ನಡುವೆಯೂ ಸ್ನಾತಕೋತ್ತರ ಪದವಿ ಪಡೆದ ಪ್ರವೀಣ್ 2018ರಿಂದಲೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದರು. 2018ರಲ್ಲಿ ಡಿಎಸ್ಸಿ ಉದ್ಯೋಗವನ್ನು ಕೇಲವ ಅರ್ಧ ಅಂಕದಲ್ಲಿ ಕಳೆದುಕೊಂಡಿದ್ದರು. ಆದರೂ ತಮ್ಮ ಛಲವನ್ನು ಬಿಡದ ಪ್ರವೀಣ್ ಇಂದು ಯಶಸ್ಸನ್ನು ಸಾಧಿಸಿದ್ದಾರೆ.
ವಾಚ್ಮನ್ ಆಗಿ ಕೆಲಸ ಮಾಡಿಕೊಂಡೆ ತಯಾರಿ
ಕಳೆದ ಐದು ವರ್ಷಗಳಿಂದ ಪ್ರವೀಣ್ ವಾಚ್ಮನ್ ಕೆಲಸ ಮಾಡುತ್ತಿದ್ದರು. ಹಣದ ಜೊತೆಗೆ ಓದಲು ಸಾಕಷ್ಟು ಸಮಯ ಸಿಗುತ್ತದೆ ಎಂಬ ಉದ್ದೇಶದಿಂದಲೇ ಪ್ರವೀಣ್ ವಾಚ್ಮನ್ ಕೆಲಸವನ್ನು ಆಯ್ಕೆ ಮಾಡಿಕೊಂಡರು. ನನ್ನ ಕೆಲಸದ ಅವಧಿಯಲ್ಲಿ ನಾನು ಬೀದಿ ದೀಪಗಳ ಕೆಳಗೆ ಓದುತ್ತಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿದೆ ಎಂದು ಪ್ರವೀಣ್ ಹೇಳಿದ್ದಾರೆ.
ಪ್ರವೀಣ್ ಅವರ ಈ ಸಾಧನೆಯನ್ನು ಒಸ್ಮಾನಿಯಾ ವಿಶ್ವವಿದ್ಯಾಲಯದ ಇಎಂಆರ್ಸಿ ವಿಭಾಗದ ಅಧಿಕಾರಿಗಳು ಮೆಚ್ಚಿಕೊಂಡಿದ್ದಾರೆ. ಏಕಕಾಲದಲ್ಲಿ ಎರಡು ಸರ್ಕಾರಿ ಉದ್ಯೋಗಗಳನ್ನು ಪಡೆದಿದ್ದಕ್ಕಾಗಿ ಪ್ರವೀಣ್ ಅವರನ್ನು ಅಭಿನಂದಿಸಿದ್ದಾರೆ. ಪ್ರವೀಣ್ ಅವರ ಈ ಸಾಧನೆ ಇತರರಿಗೆ ಮಾದರಿ ಎಂದು ಹೊಗಳಿದ್ದಾರೆ. (ಏಜೆನ್ಸೀಸ್)