ನ್ಯೂಸ್

ಆನ್​ಲೈನ್​ನಲ್ಲಿ ಪರಿಚಯವಾದ ಯುವತಿಯನ್ನು ರೇಪ್​ ಮಾಡಿದ ಕಾಮುಕ! ಮೂರು ವರ್ಷವಾದರೂ ನಿಲ್ಲದ ಹುಚ್ಚು

ಮುಂಬೈ: ಸಾಮಾಜಿಕ ಜಾಲತಾಣಗಳಲ್ಲಿ ಸ್ನೇಹಿತರನ್ನು ಮಾಡಿಕೊಳ್ಳುವ ವೇಳೆ ಅತಿ ಹೆಚ್ಚು ಎಚ್ಚರಿಕೆಯಿಂದಿರಬೇಕು ಎಂದು ಹೇಳಲಾಗುತ್ತದೆ. ಆದರೆ ಅದನ್ನು ಲೆಕ್ಕಕ್ಕೆ ಪರಿಗಣಿಸದ ಅನೇಕರು ಎಲ್ಲರನ್ನು ನಂಬಿ ಪೇಚಿಗೆ ಸಿಲುಕುವ ಘಟನೆ ಆಗಾಗ ನಡೆಯುತ್ತಿರುತ್ತದೆ. ಆನ್​ಲೈನ್​ ಮೂಲಕ ಫ್ರೆಂಡ್​ ಆಗಿದ್ದವನನ್ನು ನಂಬಿದ್ದಕ್ಕೆ ಯುವತಿಯೊಬ್ಬಳು ಮೂರು ವರ್ಷಗಳ ಕಾಲ ನರಕಯಾತನೆ ಅನುಭವಿಸಿದ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.

ಆ ಯುವತಿಗೆ ಮೂರು ವರ್ಷಗಳ ಹಿಂದೆ ಅಂದರೆ 2018ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮದುವೆಯಾಗಿದ್ದ ವ್ಯಕ್ತಿಯೊಬ್ಬನ ಪರಿಚಯ ಬೆಳೆದಿದೆ. ಅದಾದ ನಂತರ ಪರಿಚಯ ಸ್ನೇಹವಾಗಿದೆ. ಅದೇ ಸ್ನೇಹದ ಆಧಾರದ ಮೇಲೆ ಆತ ಯುವತಿಯನ್ನು ತನ್ನ ಮನೆಗೆ ಬರಲು ಕರೆದಿದ್ದ. ಮನೆಯಲ್ಲಿ ಸ್ವಲ್ಪ ಸಮಸ್ಯೆಯಾಗಿದೆ, ನೀನು ಬಂದು ಹೋಗು ಎಂದಿದ್ದ. ಆತನನ್ನು ನಂಬಿ ಮನೆಗೆ ಹೋದ ಯುವತಿಯ ಬಳಿ, ನನ್ನ ಹೆಂಡತಿ ನನ್ನೊಂದಿಗೆ ಜಗಳ ಆಡಿಕೊಂಡು ಮನೆಯಿಂದ ಹೊರಟು ಹೋಗಿದ್ದಾಳೆ ಎಂದು ದುಃಖ ತೋಡಿಕೊಂಡಿದ್ದ. ಯುವತಿ ಆತನಿಗೆ ಸಮಾಧಾನ ಮಾಡಿದ್ದಳು. ಅದಾದ ನಂತರ ಟೀ ಮಾಡಿಕೊಳ್ಳುತ್ತೇನೆಂದು ಹೇಳಿ, ಟೀನಲ್ಲಿ ಮತ್ತು ತರಿಸುವ ಮಾತ್ರೆ ಹಾಕಿ ಆಕೆಯನ್ನು ರೇಪ್​ ಮಾಡಿದ್ದ.

ರೇಪ್​ ಮಾಡಿದ ವಿಡಿಯೋವನ್ನೂ ಚಿತ್ರೀಕರಿಸಿಕೊಂಡಿದ್ದ. ಯುವತಿ ಎಚ್ಚರವಾದ ನಂತರ ಆಕೆಗೆ ವಿಡಿಯೋ ತೋರಿಸಿ ಬೆದರಿಸಿಟ್ಟುಕೊಂಡಿದ್ದ. ಮೂರು ವರ್ಷಗಳ ಕಾಲ ಆಗಾಗ ಯುವತಿಯನ್ನು ಕರೆಸಿಕೊಂಡು ತನ್ನ ಕಾಮದಾಸೆ ತೀರಿಸಿಕೊಂಡಿದ್ದ.

ಮೂರು ವರ್ಷಗಳ ಕಾಲ ಸಂಕಷ್ಟವನ್ನು ಸಹಿಸಿಕೊಂಡು ಯುವತಿ ಮೇ 15ರಂದು ಕಠಿಣ ನಿರ್ಧಾರ ಮಾಡಿದ್ದಾಳೆ. ಧೈರ್ಯವಾಗಿ ಪೊಲೀಸ್​ ಠಾಣೆಗೆ ಬಂದು ಆರೋಪಿಯ ವಿರುದ್ಧ ದೂರು ನೀಡಿದ್ದಾಳೆ. ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)