ಕೊಯಮತ್ತೂರು: ಲಾಕ್ಡೌನ್ ಅವಧಿಯಲ್ಲಿ ವಲಸಿಗರೆಲ್ಲರೂ ಅವರವರ ಊರಿಗೆ ಹಿಂತಿರುಗುವುದಕ್ಕೆ ಏನೇನೋ ಕಸರತ್ತುಗಳನ್ನು ಮಾಡಿದ್ದರು. ಆದರೆ ಈ ಘಟನೆ ಕೊಂಚ ವಿಭಿನ್ನವಾದುದು. ಟೀಶಾಪ್ ಎದುರು ನಿಲ್ಲಿಸಿದ್ದ ಬೈಕ್ ಅನ್ನೇ ಕಳವು ಮಾಡಿದ ಆತ. ಆದರೆ ಆತ ಕಳ್ಳನಲ್ಲ. ಟೀ ಶಾಪ್ಗಳಲ್ಲಿ ಕೆಲಸ ಮಾಡುತ್ತಿದ್ದವ. ತನ್ನ ಕುಟುಂಬದವರನ್ನು ಊರಿಗೆ ಕರೆದೊಯ್ಯಲು ಬೈಕ್ ಕಳವು ಮಾಡಿದ್ದ! ಬೈಕ್ ಮಾಲೀಕ ಈ ಕಳವು ಪ್ರಕರಣದ ಮಾಹಿತಿ ಬಹಿರಂಗಗೊಳಿಸಿದಾಗ ವಲಸಿಗರ ಸಂಕಷ್ಟ ಮತ್ತೊಮ್ಮೆ ಅಲ್ಲೆಲ್ಲ ಚರ್ಚೆಗೀಡಾಯಿತು.
ಕೊಯಮತ್ತೂರು ಸಮೀಪದ ಸುಲೂರು ಎಂಬಲ್ಲಿನ ಕನ್ನಂಪಾಲಯಂ ಎಂಬಲ್ಲಿ ಮೇ 18ರಂದು ನಡೆದ ಘಟನೆ ಇದು. ಬೈಕ್ ಮಾಲೀಕ ಸುರೇಶ್ ಕುಮಾರ್ ಸಣ್ಣ ಲೇಥ್ ವರ್ಕಶಾಪ್ನ ಮಾಲೀಕ. ಆತ ಬಿಚ್ಚಿಟ್ಟ ವಿವರ ಇದು- ಬಾಕಿ ಕೆಲಸ ಪೂರೈಸುವುದಕ್ಕಾಗಿ ಮೇ 18ರಂದು ಶಾಪ್ಗೆ ಹೋಗಿದ್ದೆ. ಬೈಕ್ ಅನ್ನು ಕಟ್ಟಡದ ಹೊರಗೆ ಪಾರ್ಕಿಂಗ್ನಲ್ಲಿ ನಿಲ್ಲಿಸಿದ್ದೆ. ಮಧ್ಯಾಹ್ನ ನಂತರ ಹೊರಗೆ ಬಂದು ನೋಡಿದರೆ ಬೈಕ್ ಇರಲಿಲ್ಲ. ಗಾಬರಿಯಾಗಿ ಸಂಜೆ ಪೊಲೀಸ್ ಠಾಣೆಗೆ ದೂರು ದಾಖಲಿಸಲು ಹೋಗಿದ್ದೆ. ಆದರೆ, ಲಾಕ್ಡೌನ್ ಕರ್ತವ್ಯದ ಕಾರಣ ಪೊಲೀಸರು ದೂರು ಸ್ವೀಕರಿಸಲಿಲ್ಲ. ನಿರಾಸೆಯಿಂದ ಹಿಂದುರಿಗಿದೆ. ದಿಕ್ಕೇ ತೋಚದಂತಾಗಿತ್ತು. ಹತ್ತಿರದ ಅಂಗಡಿಯ ಸಿಸಿಟಿವಿ ದೃಶ್ಯ ಗಮನಿಸಲು ಹೋದೆ. ಅದರಲ್ಲಿ ಬೈಕ್ ಕಳವು ದೃಶ್ಯ ದಾಖಲಾಗಿತ್ತು. ಪರಿಶೀಲಿಸಿದಾಗ ಆತ ಸ್ಥಳೀಯವಾಗಿ ಒಂದೆರಡು ಟೀ ಶಾಪ್ಗಳಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಎಂಬುದು ಗೊತ್ತಾಯಿತು.
ಇದನ್ನೂ ಓದಿ: ಲಾರಿಗೆ ಸಿಲುಕಿ ಟೋಲ್ ನೌಕರ ಸಾವು
ಆತನ ಹೆಸರು ಪ್ರಶಾಂತ್. ಕೂಡಲೇ ಆತ ಇದ್ದ ಮನೆ ಬಳಿಗೆ ಹೋದೆ. ಅಲ್ಲಿದ್ದವರು ಆತ ಊರಿಗೆ ಹೋದುದಾಗಿ ತಿಳಿಸಿದರು. ಆತ ತಂಜಾವೂರು ಸಮೀಪದ ಮನ್ನಾಗುಡಿ ನಿವಾಸಿ. ಪತ್ನಿ ಮತ್ತು ಇಬ್ಬರು ಮಕ್ಕಳನ್ನು ನನ್ನ ಬೈಕ್ನಲ್ಲೇ ಊರಿಗೆ ಕರೆದುಕೊಂಡು ಹೋಗಿದ್ದ. ಅದು ಇಲ್ಲಿಂದ 300 ಕಿ.ಮೀ. ದೂರದ ಊರು. ಇನ್ನೇನು ಮಾಡುವುದು. ಲಾಕ್ಡೌನ್ ಒಮ್ಮೆ ಮುಗಿಯಲಿ ಎಂದು ಕಾಯುತ್ತಿದೆ.
ಮೇ 29ರಂದು ನನಗೊಂದು ಅಚ್ಚರಿ, ಶಾಕ್ ಕಾದಿತ್ತು. ಸ್ಥಳೀಯ ಖಾಸಗಿ ಪಾರ್ಸೆಲ್ ಸರ್ವೀಸ್ ಕಚೇರಿಯಿಂದ ನನ್ನ ಮೊಬೈಲ್ಗೆ ಕರೆ ಬಂತು. ಹೋಗಿ ನೋಡಿದರೆ ನನ್ನ ಬೈಕ್ ಅಲ್ಲಿತ್ತು. ಬೈಕ್ ಕಳವು ಮಾಡಿ ಕೊಂಡು ಹೋದ ವ್ಯಕ್ತಿ ಆರ್ಸಿಯಲ್ಲಿದ್ದ ಅಡ್ರೆಸ್ ನೋಡಿ ಪಾರ್ಸೆಲ್ ಮಾಡಿದ್ದ. ಆದಾಗ್ಯೂ, ನಾನು 1,400 ರೂಪಾಯಿ ಹಣ ಪಾರ್ಸೆಲ್ ಸರ್ವೀಸ್ಗೆ ಪಾವತಿಸಬೇಕಾಗಿ ಬಂತು ಎಂದು ದಿಗಿಲಿನಿಂದ ಮಾಧ್ಯಮ ಪತ್ರಿನಿಧಿಗಳ ಜತೆಗೆ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)