11 ತಿಂಗಳ ಮಗು ಬಕೆಟ್​ಗೆ ಬಿದ್ದು ಸಾವು..

11 Month baby indicative image
Published on

ಪಾಲಕ್ಕಾಡ್​​: ಕೇವಲ ಹನ್ನೊಂದು ತಿಂಗಳ ಮಗುವೊಂದು ಬಕೆಟ್​ ನೀರಿನೊಳಕ್ಕೆ ಬಿದ್ದು ಉಸಿರುಗಟ್ಟಿ ಮೃತಪಟ್ಟ ಘಟನೆ ಕೇರಳದ ಪಾಲಕ್ಕಾಡ್ ಸಮೀಪದ ಚಲಸ್ಸೇರಿ ಎಂಬಲ್ಲಿ ನಡೆದಿದೆ. ಪಾಲಕರ ಕ್ವಾರಂಟೈನ್ ಕಾಲದಲ್ಲಿ ಬಂದರೆಗಿದ ಆಪತ್ತು ಇದು. ಮಗುವಿನ ಹೆಸರು ಮೊಹಮ್ಮದ್ ಇಸ್​ಖಾನ್. ಚಲಸ್ಸೇರಿ ನಿವಾಸಿ ಸಾದಿಕ್​ ಎಂಬುವವರ ಪುತ್ರ.

ಸಾದಿಕ್ ಅವರ ಆಪ್ತ ಸಂಬಂಧಿಕರಿಗೆ ಕರೊನಾ ವೈರಸ್​ ಪಾಸಿಟಿವ್ ಆದ ಕಾರಣ, ಸಾದಿಕ್ ಮತ್ತು ಆತನ ಪತ್ನಿಗೆ ಕ್ವಾರಂಟೈನ್ ಕೂರುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಸೂಚಿಸಿದ್ದರು. ಹೀಗಾಗಿ ತಮ್ಮ 11 ತಿಂಗಳ ಮಗುವನ್ನು ಹತ್ತಿರದ ಸಂಬಂಧಿಕರ ಬಳಿ ಬಿಟ್ಟಿದ್ದರು.

ಶನಿವಾರ ರಾತ್ರಿ ಬಾತ್​ರೂಮ್​ನಲ್ಲಿ ತುಂಬಿಟ್ಟಿದ್ದ ಬಕೆಟ್​ ನೀರಿನೊಳಕ್ಕೆ ಮಗು ಬಿದ್ದಿದೆ. ಈ ವಿಷಯ ಗೊತ್ತಾಗುತ್ತಿದ್ದಂತೆ ಮಗುವನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಿಲ್ಲ. ಮಗುವಿನ ಪ್ರಾಣ ಉಳಿಸುವುದು ಸಾಧ್ಯವಾಗಿಲ್ಲ.

ಮಗುವಿನ ಮೃತದೇಹವನ್ನು ಬಳಿಕ ಖಾಸಗಿ ಆಸ್ಪತ್ರೆಯಿಂದ ತ್ರಿಶ್ಶೂರ್ ಮೆಡಿಕಲ್ ಕಾಲೇಜಿಗೆ ಸ್ಥಳಾಂತರಿಸಿದ್ದು ಕೋವಿಡ್ 19 ಟೆಸ್ಟ್​ಗೆ ಒಳಪಡಿಸಲಾಗಿದೆ. ಇದರ ಫಲಿತಾಂಶ ಇನ್ನೂ ಬಂದಿಲ್ಲ. ಚಲಸ್ಸೇರಿ ಪೊಲೀಸ್​ ಠಾಣೆಯ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net