More

    ಪ್ರಜ್ವಲ್ ರೇವಣ್ಣ ಪ್ರಕರಣ : ಬಿಜೆಪಿ, ಜೆಡಿಎಸ್ ನಾಯಕರನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆಗ್ರಹ

    ಮೈಸೂರು: ಸಂಸದ ಪ್ರಜ್ವಲ್ ರೇವಣ್ಣ ನಡೆಸಿದ್ದಾರೆ ಎನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಆರ್. ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಶಾಸಕ ಪ್ರೀತಮ್ ಗೌಡ ಹಾಗೂ ಹಾಸನ ಬಿಜೆಪಿ ಮುಖಂಡ ದೇವರಾಜೇಗೌಡರನ್ನು ಮಂಪರು ಪರೀಕ್ಷೆಗೆ ಒಳಪಡಿಸಿದರೆ ಪ್ರಕರಣದ ಸತ್ಯಾಂಶ ಬಯಲಿಗೆ ಬರಲಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಹೇಳಿದರು.

    ಲೈಂಕಿಕ ದೌರ್ಜನ್ಯದ ಕುರಿತು ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಮೊದಲೇ ಮಾಹಿತಿ ಇತ್ತು. ಡಿ.23 ರಂದು ಲೈಂಗಿಕ ದೌರ್ಜನ್ಯದ ವಿಡಿಯೋ ಇರುವ ಪೆನ್‌ಡ್ರೈವ್ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮೂಲಕ ಬಿಜೆಪಿ ಹೈಕಮಾಂಡ್‌ಗೆ ತಲುಪಿದೆ. ಹೀಗಾಗಿ ಹಾಸನದಲ್ಲಿ ಬೇರೆ ಅಭ್ಯರ್ಥಿಯನ್ನು ನಿಲ್ಲಿಸುವಂತೆ ಬಿಜೆಪಿ ನಾಯಕರು ಜೆಡಿಎಸ್ ಮುಖಂಡರಿಗೆ ಸಲಹೆ ನೀಡಿದ್ದರು. ಹೀಗಾಗಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಪ್ರಕರಣದ ಪ್ರತಿಯೊಂದು ಮಾಹಿತಿಯೂ ಇದ್ದು, ಅವರನ್ನು ತನಿಖೆಗೆ ಒಳಪಡಿಸಿದರೆ ಸತ್ಯಾಂಶ ಬಯಲಿಗೆ ಬರಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ಲೈಂಗಿಕ ದೌರ್ಜನ್ಯದ ವಿಡಿಯೋ ಮಾಡಿದ್ದು ಪ್ರಜ್ವಲ್ ರೇವಣ್ಣ, ವಿಡಿಯೋ ತೆಗೆದುಕೊಂಡಿದ್ದು ಪ್ರಜ್ವಲ್ ರೇವಣ್ಣ ಅವರ ಮಾಜಿ ಕಾರು ಚಾಲಕ ಕಾರ್ತಿಕ್. ಈ ವಿಡಿಯೋವನ್ನು ಬಿಡುಗಡೆ ಮಾಡಿದ್ದು ಹಾಸನ ಬಿಜೆಪಿ ಮುಖಂಡ ದೇವರಾಜೇಗೌಡ. ಇದರಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪಾತ್ರ ಏನಿದೆ? ಈ ವಿಚಾರದಲ್ಲಿ ಡಿ.ಕೆ. ಶಿವಕುಮಾರ್ ಹೆಸರು ಎಳೆತಂದು ರಾಜಕೀಯ ಲಾಭ ಪಡೆಯಲು ಜೆಡಿಎಸ್ ಹಾಗೂ ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿದರು.

    ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ನಡೆಸಿರುವ ವಿಚಾರದ ಬಗ್ಗೆ ಮಾಹಿತಿ ಇದ್ದರೂ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಪ್ರಜ್ವಲ್ ರೇವಣ್ಣ ಪರವಾಗಿ ಮತಯಾಚನೆ ಮಾಡಿದರು. ಇದೇನಾ ನಿಮ್ಮ ನೈತಿಕತೆ? ದೇವೇಗೌಡರು ಒಕ್ಕಲಿಗ ಸಮುದಾಯದ ಪ್ರಶ್ನಾತೀತ ನಾಯಕ. ಅಂತಹ ನಾಯಕರ ಮಕ್ಕಳು, ಮೊಮ್ಮಕ್ಕಳಾಗಿ ನೀವು ಮಾಡುತ್ತಿರುವ ಕೆಲಸ ಏನು? ಇಳಿ ವಯಸ್ಸಿನಲ್ಲಿ ದೇವೇಗೌಡರಿಗೆ ನೋವುಂಟು ಮಾಡ್ತಿದ್ದೀರಲ್ಲ, ಇದು ಸರಿನಾ? ಒಕ್ಕಲಿಗ ಸಮುದಾಯದ ರಕ್ಷಣೆ ಮಾಡುತ್ತೇವೆ ಅಂತೀರಾ. ಆದರೆ, ಒಕ್ಕಲಿಗ ಸಮುದಾಯದ ಹೆಣ್ಣುಮಕ್ಕಳೇ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಇದಕ್ಕೇನು ಹೇಳ್ತೀರಾ ಎಂದು ಪ್ರಶ್ನಿಸಿದರು.

    ಎಸ್‌ಐಟಿ ತನಿಖೆ ಸರಿಯಾಗಿ ನಡೆಯುತ್ತಿಲ್ಲ ಎಂದು ಈಗಲೇ ಆರೋಪ ಮಾಡುವುದು ಸರಿಯಲ್ಲ. ಪ್ರಜ್ವಲ್ ರೇವಣ್ಣ ಇನ್ನೂ ವಿಚಾರಣೆಗೆ ಆಗಮಿಸಿಲ್ಲ. ಹೀಗಿರುವ ತನಿಖೆ ಸರಿ ಇಲ್ಲ ಎಂಬ ಆರೋಪದಲ್ಲಿ ಹುರುಳಿಲ್ಲ. ಸುಳ್ಳು ಮಾಹಿತಿ ಹರಡಿ ದಿಕ್ಕು ತಪ್ಪಿಸುವ ಕಾರ್ಯವನ್ನು ಬಿಜೆಪಿ ಹಾಗೂ ಜೆಡಿಎಸ್ ಮಾಡುತ್ತಿದೆ. ಡಿ.ಕೆ. ಶಿವಕುಮಾರ್ ಒಕ್ಕಲಿಗ ನಾಯಕನಾಗಿ ಬೆಳೆಯುತ್ತಿರುವ ಕಾರಣಕ್ಕೆ ಅವರ ಮೇಲೆ ಆರೋಪ ಮಾಡುವುದು ಸರಿಯಲ್ಲ. ಡಿ.ಕೆ. ಶಿವಕುಮಾರ್ ಹಾಗೂ ದೇವರಾಜೇಗೌಡ ಪರಸ್ಪರ ಮಾತನಾಡಿದ್ದನ್ನೇ ತಪ್ಪು ಎಂದು ಬಿಂಬಿಸುವ ಪ್ರಯತ್ನ ನಡೆಸಲಾಗಿದೆ. ಇಬ್ಬರ ಜಗಳದಲ್ಲಿ ಆರ್. ಅಶೋಕ್ ಒಕ್ಕಲಿಗ ನಾಯಕರಾಗಿ ಬೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಅವರೇ ನಿಮ್ಮ ಅಣ್ಣನ ಮಗ ಎಂಬ ಕಾರಣಕ್ಕೆ ಏನು ಮಾಡಿದರೂ ಸರಿ ಎಂಬ ಮನಸ್ಥಿತಿ ಸರಿಯಲ್ಲ, ತನಿಖೆಗೆ ನೀವು ಸಹಕಾರ ನೀಡಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts