ನ್ಯೂಸ್

VIDEO| ಚಲಿಸುವ ಕಾರಿನ ಮೇಲೆ ಪಟಾಕಿ ಸಿಡಿಸಿ ಹುಚ್ಚಾಟ

ಗುರುಗ್ರಾಮ: ಸಾಮಾನ್ಯವಾಗಿ ನಾವು ಪಟಾಕಿಗಳನ್ನು ಹಬ್ಬ ಹರಿದಿಮನ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಸಿಡಿಸುತ್ತೇವೆ. ಆದರೆ, ಘಟನೆಯೊಂದರಲ್ಲಿ ಕೆಲವು ವ್ಯಕ್ತಿಗಳು ಪಟಾಕಿಯನ್ನು ಚಲಿಸುವ ಕಾರಿನ ಮೇಲೆ ಸಿಡಿಸಿ ಹುಚ್ಚಾಟ ಮೆರೆದಿರುವ ಘಟನೆ ನವದೆಹಲಿಯ ಗುರುಗ್ರಾಮದಲ್ಲಿ ನಡೆದಿದೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಸಾಕಷ್ಟು ಖಂಡನೆಗೆ ಗುರಿಯಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ಒಂದನ್ನು ರಚಿಸಿದ್ದಾರೆ.

ವೈರಲ್​ ಆಗಿರುವ ವಿಡಿಯೋದಲ್ಲಿ ಕಪ್ಪು ಬಣ್ಣದ ಎಸ್​ಯುವಿಯ ಬಾನೆಟ್/ಮೇಲ್ಭಾಗದಲ್ಲಿ ಪಟಾಕಿಗಳನ್ನು ಹಚ್ಚಿ ಇಡಲಾಗಿದ್ದು, ಮೆಟ್ರೋ ಪಿಲ್ಲರ್​ನಡಿ ಯುವಕರ ಗುಂಪೊಂದು ತಮ್ಮ ಇಷ್ಟದಂತೆ ಅಡಾದಿಡ್ಡಿಯಾಗಿ ವಾಹನವನ್ನು ಚಲಾಯಿಸುತ್ತಾರೆ. ಈ ವೇಳೆ ಕಾರಿನಲ್ಲಿರುವ ವ್ಯಕ್ತಿಯೋರ್ವ ಬಾಗಿಲನ್ನು ತೆಗೆದು ಫುಟ್​ಸ್ಟೆಪ್​ ಮೇಲೆ ನಿಂತು ಜೋರಾಗಿ ಕೂಗಾಡುತ್ತಿರುವುದನ್ನು ನೋಡಬಹುದಾಗಿದೆ.

ಘಟನೆಯು ಗುರುಗ್ರಾಮದ ಗಾಲ್ಫ್​ ರಸ್ತೆಯಲ್ಲಿ ನಡೆದಿದ್ದು, ಪೊಲೀಸರು ಪ್ರದೇಶದ ಸುತ್ತ ಅಳವಡಿಸಿರುವ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಆರೋಪಿಗಳನ್ನು ಪತ್ತೆಹಚ್ಚುವುದಾಗಿ ತಿಳಿಸಿದ್ದಾರೆ. ಆದರೆ, ಆರೋಪಿಗಳು ಕಾರಿನ ನಂಬರ್​ಪ್ಲೇಟ್​ ತೆಗೆದಿದ್ದು, ಅವರನ್ನು ಹಿಡಿಯುವುದು ಮತ್ತಷ್ಟು ಕಷ್ಟವಾಗಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ವರ್ಷ ಗುರುಗ್ರಾಮದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು, ಪ್ರಕರಣ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಇದೀಗ ಮತ್ತೊಮ್ಮೆ ಇದೇ ರೀತಿಯ ಘಟನೆ ನಡೆದಿದ್ದು, ಪೊಲೀಸರು ಯಾವ ರೀತಿಯ ಕ್ರಮಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.