ಅಂಕಾರ (ಟರ್ಕಿ): ಬ್ರೇಕ್ ಫಾಸ್ಟ್ ತಯಾರಿಸಿಕೊಂಡು ಬೆಡ್ ಮೇಲೆ ಮಲಗಿದ್ದ ಪತಿರಾಯನಿಗೆ ಸರ್ಪ್ರೈಸ್ ಕೊಡಲು ಬಂದ ಪತ್ನಿಗೆ ಬಿಗ್ ಶಾಕ್ ಒಂದು ಎದುರಾಗಿತ್ತು. ಸವಿನಿದ್ದೆಯನ್ನು ಭಂಗಗೊಳಿಸಿದ್ದಕ್ಕೆ ಕೋಪಗೊಂಡ ಪತಿರಾಯ ಪತ್ನಿ ಮೇಲೆ ಕುದಿಯುವ ನೀರು ಸುರಿದಿರುವ ಆರೋಪ ಕೇಳಿಬಂದಿದೆ.
ಆರೋಪಿ ಪತಿ ಅಲಿ ಆಯೆ (28) ಇನ್ನು ನಿದ್ರಿಸಲು ಬಯಸಿದ್ದ. ಆದರೆ, ಆತನ ಪತ್ನಿ ರುಕಿಯೆ ಆಯೆ (23) ಎಚ್ಚರಗೊಳಿಸಿದ್ದಕ್ಕೆ ಸಿಟ್ಟಿನಿಂದ ಕೂಗಾಡಿ ಆಕೆಯ ಮೇಲೆ ಕುದಿಯುವ ನೀರು ಎರಚಿದ್ದಾನೆ. ಈ ಘಟನೆ ಜನವರಿ 9ರಂದು ಸೆಂಟ್ರಲ್ ಟರ್ಕಿಶ್ ದೇಶದ ಕೊನ್ಯಾ ನಗರದ ನಿವಾಸದಲ್ಲಿ ನಡೆದಿದೆ.
ಸದ್ಯ ಟರ್ಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ರುಕಿಯೆ ತನ್ನ ಭಯಾನಕ ಗಾಯಗಳನ್ನು ಸಾರ್ವಜನಿಕವಾಗಿ ಹೊರಹಾಕಿದ್ದು, ಅವಳ ಬೆನ್ನಿನ ಚರ್ಮ ಸಂಪೂರ್ಣ ಸುಟ್ಟು ಹೋಗಿ ಕೆಂಪು ಬಣ್ಣಕ್ಕೆ ತಿರುಗಿರುವುದು ನೋಡಲು ಭೀಕರವಾಗಿದೆ. ಬಂಧಿತ ಆರೋಪಿ ಅಲಿ ಆಯೆನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.
ದಂಪತಿ ಅಲಿ ಆಯೆ ಮತ್ತು ರುಕಿಯೆ ಆಯೆ ಐದು ವರ್ಷಗಳ ಹಿಂದಷ್ಟೇ ಮದುವೆಯಾಗಿದ್ದರು. ನಡೆದ ಘಟನೆಯ ಬಗ್ಗೆ ಮಾತನಾಡಿರುವ ರುಕಿಯೆ, ಸರ್ಪ್ರೈಸ್ ನೀಡಲೆಂದು ಬ್ರೇಕ್ ಫಾಸ್ಟ್ ತಯಾರಿಸಿಕೊಂಡು ಬೆಡ್ ಮೇಲೆ ಮಲಗಿದ್ದ ಪತಿಯನ್ನು ಎಚ್ಚರಗೊಳಿಸಿದೆ. ಮಲಗಲು ಬಿಡುತ್ತಿಲ್ಲ ಎಂದು ಎದ್ದ ತಕ್ಷಣ ನನ್ನ ಮೇಲೆ ಕೂಗಾಡಿದರು. ನಾನೆಲ್ಲವನ್ನು ತಯಾರು ಮಾಡಿಕೊಂಡು ಸರ್ಪ್ರೈಸ್ ಕೊಡಲೆಂದು ಹೋದೆ. ಆದರೆ, ಕೋಪಗೊಂಡಿದ್ದ ಅವರು ನನಗೆ ತೊಂದರೆ ಕೊಡಬೇಡ ಎಂದು ಕಿರುಚಾಡಿದರು. ಹೀಗಾಗಿ ಆತನನ್ನು ಸುಮ್ಮನೇ ಬಿಟ್ಟು ನನ್ನ ಮಗಳೊಂದಿಗೆ ಬ್ರೇಕ್ಫಾಸ್ಟ್ ಮಾಡಲು ಕುಳಿತುಕೊಂಡೆ ಎಂದು ವಿವರಿಸಿದ್ದಾಳೆ.
ಇನ್ನು ಕೆಟ್ಟ ಮೂಡ್ನಲ್ಲೇ ಇದ್ದ ಪತಿ ನನ್ನ ಬಳಿ ಬಂದು ಡಿವೋರ್ಸ್ ನೀಡಿ ಮಗಳನ್ನು ಸುಪರ್ದಿಗೆ ಪಡೆದುಕೊಳ್ಳುವುದಾಗಿ ಹೇಳಿದರು. ಅಷ್ಟಕ್ಕೆ ಸುಮ್ಮನಾಗದೇ ಕುದಿಯುವ ನೀರನನ್ನು ನನ್ನ ಕುತ್ತಿಗೆಯ ಕೆಳಗಡೆ ಸುರಿದರು. ನನ್ನ ಮುಖಕ್ಕೆ ಎಸೆಯುವ ಪ್ರಯತ್ನ ಮಾಡಿದರು. ಆದರೆ, ನಾನು ಮುಖವನ್ನು ತಿರುಗಿಸಿಕೊಂಡು ತಕ್ಷಣ ಓಡಿದೆ. ನನ್ನ ಟೀ-ಶರ್ಟ್ ಚರ್ಮಕ್ಕೆ ಅಂಟಿಕೊಂಡಿತ್ತು. ಇನ್ನಷ್ಟು ನೀರನ್ನು ಎರಚಿದರು. ಅಲ್ಲಿಂದ ಪರಾರಿಯಾಗಲು ಯತ್ನಿಸಿದೆ. ಆದರೆ, ನೋವಿನಿಂದ ಅಲ್ಲಿಯೇ ಕುಳಿತೆ. ನನ್ನ ಮಗಳಿಗೂ ನೀರು ತಾಗಿ ಅಳುತ್ತಿದ್ದಳು. ಇದೇ ವೇಳೆ ನನ್ನ ಕೂದಲು ಹಿಡಿದುಕೊಂಡ ಪತಿ ಬಾತ್ರೂಮ್ಗೆ ಎಳೆದುಕೊಂಡು ಹೋದರು ಎಂದು ಆರೋಪಿಸಿದ್ದಾಳೆ.
ನನ್ನ ಮಗಳು ಅಳುವುದನ್ನು ತಡೆಯಲಾಗದೆ ಹೇಗೋ ಎಲ್ಲ ನೋವನ್ನು ನುಂಗಿಕೊಂಡು ಎದ್ದು ನಿಂತು ಮೊಬೈಲ್ ತೆಗೆದುಕೊಂಡು ಪತಿಯ ತಂದೆಗೆ ಫೋನ್ ಮಾಡಿದೆ. ಬಳಿಕ ನೆರೆಯ ಮನೆಗೆ ಓಡಿ ಹೋಗಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ. ಬಳಿಕ ಆರೋಪಿಯನ್ನು ಬಂಧಿಸಲಾಯಿತು. (ಏಜೆನ್ಸೀಸ್)