ನವದೆಹಲಿ: ಸಂತೋಷ ಅತಿಯಾದರೂ ಒಳ್ಳೆಯದಲ್ಲ. ಜಾಸ್ತಿ ನಕ್ಕರೆ ಅಳು ನಿಮ್ಮನ್ನು ಹಿಂಬಾಲಿಸಿಕೊಂಡು ಬರುತ್ತದೆ ಎನ್ನುತ್ತಾರೆ. ಅದಕ್ಕೆ ಸಾಕ್ಷಿಯೆನ್ನುವಂತೆ ಎಂಬಿಬಿಎಸ್ ಪದವಿ ಪರೀಕ್ಷೆ ಮುಗಿಸಿದೆ ಎನ್ನುವ ಸಂತಸದಿಂದ ಬೀಗುತ್ತಿದ್ದ ಯುವಕನೊಬ್ಬ ನ್ಯಾಯಾಂಗ ಬಂಧನಕ್ಕೊಳಗಾಗಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ಲಕ್ಷಯ್ ಹೆಸರಿನ ಯುವಕ ಎಂಬಿಬಿಎಸ್ನ ಕೊನೆಯ ವರ್ಷದ ಪರೀಕ್ಷೆ ಬರೆದಿದ್ದು, ಅದರ ಸಂತಸವನ್ನು ಹಂಚಿಕೊಳ್ಳುವ ಸಲುವಾಗಿ ಸಣ್ಣದೊಂದು ಪಾರ್ಟಿ ಮಾಡಲು ಹೊರಟಿದ್ದ. ಅದರಂತೆ ತನ್ನ ಅಣ್ಣ ಕರಣ್ (29) ಮತ್ತು ಸ್ನೇಹಿತರಾದ ಧೀರಜ್ ಮತ್ತು ಅವಿನಾಶ್ ಜತೆ ಬುಧವಾರ ರಾತ್ರಿ ನಗರದ ರೋಹಿಣಿ ಸ್ಟ್ರೀಟ್ನಲ್ಲಿರುವ ಐಸ್ ಕ್ರೀಂ ಪಾರ್ಲರ್ ಒಂದಕ್ಕೆ ತೆರಳಿದ್ದಾನೆ. ಅಲ್ಲಿ ಅಮಿತ್ ಶರ್ಮಾ ಎನ್ನುವಾತ ತನ್ನ ಸ್ನೇಹಿತ ಮತ್ತು ಸೋದರ ಸಂಬಂಧಿಯೊಂದಿಗೆ ಐಸ್ ಕ್ರೀಂ ತಿನ್ನುತ್ತಾ ಕುಳಿತಿದ್ದ. ಸಂತಸದ ಅಲೆಯಲ್ಲಿದ್ದ ಲಕ್ಷಯ್ ತಮ್ಮ ಐಸ್ ಕ್ರೀಂಗೆ ಹಣ ಪಾವತಿಸುವುದಷ್ಟೇ ಅಲ್ಲದೆ ಅಮಿತ್ ಶರ್ಮಾ ತಂಡದ ಐಸ್ ಕ್ರೀಂ ಬಿಲ್ನ್ನು ಸಹ ಪಾವತಿಸುವುದಾಗಿ ತಿಳಿಸಿದ್ದಾನೆ. ನಾವು ತಿಂದಿರುವ ಐಸ್ ಕ್ರೀಂಗೆ ನೀನೇಕೆ ಪಾವತಿ ಮಾಡುತ್ತೀಯ ಎಂದು ಅಲ್ಲಿ ಲಕ್ಷಯ್ ಮತ್ತು ಅಮಿತ್ ನಡುವೆ ಮಾತಿನ ಚಕಮಕಿ ನಡೆದಿದೆ. ಸಣ್ಣ ಪ್ರಮಾಣದ ಜಗಳವೂ ನಡೆದಿದೆ.
ಪದವಿ ಮುಗಿದ ಸಂತಸದಲ್ಲಿದ್ದ ನನ್ನ ಜೊತೆ ಜಗಳವಾಡಿದ ಅಮಿತ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಅದಾಗಲೇ ಲಕ್ಷಯ್ ತೀರ್ಮಾನ ಮಾಡಿಬಿಟ್ಟಿದ್ದ. ಐಸ್ ಕ್ರೀಂ ಪಾರ್ಲರ್ನಲ್ಲಿ ತಣ್ಣಗಾದ ಜಗಳ ಮತ್ತೆ ಮಧ್ಯರಾತ್ರಿಯಲ್ಲಿ ಊರಿನ ಶಾಲೆಯ ಹತ್ತಿರ ಹೆಚ್ಚಾಗಿದೆ. ಅಮಿತ್ಗೆ ಹೊಡೆಯುವುದಕ್ಕೆ ಸಿದ್ಧವಾಗಿ ಬಂದಿದ್ದ ಲಕ್ಷಯ್ ಗ್ಯಾಂಗ್ ಕೋಲುಗಳಿಂದ ಅಮಿತ್ಗೆ ಹೊಡೆದಿದ್ದಾರೆ. ಅಮಿತ್ನ ತಲೆಗೆ ಬಲವಾದ ಏಟು ಬಿದ್ದ ಕಾರಣ ಆತ ಮೃತನಾಗಿದ್ದಾನೆ.
ಅಮಿತ್ನನ್ನು ಕೊಲೆ ಮಾಡಿದ ಆರೋಪಿಗಳ ಗ್ಯಾಂಗ್ ಪೊಲೀಸರಿಗೆ ಸಿಗದಿರುವಂತೆ ತಲೆ ಮರೆಸಿಕೊಂಡಿತ್ತು. ಆದರೆ ಘಟನೆಯನ್ನು ಕಣ್ಣಾರೆ ಕಂಡ ಸಾಕ್ಷ್ಯಗಳು ಮತ್ತು ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಮೀರತ್ನ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಮುಗಿಸಿರುವ ಲಕ್ಷಯ್, ಮೋಟಾರ್ ಸಂಸ್ಥೆಯಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿರುವ ಕರಣ್ ಮತ್ತು ಧೀರಜ್ ಹಾಗೂ ಆಟೋ ಸ್ಪೇರ್ ಪಾರ್ಟ್ಸ್ಗಳ ಅಂಗಡಿ ಇಟ್ಟುಕೊಂಡಿರುವ ಅವಿನಾಶ್ ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ. (ಏಜೆನ್ಸೀಸ್)