ನ್ಯೂಸ್

ಮದುವೆ ಮಾತುಕತೆಗೆ ಕರೆಸಿ, ಯುವಕನನ್ನು ಹತ್ಯೆಗೈದ ವಧು ಕುಟುಂಬ! 9 ಮಂದಿ ಅರೆಸ್ಟ್, ಇಬ್ಬರು ನಾಪತ್ತೆ​ | Marriage Proposal

Marriage Proposal: ಮದುವೆ ಪ್ರಸ್ತಾಪದ ಬಗ್ಗೆ ಚರ್ಚಿಸೋಣ ನಮ್ಮ ಮನೆಗೆ ಬನ್ನಿ ಎಂದು ಯುವಕನನ್ನು ತಮ್ಮ ಜಾಗಕ್ಕೆ ಕರೆಸಿಕೊಂಡ ಯುವತಿಯ ಕುಟುಂಬಸ್ಥರು, ಆತನನ್ನು ರೂಮ್​ನಲ್ಲಿ ಕೂಡಿಕೊಂಡು ಹಿಗ್ಗಾಮುಗ್ಗಾ ಥಳಿಸಿ, ಉಸಿರು ನಿಲ್ಲಿಸಿದ ಘಟನೆ ಮಹಾರಾಷ್ಟ್ರದಲ್ಲಿ ವರದಿಯಾಗಿದೆ.

ಯುವತಿಯೊಂದಿಗೆ ಮದುವೆ ಮಾಡಿಕೊಳ್ಳುವ ವಿಚಾರವನ್ನು ತನ್ನ ಮನೆಯಲ್ಲಿ ಮಾತನಾಡಿದ್ದ ಯುವಕನನ್ನು ತಮ್ಮ ಮನೆಗೆ ಬರುವಂತೆ ಹೇಳಿದ ಯುವತಿಯ ಕುಟುಂಬಸ್ಥರು, ಆತನನ್ನು ರೂಮ್​ನೊಳಗೆ ಕೂಡಿ, ಮನಬಂದಂತೆ ಥಳಿಸಿದ್ದಾರೆ. ಈ ವೇಳೆ ಗಂಭೀರವಾಗಿ ಗಾಯಗೊಂಡ ಯುವಕ, ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡಿ, ಕಡೆಗೆ ಚಿಕಿತ್ಸೆ ಫಲಕಾರಿಯಾಗದೆ ಉಸಿರು ಚೆಲ್ಲಿದ್ದಾನೆ ಎಂದು ಮಹಾರಾಷ್ಟ್ರ ಪೊಲೀಸರು ತಿಳಿಸಿದ್ದಾರೆ.

ಮೃತ ಯುವಕನನ್ನು ರಾಮೇಶ್ವರ್ ಘೆಂಗಟ್ (26) ಎಂದು ಗುರುತಿಸಲಾಗಿದೆ. ಈ ಘಟನೆ ಜುಲೈ 22ರಂದು ಸಂಭವಿಸಿದ್ದು, ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ, ಅಗತ್ಯ ಚಿಕಿತ್ಸೆಯನ್ನು ಕೊಡಿಸಲಾಗಿತ್ತು. ಈ ಪ್ರಕರಣದಲ್ಲಿ ಯುವತಿಯ ತಂದೆ ಸೇರಿ ಒಟ್ಟು ಒಂಬತ್ತು ಜನರನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ. ಇನ್ನೂ ಇಬ್ಬರು ತಲೆಮರೆಸಿಕೊಂಡಿದ್ದು, ಅವರ ಸೆರೆಗೆ ಬಲೆ ಬೀಸಲಾಗಿದೆ ಎಂದು ಖಾಕಿ ಪಡೆ ತಿಳಿಸಿದೆ.

"ರಾಮೇಶ್ವರ್ ಘೆಂಗಟ್​ನನ್ನು ಮನಬಂದಂತೆ ಥಳಿಸಿ, ಕೊಲೆಗೈದ ಆರೋಪದಡಿ ಯುವತಿಯ ತಂದೆ ಪ್ರಶಾಂತ್ ಸರ್ಸರ್ ಸೇರಿ ಒಟ್ಟು 11 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದರಲ್ಲಿ ಪ್ರಸ್ತುತ 9 ಮಂದಿಯನ್ನು ಬಂಧಿಸಲಾಗಿದ್ದು, ಇನ್ನಿಬ್ಬರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ" ಎಂದು ಸಾಂಗ್ವಿಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಜಿತೇಂದ್ರ ಕೋಲಿ ಹೇಳಿದ್ದಾರೆ.

ಮೃತನಿಗೆ ಕ್ರಿಮಿನಲ್​ ಹಿನ್ನೆಲೆ

ಮೃತ ಯುವಕನ ವಿರುದ್ಧ ಹಲವಾರು ಕ್ರಿಮಿನಲ್ ಪ್ರಕರಣಗಳಿವೆ. ತಮ್ಮ ಯುವತಿಯೊಂದಿಗೆ ಆತನಿಗೆ ಪ್ರೇಮ ಸಂಬಂಧವಿತ್ತು ಎಂಬ ಕಾರಣಕ್ಕೆ ಕುಟುಂಬಸ್ಥರು ಈ ಮದುವೆಗೆ ನಿರಾಕರಿಸಿದ್ದರು ಎಂದು ವರದಿಯಾಗಿದೆ. ಮುಖ್ಯವಾಗಿ, ಇಬ್ಬರೂ ಮದುವೆಯಾಗಲು ದೃಢನಿಶ್ಚಯ ಹೊಂದಿದ್ದರಿಂದ, ಯುವತಿಯ ಕುಟುಂಬವು ಹೇಗಾದರೂ ಮಾಡಿ ಅವನಿಂದ ಈಕೆಯನ್ನು ದೂರ ಮಾಡಲು ಸಂಚು ಹೂಡಿದ್ದರು. ಇದೇ ಕಾರಣಕ್ಕಾಗಿ, ರಾಮೇಶ್ವರ್​ನನ್ನು ಮದುವೆ ಪ್ರಸ್ತಾಪದ ನೆಪದಲ್ಲಿ ಮನೆಗೆ ಕರೆಸಿಕೊಂಡು, ಸಾಯುವ ಮಟ್ಟಿಗೆ ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ,(ಏಜೆನ್ಸೀಸ್).