ವಿಡಿಸಿಸಿ ಬ್ಯಾಂಕ್‌ನ 106 ನೇ ವಾರ್ಷಿಕ ಸಭೆ, ಲಾಭದಲ್ಲಿ ರಾಜ್ಯದಲ್ಲೇ ಮೂರನೇ ಸ್ಥಾನ ಎಂದ ಸಚಿವ ಶಿವಾನಂದ ಪಾಟೀಲ

DCC BANK VARSHIKA SABHE
ವಿಜಯಪುರ ನಗರದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಆವರಣದಲ್ಲಿ ಶನಿವಾರ ಆಯೋಜಿಸಿದ್ದ 106ನೇ ವಾರ್ಷಿಕ ಸಭೆಯನ್ನು ಸಚಿವ ಶಿವಾನಂದ ಪಾಟೀಲ ಉದ್ಘಾಟಿಸಿದರು. ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮೀಜಿ, ತಿಕೋಟದ ಚನ್ನಮಲ್ಲಿಕಾರ್ಜುನ ಶ್ರೀಗಳು, ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ ಮತ್ತಿತರರಿದ್ದಾರೆ.
Published on

ವಿಜಯಪುರ: ರಾಜ್ಯದಲ್ಲೇ ವಿಡಿಸಿಸಿ ಬ್ಯಾಂಕ್ ಲಾಭದಲ್ಲಿ 3ನೇ ಸ್ಥಾನದಲ್ಲಿದೆ ಎಂದು ಬ್ಯಾಂಕ್ ಅಧ್ಯಕ್ಷರೂ ಆಗಿರುವ ಸಚಿವ ಶಿವಾನಂದ ಪಾಟೀಲ ಹೆಮ್ಮೆ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಆವರಣದಲ್ಲಿ ಶನಿವಾರ ಆಯೋಜಿಸಿದ್ದ 106ನೇ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಷ್ಟದಲ್ಲಿರುವ ಜಿಲ್ಲೆಯ ಸಹಕಾರಿ ಸಂಸ್ಥೆಗಳು ಹಾಗೂ ಸಕ್ಕರೆ ಕಾರ್ಖಾನೆಗಳು, ಹಾಲು ಒಕ್ಕೂಟಗಳಿಗೆ ನೆರವು ನೀಡಿ ಅವುಗಳ ಪುನಶ್ಚೇತನಕ್ಕೆ ಕಾರಣವಾದ ಹೆಗ್ಗಳಿಕೆ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗೆ ಸಲ್ಲುತ್ತದೆ. 2024-25ನೇ ಸಾಲಿನಲ್ಲಿ ಬ್ಯಾಂಕ್ 8.53 ಕೋಟಿ ರೂ. ತೆರಿಗೆ ಪಾವತಿ ಬಳಿಕ 25.18 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಇತಿಹಾದಲ್ಲೇ ಇದು ದಾಖಲೆ ಎಂದರು.

ಕೇವಲ 63,000 ರೂ.ಗಳೊಂದಿಗೆ ಆರಂಭವಾಗಿದ್ದ ಡಿಸಿಸಿ ಬ್ಯಾಂಕ್ ಇಂದು 14,500 ಕೋಟಿ ರೂ. ವಹಿವಾಟು ಹೊಂದಿದ್ದು, ರಾಜ್ಯದಲ್ಲಿ ಮೂರನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಆದಾಯ ತೆರಿಗೆ ಪಾವತಿಯಲ್ಲಿನ ಶಿಸ್ತಿಗೆ ಕೇಂದ್ರ ಸರ್ಕಾರದ ಮೆಚ್ಚುಗೆಗೆ ಪಾತ್ರವಾಗಿದೆ. ಹೊಸ ಜಿಲ್ಲೆಗಳ ರಚನೆ ನಂತರ ಸರ್ಕಾರದ ನಿಯಮಗಳ ಪ್ರಕಾರ ವಿಜಾಪುರ ಡಿಸಿಸಿ ಬ್ಯಾಂಕ್ ವಿಭಜನೆ ಮಾಡಿದಾಗ ಬಾಗಲಕೋಟ ಡಿಸಿಸಿ ಬ್ಯಾಂಕ್ ಸ್ಥಿತಿ ವಿಜಯಪುರ ಬ್ಯಾಂಕ್‌ಗಿಂತ ಉತ್ತಮವಾಗಿತ್ತು. ವಿಭಜನೆ ಸಂದರ್ಭದಲ್ಲಿ ಇದ್ದ ಸ್ಥಿತಿ ಗಮನಿಸಿದರೆ ಆಗ 317 ಕೋಟಿ ರೂ.ಗಳಿಂದ ದುಡಿಯುವ ಬಂಡವಾಳ 4902 ಕೋಟಿ ರೂ.ಗೆ ಏರಿದ್ದು ಗಮನಾರ್ಹ ಸಾಧನೆ ಎಂದರು.

ಶಿರಹಟ್ಟಿ, ಬಾಲೆಹೊಸೂರಿನ ಶ್ರೀ ಫಕ್ಕೀರೇಶ್ವರ ಭಾವೈಕ್ಯತಾ ಸಂಸ್ಥಾನಮಠದ ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮೀಜಿ ಆಶೀರ್ವಚನ ನೀಡುತ್ತಾ, ಪ್ರಾಮಾಣಿಕತೆ, ಪಾರದರ್ಶಕತೆ ಇದ್ದರೆ ಸಹಕಾರಿ ವಲಯ ನಿರೀಕ್ಷೆ ಮೀರಿ ಸಾಧನೆ ಮಾಡುತ್ತದೆ ಎಂಬುದಕ್ಕೆ ಸಚಿವ ಶಿವಾನಂದ ಪಾಟೀಲ ಅವರ ಅಧ್ಯಕ್ಷತೆಯಕಲ್ಲಿ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮುನ್ನಡೆಯುತ್ತಿರುವುದೇ ಸಾಕ್ಷಿ. ಭವಿಷ್ಯದಲ್ಲಿ ನಿಮ್ಮ ಬ್ಯಾಂಕು ದೇಶದಲ್ಲೇ ಮೊದಲ ಸ್ಥಾನಕ್ಕೇರಲೆಂದು ಆಶಿಸುವುದಾಗಿ ತಿಳಿಸಿದರು.

ತಿಕೋಟದ ಚನ್ನಮಲ್ಲಿಕಾರ್ಜುನ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.

ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ, ನಿರ್ದೇಶಕರಾದ ಸುರೇಶ ಬಿರಾದಾರ, ಶೇಖರ ದಳವಾಯಿ, ಬಿ.ಎಸ್. ಪಾಟೀಲ ಯಾಳಗಿ, ಕಲ್ಲನಗೌಡ ಪಾಟೀಲ, ಹಣಮಂತರಾಯಗೌಡ ಪಾಟೀಲ, ಗುರುಶಾಂತ ಬಿ. ನಿಡೋಣಿ, ಚಂದ್ರಶೇಖರ ಪಾಟೀಲ ಮನಗೂಳಿ, ಅರವಿಂದ ಪೂಜಾರಿ, ಎಸ್.ಎಸ್. ಜಹಗೀರದಾರ್, ಸಹಕಾರಿ ಸಂಘಗಳ ಉಪನಿಬಂಧಕಿ ಎಸ್.ಕೆ. ಭಾಗ್ಯಶ್ರೀ, ನಬಾರ್ಡ್ ಡಿಡಿಎಂ ವಿಕಾಸ್ ರಾಠೋಡ್, ಅಭಿವೃದ್ಧಿ ಅಧಿಕಾರಿ ಎಂ.ಜಿ. ಪಾಟೀಲ ಮತ್ತಿತರರಿದ್ದರು.

ಸಿಇಒ ಎಸ್.ಎ. ಢವಳಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕ ಗುರುಶಾಂತ ನಿಡೋಣಿ ಸ್ವಾಗತಿಸಿದರು. ಆರ್.ಎಂ. ಬಣಗಾರ, ಅಶೋಕ ಹಂಚಲಿ, ನಾಗರಾಜ ಬಿರಾದಾರ ನಿರೂಪಿಸದರು. ಉಪ ಪ್ರಧಾನ ವ್ಯವಸ್ಥಾಪಕ ಎಂ.ಜಿ.ಬಿರಾದಾರ ವಂದಿಸಿದರು.

ಜಿಲ್ಲೆಯಲ್ಲಿ ಉತ್ತಮ ನಿರ್ವಹಣೆಗಾಗಿ ಸಹಕಾರಿ ವಲಯದ ವಿವಿಧ 30 ಸಂಸ್ಥೆಗಳಿಗೆ ಬಹುಮಾನ ನೀಡಿ ಸತ್ಕರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net