ಲಂಡನ್: ಇಂಗ್ಲೆಂಡ್ನ ಮೆರ್ಸೆಸೈಡ್ ಪಟ್ಟಣದ ಮನೆಯೊಂದರ ಮೇಲೆ ದಾಳಿ ಮಾಡಿದ ಪೊಲೀಸರಿಗೆ ಕಾರ್ಯಾಚರಣೆ ವೇಳೆ ಮನೆಯ ಬಾಥ್ರೂಮ್ ಒಳಗಿನ ಗೋಡೆಯ ಹಿಂಬದಿಯಲ್ಲಿ ಕೇವಲ ಒಳುಡುಪಿನಲ್ಲಿ ಅರೆಬೆತ್ತಲೆಯಾಗಿ ಅವಿತು ಕುಳಿತಿದ್ದ ವ್ಯಕ್ತಿಯನ್ನು ನೋಡಿ ಅಚ್ಚರಿಗೊಂಡ ಘಟನೆ ನಡೆದಿದೆ.
ಮೆರ್ಸೆಸೈಡ್ ನಿವಾಸಿ ಎಂದು ಹೇಳಿಕೊಂಡಿರುವ ವ್ಯಕ್ತಿಯನ್ನು ಪತ್ತೆಹಚ್ಚಿದ ವಿಡಿಯೋವನ್ನು ಇಂಗ್ಲೆಂಡ್ ಗ್ರೇಟರ್ ಮ್ಯಾಂಚೆಸ್ಟರ್ ಪೊಲೀಸರು ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದು, ಭಾರಿ ವೈರಲ್ ಆಗಿದೆ. ಟ್ವಿಟರ್ನಲ್ಲಿ ಶೇರ್ ಮಾಡಲಾಗಿದ್ದು, ಬಾಥ್ರೂಮಿನ ಗೋಡೆಯಲ್ಲಿದ್ದ ಸಣ್ಣ ರಂಧ್ರದ ಬಾಗಿಲನ್ನು ಚಾಕುವಿನ ಸಹಾಯದಿಂದ ತೆರೆದಾಗ ರಂಧ್ರದಿಂದ ವ್ಯಕ್ತಿಯೊಬ್ಬ ತನ್ನ ತಲೆ ತೂರಿದನ್ನು ನೋಡಿ ಪೊಲೀಸರು ಶಾಕ್ ಆಗಿದ್ದಾರೆ.
ಕೇವಲ ಒಳಉಡುಪಿನಲ್ಲಿ ಅರೆಬೆತ್ತಲೆಯಾಗಿ ಬಾಥ್ರೂಮ್ನಲ್ಲಿರುವ ಸಣ್ಣ ರಂಧ್ರದ ಬಾಗಿಲಿನಿಂದ ವ್ಯಕ್ತಿ ಆಚೆ ಬರುತ್ತಿರುವುದು ಮತ್ತು ಪೊಲೀಸರು ವ್ಯಕ್ತಿ ಆಚೆಬರಲು ಬೆಂಬಲವಾಗಿ ಕೈನೀಡಿ ಎಳೆಯು ಎಳೆಯುತ್ತಿರುವುದು ವಿಡಿಯೋದಲ್ಲಿದೆ. ರಂಧ್ರದಿಂದ ಹೊರ ಬಂದ ಬೆನ್ನಲ್ಲೇ ಆತನನ್ನು ಬಂಧಿಸಲಾಗಿದೆ. 32 ವರ್ಷದ ವ್ಯಕ್ತಿಯ ವಿರುದ್ಧ ಎರಡು ಕೌಟುಂಬಿಕ ಹಿಂಸೆ ಮತ್ತು ಒಂದು ಡ್ರೈವಿಂಗ್ ಅಪರಾಧವಿದ್ದು, ಬಂಧಿಸಿ ಕಂಬಿ ಹಿಂದೆ ಪೊಲೀಸರು ತಳ್ಳಿದ್ದಾರೆ.
ವಿಡಿಯೋ ಜತೆಗೆ ಟ್ವೀಟ್ ಮಾಡಿರುವ ಗ್ರೇಟ್ ಮ್ಯಾಂಚೆಸ್ಟರ್ ಪೊಲೀಸ್, ಕೆಲವರು ಪೊಲೀಸರಿಂದ ತಪ್ಪಿಸಿಕೊಳ್ಳಲು ತುಂಬಾ ಉಪಾಯಗಳನ್ನು ಮಾಡುತ್ತಾರೆ. ಅದರಂತೆಯೇ ಇಂದು ಅಪರಾಧ ಪ್ರಕರಣಗಳಲ್ಲಿ ಬೇಕಾಗಿರುವ ವ್ಯಕ್ತಿಯೊಬ್ಬ ಮೆರ್ಸೆಸೈಡ್ನ ಮನೆಯ ಗೋಡೆ ಹಿಂದೆ ಬಚ್ಚಿಟ್ಟುಕೊಂಡು ಸಿಕ್ಕಿಬಿದ್ದಿದ್ದಾನೆಂದು ತಿಳಿಸಿದ್ದಾರೆ. (ಏಜೆನ್ಸೀಸ್)