ಲಾಡ್ಜ್​ವೊಂದರ ಬಾತ್​ರೂಮ್​ನಲ್ಲಿದ್ದ ಸಣ್ಣ ಕನ್ನಡಿ ನೂಕಿದ ಪೊಲೀಸರಿಗೆ ಕಾದಿತ್ತು ಶಾಕ್​!

Lodge
Published on

ಕೊಯಮತ್ತೂರು: ಲಾಡ್ಜ್​ನ ಬಾತ್​ರೂಮ್​ನಲ್ಲಿದ್ದ ಅದೊಂದು ಸಣ್ಣ ಕನ್ನಡಿ ಸಹಜವಾಗಿಯೇ ಪೊಲೀಸರಲ್ಲಿ ಅನುಮಾನ ಹುಟ್ಟುಹಾಕಿತ್ತು. ಹೀಗಾಗಿ ತಮಿಳುನಾಡಿನ ಕೊಯಮತ್ತೂರು ಪೊಲೀಸರು ಲಾಡ್ಜ್​ ಮೇಲಿನ ದಾಳಿಯ ವೇಳೆ ಬಾತ್​ರೂಮ್​ನಲ್ಲಿದ್ದ ಕನ್ನಡಿಯನ್ನು ನೂಕಿದಾಗ ಅವರಿಗೊಂದು ಅಚ್ಚರಿಯೇ ಕಾದಿತ್ತು.

ಕನ್ನಡಿಯ ಹಿಂದೆಯೇ ಸಣ್ಣದಾದ ಕೋಣೆಯೊಂದಿತ್ತು. ಅದರಲ್ಲಿ ಮಹಿಳೆಯೊಬ್ಬಳನ್ನು ಬಂಧಿಸಿಡಲಾಗಿತ್ತು. ತಮ್ಮ ಕರ್ತವ್ಯ ಪಜ್ಞೆಯಿಂದ ಕೊಯಮತ್ತೂರು ಪೊಲೀಸರು 22 ವರ್ಷ ವಯಸ್ಸಿನ ಬೆಂಗಳೂರು ಮೂಲದ ಮಹಿಳೆಯನ್ನು ರಕ್ಷಿಸಿ, ಇದೀಗ ಸರ್ಕಾರಿ ಮಹಿಳಾ ನಿವಾಸಕ್ಕೆ ಕಳುಹಿಸಿದ್ದಾರೆ. ದಾಳಿಯ ವೇಳೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಅಂದಹಾಗೆ ಈ ಎಲ್ಲ ಪ್ರಸಂಗ ಮೊನ್ನೆಯಷ್ಟೇ (ಬುಧವಾರ) ಜರುಗಿದೆ.

ಮಾಹಿತಿ ಮೇರೆಗೆ ಬುಧವಾರ ಮೇಟುಪಾಳ್ಯಂ ಉಪವಲಯದಲ್ಲಿ ಬರುವ ಕಲ್ಲಾರ್​ ಬಳಿಯ ಊಟಿ ರಸ್ತೆ ಬದಿಯಲ್ಲಿ ಇರುವ ಸರಣ್ಯ ಲಾಡ್ಜ್​ ಮೇಲೆ ಕೊಯಮತ್ತೂರು ಪೊಲೀಸರು ದಾಳಿ ನಡೆಸಿದ್ದರು.​ ಈ ವೇಳೆ ಪೊಲೀಸರು ಲಾಡ್ಜ್​ ಒಳಗಿದ್ದ ರಹಸ್ಯ ಕೋಣೆಯೊಂದನ್ನು ಪತ್ತೆ ಹಚ್ಚಿದರು. ಅದಕ್ಕೆ ಕಿಟಕಿಯಷ್ಟು ಪ್ರವೇಶ ದ್ವಾರವಿತ್ತು. ಕೊಣೆ ಕಾಣದಂತೆ ಅದಕ್ಕೆ ಕನ್ನಡಿಯನ್ನು ಅಂಟಿಸಲಾಗಿತ್ತು.

ಕೊನೆಗೂ ಸಿಂಗಲ್​ ಬೆಡ್​ ಕೋಣೆಯನ್ನು ಪತ್ತೆ ಮಾಡಿದ ಪೊಲೀಸರಿಗೆ ಅದರೊಳಗೆ 22 ವರ್ಷದ ಮಹಿಳೆ ಹಾಗೂ ಆಕೆಯನ್ನು ಹಿಡಿದಿಟ್ಟುಕೊಂಡಿದ್ದ ಮಹೇಂದ್ರನ್​ (46) ಮತ್ತು ಗಣೇಶನ್​ (36) ಪತ್ತೆಯಾಗಿದ್ದರು. ಆರೋಪಿ ಮಹೇಂದ್ರನ್​ ಕಳೆದ ಮೂರು ವರ್ಷಗಳಿಂದ ಲಾಡ್ಜ್​ ನಡೆಸುತ್ತಿದ್ದು, ಅಲ್ಲಿಯೇ ಗಣೇಶನ್​ ರೂಮ್​ ಬಾಯ್​ ಆಗಿ ಕೆಲಸ ಮಾಡುತ್ತಿದ್ದಾನೆ. ಇವರಿಬ್ಬರು ಸಹ ವೆಲ್ಲೋರ್​ ಮೂಲದವರು.

ಪೊಲೀಸರು ತಕ್ಷಣ ಮಹಿಳೆಯನ್ನು ತಮ್ಮ ವಶಕ್ಕೆ ಪಡೆದು ಸರ್ಕಾರಿ ಮಹಿಳಾ ನಿವಾಸಕ್ಕೆ ಕಳುಹಿಸಿಕೊಟ್ಟುರು ಮತ್ತು ಇಬ್ಬರು ಆರೋಪಿಗಳನ್ನು ಬಂಧಿಸಿದರು. ಅಲ್ಲದೆ, ಲಾಡ್ಜ್​ ಅನ್ನು ಸೀಲ್​ ಮಾಡಲಾಯಿತು. ಇದೀಗ ಇವರ ವಿರುದ್ಧ ಮಾನವ ಕಳ್ಳಸಾಗಣೆ ಆರೋಪ ಕೇಳಿಬಂದಿದ್ದು, ಆರೋಪಿಗಳ ವಿರುದ್ಧ ವಿವಿಧ ಸೆಕ್ಸನ್​ ಅಡಿಯಲ್ಲಿ ಕೇಸು ದಾಖಲಿಸಲಾಗಿದ್ದು, ಇಬ್ಬರನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net