ನ್ಯೂಸ್

VIDEO | ತಾಜಾ ಗಾಳಿಗಾಗಿ ಕಿಟಕಿಯಿಂದ ತಲೆ ಹೊರಹಾಕಿದ ವ್ಯಕ್ತಿ; ಬಸ್​ನಲ್ಲಿದ್ದ ಪ್ರಯಾಣಿಕರು ಹೊರಗೆ!

ಮೋಹನ್​ ಶೆಟ್ಟಿ

ಆಂಧ್ರಪ್ರದೇಶ: ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವ ಸಲುವಾಗಿ ಟಿಕೆಟ್​ ಖರೀದಿಸಿದ ವ್ಯಕ್ತಿಯೊಬ್ಬ ತನಗೆ ಸಿಕ್ಕ ಕಿಟಕಿ ಸೀಟಿನಲ್ಲಿ ಕುಳಿತು ಹೊರ ನೋಟವನ್ನು ಆನಂದಿಸುತ್ತಿದ್ದ, ಈ ವೇಳೆ ತಾಜಾ ಗಾಳಿ ಪಡೆಯಲು ಕಿಟಿಕಿಯಿಂದ ತಲೆ ಹೊರಹಾಕಿದಾಗ ಆತನ ತಲೆ ಕಿಟಕಿಯ ಮಧ್ಯೆ ಸಿಲುಕಿಕೊಂಡಿದೆ. ಆತ ಸಹಾಯಕ್ಕೆ ಚಿರಾಡಿದ ಬೆನ್ನಲ್ಲೇ ಬಸ್​ನಲ್ಲಿದ್ದ ಎಲ್ಲಾ ಪ್ರಯಾಣಿಕರು ಕೂಡಲೇ ಬಸ್​ ನಿಲ್ಲಿಸಿದ ಘಟನೆ ಆಂಧ್ರಪ್ರದೇಶದ ಶ್ರೀಕಾಕುಳಂನಲ್ಲಿ ವರದಿಯಾಗಿದೆ.

ತಲೆ ಸಿಲುಕಿಸಿಕೊಂಡ ವ್ಯಕ್ತಿಯನ್ನು ಸಂತಬೊಮ್ಮಲಿಯ ಸುಂದರ್ ರಾವ್ ಎಂದು ಗುರುತಿಸಲಾಗಿದ್ದು, ತಾಜಾ ಗಾಳಿಯನ್ನು ಪಡೆಯಲು ಚಲಿಸುವ ಬಸ್‌ನಿಂದ ತಲೆ ಹೊರಗೆ ಹಾಕಿದ್ದಾನೆ ಎನ್ನಲಾಗಿದೆ. ಸ್ವಲ್ಪ ಸಮಯದ ಬಳಿಕ ತನ್ನ ತಲೆಯನ್ನು ಒಳಗೆ ಎಳೆದುಕೊಳ್ಳಲು ಹರಸಾಹಸ ಪಟ್ಟಿದ್ದಾನೆ. ಆದ್ರೆ, ಎಷ್ಟೇ ಬಾರಿ ಪ್ರಯತ್ನಿಸಿದರು ಇದು ಸಫಲವಾಗಿಲ್ಲ.

15 ನಿಮಿಷಗಳ ಕಾಲ ನಿರಂತರವಾಗಿ ಪ್ರಯತ್ನಿಸಿದರೂ ಆತನನ್ನು ಒಳಗೆ ಎಳೆಯಲು ಆಗಿಲ್ಲ. ಕಡೆಯದಾಗಿ ಚಾಲಕನಿಗೆ ಬಸ್​ ನಿಲ್ಲಿಸಲು ಹೇಳಿದ ಸಹ ಪ್ರಯಾಣಿಕರು, ಹೊರಗಿನಿಂದ ನೂಕಲು ಯತ್ನಿಸಿದ್ದಾರೆ. ಸತತ ಪ್ರಯತ್ನಗಳ ಬಳಿಕ ವ್ಯಕ್ತಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.

ಈ ಹಿಂದೆ ದೆಹಲಿಯಲ್ಲಿ 20 ವರ್ಷದ ಮಹಿಳೆಯೊಬ್ಬರು ವಾಂತಿ ಮಾಡಲು ಬಸ್ಸಿನ ಕಿಟಕಿಯಿಂದ ತಲೆ ಹೊರಹಾಕಿದ ಪರಿಣಾಮ ಎರಡು ವಾಹನಗಳ ನಡುವೆ ತಲೆ ಸಿಲುಕಿ ಸಾವನ್ನಪ್ಪಿದ್ದರು,(ಏಜೆನ್ಸೀಸ್).