ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ವಿಸ್ತರಣಾ ಸೇವೆಯಲ್ಲಿ ಡಿಪ್ಲೋಮಾ: 6ನೇ ತಂಡದ ಉದ್ಘಾಟನೆ

IMG-20240125-WA0273
Published on

ಮಂಗಳೂರು: ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ, ಭಾರತೀಯ ಕೃಷಿ ಅನುಸಂಧಾನ ಪರಿಷತ್-ಕೃಷಿ ವಿಜ್ಞಾನ ಕೇಂದ್ರ, ಮಂಗಳೂರು, ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ, ಬೆಂಗಳೂರು, ರಾಷ್ಟ್ರೀಯ ಕೃಷಿ ವಿಸ್ತರಣಾ ನಿರ್ವಹಣಾ ಸಂಸ್ಥೆ, (ಮ್ಯಾನೇಜ್), ಹೈದರಾಬಾದ್ ಮತ್ತು ಕೃಷಿ ಇಲಾಖೆ, ದಕ್ಷಿಣ ಕನ್ನಡ ಸಹಯೋಗದಲ್ಲಿ ಕೃಷಿ ಪರಿಕರ ಮಾರಾಟಗಾರರಿಗೆ ವಿಸ್ತರಣಾ ಸೇವೆಯಲ್ಲಿ ಡಿಪ್ಲೋಮಾ 6ನೇ ತಂಡದ ಉದ್ಘಾಟನೆ ಜನವರಿ 25 ರಂದು ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ಡಾ. ಕೆಂಪೇಗೌಡ ಹೆಚ್. ಅವರು, ಪರಿಕರ ಮಾರಾಟಗಾರರು ವ್ಯಾಪಾರದ ಜೊತೆಗೆ ನೈತಿಕತೆಯನ್ನು ಹೊಂದಿರಬೇಕು. ಪ್ರಮಾಣ ಪತ್ರಕ್ಕಾಗಿ ಮಾತ್ರವಲ್ಲದೆ ಜ್ಞಾನದ ಅವಶ್ಯಕತೆಕಾಗಿ ದೇಸಿ ಕೋರ್ಸ್ ಅವಶ್ಯವಾಗಿದೆ ಎಂದು ಹೇಳಿದರು.

ದೇಸಿ ತರಬೇತಿಯ ರಾಜ್ಯ ನೋಡಲ್ ಅಧಿಕಾರಿ ಡಾ.ಬಿ. ಕಲ್ಪನಾ ಅವರು, ಪರಿಕರ ಮಾರಾಟಗಾರರಿಗೆ ದೇಸಿ ತರಬೇತಿಯ ಅಗತ್ಯ , ದೇಸಿ ತರಬೇತಿಯ ಅನುಷ್ಠಾನ, ದೇಸಿ ತರಬೇತಿಯ ಮೂಲ ಉದ್ಧೇಶದ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು.

ದೇಶದಲ್ಲಿ ಈಗಾಗಲೇ 2,80,000 ಜನ ದೇಸಿ ಕೋರ್ಸ್ ಗೆ ನೊಂದಣಿ ಮಾಡಿದ್ದು 80,200 ಅಭ್ಯರ್ಥಿ ಗಳು ಪ್ರಮಾಣ ಪತ್ರವನ್ನು ಪಡೆದಿರುತ್ತಾರೆ. 22,000 ಅಭ್ಯರ್ಥಿಗಳು ಪ್ರಸ್ತುತ ತರಬೇತಿಯನ್ನು ಪಡೆಯುತ್ತಿದ್ದಾರೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮೀನುಗಾರಿಕಾ ಕಾಲೇಜಿನ ಡೀನ್ ಡಾ. ಆಂಜನೇಯಪ್ಪ ಹೆಚ್. ಎನ್. ಇವರು ಮಾತನಾಡಿ, ಪರಿಕರ ಮಾರಾಟಗಾರರು ತಮ್ಮನ್ನು ತಾವೇ ಸಂಪನ್ಮೂಲ ವ್ಯಕ್ತಿಯಾಗಿ ಮೊದಲು ಪರಿವರ್ತಿಸಿಕೊಳ್ಳಬೇಕು. ಇತರ ಪರಿಕರ ಮಾರಾಟಗಾರರೊಂದಿಗೆ ಸಂವಾದ ನಡೆಸಿ ಮಾಹಿತಿಯನ್ನು ಹಂಚಿಕೊಂಡು ರೈತರಿಗೆ ಸೂಕ್ತ ಸಲಹೆ ನೀಡಬೇಕು ಎಂದು ಹೇಳಿದರು.

ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ.ಟಿ.ಜೆ.ರಮೇಶ ಅವರು ಅಧ್ಯಕ್ಷತೆ ವಹಿಸಿದ್ದರು.

ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಯಾದ ಡಾ.ರವೀಂದ್ರಗೌಡ ಪಾಟೀಲ್ ಉಪಸ್ಥಿತರಿದ್ದರು. ಕೇಂದ್ರದ ವಿಜ್ಞಾನಿ ಮತ್ತು ದೇಸಿ ಸಂಯೋಜಕ ಡಾ.ಶಿವಕುಮಾರ್ ಆರ್ ಸ್ವಾಗತಿಸಿದರು, ಡಾ. ಮಲ್ಲಿಕಾರ್ಜುನ ಎಲ್., ವಿಜ್ಞಾನಿ (ಮಣ್ಣು ವಿಜ್ಞಾನ) ವಂದಿಸಿದರು, ದೇಸಿ ಕಾರ್ಯಕ್ರಮದ ಅನುವುಗಾರರಾದ ವಿಜಿತಾ ವಿ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಒಟ್ಟು 40 ಅಭ್ಯರ್ಥಿ ಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net