ನ್ಯೂಸ್

VIDEO| ಕುಟುಂಬಸ್ಥರಿಗೆ ಪಾಠ ಕಲಿಸಲು ತನ್ನ ಸಾವನ್ನೇ ನಕಲು ಮಾಡಿದ ವ್ಯಕ್ತಿ

ಬೆಲ್ಜಿಯಂ: ತನ್ನ ಕುಟುಂಬದವರಿಗೆ ಪಾಠ ಕಲಿಸಲು ವ್ಯಕ್ತಿಯೋರ್ವ ತನ್ನ ಸಾವನ್ನು ನಕಲು ಮಾಡಿ ನಂತರ ತನ್ನ ಅಂತ್ಯಸಂಸ್ಕಾರಕ್ಕೆ ತೆರಳಿರುವ ಘಟನೆ ಬೆಲ್ಜಿಯಂನಲ್ಲಿ ನಡೆದಿದೆ.

ಡೇವಿಡ್​ ಬೇರ್ಟೆನ್​(45) ತನ್ನ ಕುಟುಂಬಸ್ಥರಿಗೆ ಸಂಬಂಧದ ಪ್ರಾಮುಖ್ಯತೆಯನ್ನು ತಿಳಿಸುವ ಸಲುವಾಗಿ ಈ ರೀತಿ ಮಾಡಿದ್ದು ಸದ್ಯ ಈ ಪೋಸ್ಟ್​ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್​ ಆಗಿದೆ.

ತನ್ನನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಬೇಸರಗೊಂಡಿದ್ದ ಡೇವಿಡ್​ ಮೊದಲಿಗೆ ಈ ವಿಚಾರವನ್ನು ತನ್ನ ಹೆಂಡತಿ ಮಕ್ಕಳೊಂದಿಗೆ ಚರ್ಚಸಿ ತಾನು ಮೃತಪಟ್ಟಿರುವ ಹಾಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡುವಂತೆ ಹೇಳಿದ್ದಾನೆ. ಆರಂಭದಲ್ಲಿ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಆತನ ಮಡದಿ ಮತ್ತು ಇಬ್ಬರು ಹೆಣ್ಣು ಮಕ್ಕಳು ಬಳಿಕ ಆತನ ಮಾತಿಗೆ ಒಪ್ಪಿದ್ದಾರೆ.

ಅದರಂತೆ, ಆತನ ಮಡದಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಸಾಮಾಜಿಕ ಜಾಲತಾಣದಲ್ಲಿ ತನ್ನ ತಂದೆ ಮೃತಪಟ್ಟಿರುವುದಾಗಿ ಹೇಳಿ ಭಾವುಕವಾಗಿ ಸಂದೇಶ​ ಒಂದನ್ನು ಬರೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ. ಇದಾದ ಕೆಲ ಹೊತ್ತಿನ ಬಳಿಕ ಆತನ ಮನೆ ಬಳಿ ಜಮಾಯಿಸಿದ ಕುಟುಂಬಸ್ಥರು ಹಾಗೂ ಆತ್ಮೀಯರು ಅಂತಿಮ ವಿಧಿ-ವಿಧಾನಗಳನ್ನು ನೆರವೇರಿಸಿದ್ದಾರೆ.

ಈ ವೇಳೆ ಡೇವಿಡ್ ಬೇರೊಂದು ಸ್ಥಳದಲ್ಲಿದ್ದುಕೊಂಡು​ ಕುಟುಂಬಸ್ಥರು ಹಾಗೂ ಆಪ್ತರು ಮನೆ ಬಳಿ ಜಮಾಯಿಸಿರುವ ವಿಚಾರವನ್ನು ತಿಳಿದು ಹೆಲಿಕಾಪ್ಟರ್​ ಮೂಲಕ ಆಗಮಿಸಿ ಎಲ್ಲರಿಗೂ ಒಂದು ನಿಮಿಷ ಶಾಕ್​ ಕೊಟ್ಟಿದ್ದಾರೆ. ಡೇವಿಡ್​ ಬದುಕಿರುವ ವಿಚಾರವನ್ನು ತಿಳಿದು ಆತನ ಕುಟುಂಬಸ್ಥರು ಅಪ್ಪಿ ಅಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.