ನ್ಯೂಸ್

9 ವರ್ಷಗಳ ಬಳಿಕ ಜೈಲಿನಿಂದ ಮುಕ್ತಿ: ಹೊಸ ಜೀವನ ಕಟ್ಟಿಕೊಳ್ಳಲು ಹೊರಬಂದ ವ್ಯಕ್ತಿ ಕಂಡಿದ್ದು ದುರಂತ ಅಂತ್ಯ!

ಲಖನೌ: ಕೊಲೆ ಪ್ರಕರಣದಡಿ 9 ವರ್ಷಗಳ ಕಾಲ ಜೈಲುವಾಸ ಅನುಭವಿಸಿದ 45 ವರ್ಷ ವಯಸ್ಸಿನ ಅಪರಾಧಿಯೊಬ್ಬ ಇನ್ನೇನು ಜೈಲಿನಿಂದ ಮುಕ್ತಿ ಪಡೆಯುವ ದಿನ ಹತ್ತಿರವಾಗುತ್ತಿದ್ದಂತೆ ಬಹಳ ಖುಷಿಯಿಂದ ತನ್ನ ಮಗಳ ಜತೆ ಹೊಸ ಜೀವನ ಕಟ್ಟಿಕೊಳ್ಳಬೇಕೆಂದು ಎದುರುನೋಡುತ್ತಿರುವಾಗಲೇ ಕಂಡಿದ್ದು ಮಾತ್ರ ದುರಂತ ಅಂತ್ಯ. 9 ವರ್ಷಗಳು ಜೈಲು ಕಂಬಿ ಎಣಿಸಿದ ವ್ಯಕ್ತಿಗೆ ಶಿಕ್ಷೆ ಅವಧಿ ಮುಕ್ತಾಯಗೊಂಡಿತ್ತು. ಅದರಂತೆಯೇ ಜೈಲಿನಿಂದ ಹೊರಬಂದು ಮಗಳನ್ನು ತಬ್ಬಿಕೊಂಡವ ಮನೆ ತಲುಪುವ ವೇಳೆ ಪುತ್ರಿಯೊಂದಿಗೆ ಶವವಾಗಿ ಹೋಗಿರುವುದು ನಿಜಕ್ಕೂ ದುರಂತ ಸಾವು ಎನ್ನಬಹುದು. ಈ ಘಟನೆ ಉತ್ತರಪ್ರದೇಶದ ಲಖನೌನಲ್ಲಿ ಸಂಭವಿಸಿದೆ.

ಜೈಲಿನಿಂದ ಹೊರಬಂದ ವ್ಯಕ್ತಿಯನ್ನು ಕನೌಜ್​ ಜಿಲ್ಲೆಯ ವಿಜಯ್ ಕುಮಾರ್​ ಎಂದು ಗುರುತಿಸಲಾಗಿದ್ದು, ಮಗಳು, ಪತ್ನಿಯ ಜತೆ ಮನೆಗೆ ಆಟೋ ರಿಕ್ಷಾದಲ್ಲಿ ಹೋಗುತ್ತಿದ್ದ ವೇಳೆ ಎಸ್​ಯುವಿ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಅಪ್ಪ-ಮಗಳು ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಲಖನೌ-ಆಗ್ರಾ ಎಕ್ಸ್​ಪ್ರೆಸ್​ ವೇ ಮಾರ್ಗದಲ್ಲಿ ಸಾಗುತ್ತಿದ್ದ ಆಟೋಗೆ ವೇಗದಲ್ಲಿ ಬಂದ ಕಾರೊಂದು ರಭಸವಾಗಿ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ವಿಜಯ್​ ಮತ್ತು ಅವರ ಪುತ್ರಿ ಸಾವನ್ನಪ್ಪಿದರೆ, ಪತ್ನಿ ಹಾಗೂ ಆಟೋ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ.

2012ರ ಮೇ ತಿಂಗಳಲ್ಲಿ ಕನೌಜ್‌ನಲ್ಲಿ ವ್ಯಕ್ತಿಯೊಬ್ಬನ ಮೇಲೆ ಗುಂಡು ಹಾರಿಸಿದ ಪ್ರಕರಣದಲ್ಲಿ ವಿಜಯ್​ ಕುಮಾರ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಕಠಿಣ ಶಿಕ್ಷೆಯನ್ನು ಅನುಭವಿಸುತ್ತಿದ್ದ ಮೃತ ವಿಜಯ್​ಗೆ ನ್ಯಾಯಾಲಯ ಇತ್ತೀಚೆಗಷ್ಟೇ ಜೈಲುವಾಸ ಅಂತ್ಯಗೊಳಿಸಿತ್ತು. ಮಗಳು, ಪತ್ನಿಯೊಂದಿಗೆ ಹೊಸ ಬದುಕನ್ನು ಕಟ್ಟಿಕೊಳ್ಳುವ ಬಯಕೆಯಿಂದ ಹೊರಬಂದ ವ್ಯಕ್ತಿ ದುರಂತ ಅಂತ್ಯ ಕಂಡಿದ್ದು ಅನೇಕರಲ್ಲಿ ಭಾರೀ ಅಚ್ಚರಿ ಮೂಡಿಸಿದೆ,(ಏಜೆನ್ಸೀಸ್).