ನ್ಯೂಸ್

ಮೆಡಿಕಲ್ಸ್ ಮುಂಭಾಗ ಎದೆ ಹಿಡಿದುಕೊಂಡೇ ಪ್ರಾಣ ಬಿಟ್ಟ; ಔಷಧ ಪಡೆದು ಹಣ ನೀಡುವಾಗಲೇ ಹೃದಯಾಘಾತ!

ಹರಿಯಾಣ: ದೇಶಾದ್ಯಂತ ಹೃದಯಾಘಾತ ಪ್ರಕರಣಗಳು ಒಂದರ ಹಿಂದೊಂದರಂತೆ ಸಂಭವಿಸುತ್ತಿರುವುದು ಆತಂಕ ಮೂಡಿಸಿದ್ದು, ಯಾವಾಗ ಯಾರು ಎಲ್ಲಿ ಹೇಗೋ ಎನ್ನುವಂಥ ಪರಿಸ್ಥಿತಿ ಉಂಟಾಗಿದೆ. ಇಂಥ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಮೆಡಿಕಲ್ಸ್ ಮುಂಭಾಗ ಎದೆ ಹಿಡಿದುಕೊಂಡೇ ಪ್ರಾಣ ಬಿಟ್ಟಿದ್ದಾನೆ. ಈ ಕುರಿತ ವಿಡಿಯೋ ಕೂಡ ವೈರಲ್ ಆಗಿದೆ.

ಹರಿಯಾಣದ ಫರಿದಾಬಾದ್​ನಲ್ಲಿ ಈ ಪ್ರಕರಣ ನಡೆದಿದ್ದು, ಈ ಕುರಿತ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ವಿಷಯ ಎಲ್ಲೆಡೆ ಹಬ್ಬಿದೆ. ಇಲ್ಲಿನ ಫಾರ್ಮಸಿಗೆ ಬಂದಿದ್ದ ವ್ಯಕ್ತಿಯೊಬ್ಬ ಔಷಧ ಕೇಳುತ್ತಿದ್ದಂತೆ ಎದೆನೋವು ಕಾಣಿಸಿಕೊಂಡಿದೆ. ಇನ್ನೇನು ಔಷಧ ಪಡೆದು ಹಣ ಪಾವತಿಸಬೇಕು ಎನ್ನುವಷ್ಟರಲ್ಲಿ ಈತ ಮೆಡಿಕಲ್ಸ್​ ಮುಂಭಾಗ ಎದೆಹಿಡಿದುಕೊಂಡೇ ಕುಸಿದು ಪ್ರಾಣ ಬಿಟ್ಟಿದ್ದಾನೆ.

ಕೇವಲ ನಾಲ್ಕು ನಿಮಿಷಗಳಲ್ಲಿ ನಡೆದುಹೋದ ಈ ದುರಂತ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ತುಣುಕು ವೈರಲ್ ಆಗಿದೆ. ಜ. 4ರಂದು ಈ ಪ್ರಕರಣ ಸಂಭವಿಸಿದೆ. ಉತ್ತರಪ್ರದೇಶ ಮೂಲದ 23 ವರ್ಷದ ಸಂಜಯ್ ಸಾವಿಗೀಡಾದ ವ್ಯಕ್ತಿ. ಈತ ಎದೆಹಿಡಿದುಕೊಂಡು ಬೀಳುವ ಸಂದರ್ಭದಲ್ಲಿ ಮೆಡಿಕಲ್ಸ್​ನ ವ್ಯಕ್ತಿ ಹಿಡಿಯಲು ಹೋಗುವಷ್ಟರಲ್ಲಿ ಕುಸಿದು ಬಿದ್ದಿದ್ದಾನೆ. ಆತನನ್ನು ಎಬ್ಬಿಸಿ ಎದ್ದೇಳಿಸಲು ಪ್ರಯತ್ನಿಸಿದರೂ ಅಂಗಡಿಯಾತ ಅದರಲ್ಲಿ ವಿಫಲನಾಗಿದ್ದಾನೆ. -ಏಜೆನ್ಸೀಸ್