ನ್ಯೂಸ್

ನೀರಿನ ಬಾಟಲ್ ಖರೀದಿ ವೇಳೆ ಮಾತಿನ ಜಟಾಪಟಿ; ಕಬ್ಬಿಣದ ರಾಡ್‌ನಿಂದ ಹಲ್ಲೆ, ವ್ಯಕ್ತಿ ಮೃತ!

ಕೊಲ್ಕತ್ತಾ: ನೀರಿನ ಬಾಟಲಿ ಖರೀದಿಸುವ ವಿಚಾರವಾಗಿ ಅಂಗಡಿಯವನೊಂದಿಗೆ ನಡೆದ ಗಲಾಟೆಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟ ಘಟನೆ ನಗರದ ಗಿರೀಶ್ ಪಾರ್ಕ್ ಪ್ರದೇಶದಲ್ಲಿ ವರದಿಯಾಗಿದೆ.

ಶುಕ್ರವಾರ ಸಂಜೆ ಈ ಘಟನೆ ನಡೆದಿದ್ದು, ಇಬ್ಬರು ಸಹೋದರರು ಟೀ ಸ್ಟಾಲ್‌ಗೆ ತೆರಳಿದ್ದರು. ಮಿನರಲ್ ವಾಟರ್ ಬಾಟಲ್ ಖರೀದಿ ಮಾಡುವ ವೇಳೆ ಅಂಗಡಿಯವನೊಂದಿಗೆ ಮಾತಿಗೆ ಮಾತು ಬೆಳೆದು ಜಗಳ ಆರಂಭವಾಗಿದೆ. ಜಗಳ ನಡೆದಾಗ, ಇಬ್ಬರೂ ಅಂಗಡಿ ಮಾಲೀಕರ ಮೇಲೆ ಹಲ್ಲೆ ನಡೆಸಿದ್ದಾರೆ. ದಾಳಿಯಲ್ಲಿ ಮೂವರಿಗೆ ಗಾಯಗಳಾಗಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಗಳದಲ್ಲಿ ಕಬ್ಬಿಣದ ರಾಡ್​ನಿಂದ ಹಲ್ಲೆಗೊಳಗಾದ ಲೇಕ್ ಟೌನ್ ಪ್ರದೇಶದ ನಿವಾಸಿ 20 ವರ್ಷದ ಆಕಾಶ್ ಪ್ರತಾಪ್ ಕುರಿ, ಶನಿವಾರ ಸರ್ಕಾರಿ ಎಸ್‌ಎಸ್‌ಕೆಎಂ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಸದ್ಯ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಪ್ರಕರಣ ಕುರಿತು ಇದೀಗ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ,(ಏಜೆನ್ಸೀಸ್).