ನ್ಯೂಸ್

ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸಕ್ಕೆ ಕಲ್ಲು ಎಸೆದ ವ್ಯಕ್ತಿ ಪೊಲೀಸ್​ ವಶಕ್ಕೆ!

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ವ್ಯಕ್ತಿಯೊಬ್ಬ ಕಲ್ಲು ಎಸೆದಿರುವ ಘಟನೆ ಮೈಸೂರಿನಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಕೂಡಲೇ ವಶಕ್ಕೆ ಪಡೆದುಕೊಂಡಿದ್ದಾರೆ.

ಸತ್ಯಮೂರ್ತಿ ಎಂಬಾತ ಮೈಸೂರಿನ ಟಿ.ಕೆ. ಬಡಾವಣೆಯಲ್ಲಿರುವ ಸಿಎಂ ಸಿದ್ದರಾಮಯ್ಯ ಅವರ ನಿವಾಸಕ್ಕೆ ಇಂದು ಬೆಳಗ್ಗೆ 8 ಗಂಟೆಗೆ ಕಲ್ಲು ಎಸೆದಿದ್ದಾನೆ. ಈ ವಿಚಾರ ಸರಸ್ವತಿಪುರಂ ಠಾಣಾ ಪೊಲೀಸರಿಗೆ ತಿಳಿಯುತ್ತಿದ್ದಂತೆ ಎಫ್ಐಆರ್ ದಾಖಲಿಸಿ, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಸತ್ಯಮೂರ್ತಿಯ ಅವಾಂತರ ಇದೇ ಮೊದಲೇನಲ್ಲ ಎಂಬುದು ಪೊಲೀಸ್​ ವಿಚಾರಣೆ ವೇಳೆ ತಿಳಿದುಬಂದಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇವಿಎಂ ಯಂತ್ರವನ್ನು ಸತ್ಯಮೂರ್ತಿ ಒಡೆದು ಹಾಕಿದ್ದ. ಅಲ್ಲದೆ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರ ಫೋಟೋಗೆ ರೌಡಿ ರಾಜೇಂದ್ರ ಎಂದು ಪೋಸ್ಟ್ ಮಾಡಿದ್ದ.

ಈ ಹಿಂದೆಯೂ ಈತನನ್ನು ವಶಕ್ಕೆ ಪಡೆಯಲಾಗಿತ್ತು. ಈತನನ್ನು ಮಾನಸಿಕ ಅಸ್ವಸ್ಥ ಎಂದು ಹೇಳಲಾಗಿದೆ. ಸದ್ಯ ಪ್ರಕರಣ ದಾಖಲಿಸಿರುವ ಸರಸ್ವತಿಪುರಂ ಠಾಣಾ ಪೊಲೀಸರು ಘಟನೆ ಸಂಬಂಧ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.