ಉತ್ತರಪ್ರದೇಶ: ಹಾಪುರ್‌ನ ದೇವಸ್ಥಾನದಲ್ಲಿ ನಮಾಜ್ ಮಾಡಿದ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಕಠಿಣ ಕ್ರಮಕ್ಕೆ ಬಿಜೆಪಿ ಆಗ್ರಹಿಸಿದೆ.
ಅನ್ವರ್ ಬಂಧಿತ ವ್ಯಕ್ತಿ. ಈತ ಶುಕ್ರವಾರ ಬೆಳಗ್ಗೆ ಸುಮಾರು 5 ಗಂಟೆಗೆ ಚಂಡಿ ಮಂದಿರದಲ್ಲಿ 'ನಮಾಜ್' ಸಲ್ಲಿಸಿದ್ದಾನೆ. ಆತನ ವಿರುದ್ಧ ಎಫ್‌ಐಆರ್ ದಾಖಲಿಸಿ ನಂತರ ಶನಿವಾರ ಬಂಧಿಸಲಾಗಿದೆ ಎಂದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶುಕ್ರವಾರ ಬೆಳಿಗ್ಗೆ ಆರತಿಗಾಗಿ ದೇವಸ್ಥಾನದಲ್ಲಿ ಹಾಜರಿದ್ದರು. ಈ ವೇಳೆ ಅನ್ವರ್ ನೆಲದ ಮೇಲೆ ಬಟ್ಟೆಯನ್ನು ಹರಡಿ ನಮಾಜ್ ಮಾಡಲು ಪ್ರಾರಂಭಿಸಿದನು. ಅರ್ಚಕರು ಗಮನಿಸಿ ತಡೆದಿದ್ದಾರೆ. ನಂತರ ದೇವಸ್ಥಾನದ ಆವರಣದಿಂದ ಹೊರಕ್ಕೆ ಕರೆದೊಯ್ದರು.
ದೇವಸ್ಥಾನ ಸಮಿತಿಯ ಪದಾಧಿಕಾರಿ ಸತ್ಯನಾರಾಯಣ ಅಗರ್ವಾಲ್ ಕೊತ್ವಾಲಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆತನನ್ನು ಅನ್ವರ್ ಎಂದು ಗುರುತಿಸಿ ಬಂಧಿಸಲಾಗಿದೆ. ನಮಾಜ್ ಮಾಡಿದ ನಂತರ ದೇವಾಲಯವನ್ನು ಎರಡು ಬಾರಿ ಗಂಗಾಜಲದಿಂದ ಶುದ್ಧೀಕರಿಸಲಾಗಿದೆ ಎನ್ನಲಾಗಿದೆ.
ದೇವಸ್ಥಾನದಲ್ಲಿ ‘ನಮಾಜ್’ ಮಾಡಿದ ಆರೋಪದ ಮೇಲೆ ವ್ಯಕ್ತಿಯ ವಿರುದ್ಧ ಕಠಿಣ ಕ್ರಮಕ್ಕೆ ಸ್ಥಳೀಯ ಬಿಜೆಪಿ ಮುಖಂಡರು ಒತ್ತಾಯಿಸಿದರು. ಹಾಪುರ್ ಸದರ್ ಶಾಸಕ ವಿಜಯಪಾಲ್ ಅಧಾಟಿ ಅವರು ನಗರದ ದೇವಾಲಯಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸುವಂತೆ ಆಡಳಿತವನ್ನು ಒತ್ತಾಯಿಸಿದರು.