ನ್ಯೂಸ್

ಪ್ರೀತಿಸುತ್ತಿದ್ದ ಹುಡುಗಿಯನ್ನು ಚುಡಾಯಿಸಿದ್ದಕ್ಕೆ ಸ್ನೇಹಿತನನ್ನೇ ಮುಗಿಸಿಬಿಟ್ಟ ಪ್ರೇಮಿ!

ಕೇರಳ: ತನ್ನ ಪ್ರೇಯಸಿಯನ್ನು ಚುಡಾಯಿಸಿದ ಎಂಬ ಕಾರಣಕ್ಕೆ ಇಂಜಿನಿಯರ್ ಒಬ್ಬಾತನನ್ನು ಕೊಲೆ ಮಾಡಿದ ಆರೋಪಿಯನ್ನು ತ್ರಿಶೂರ್ ಪೊಲೀಸರು ಬಂಧಿಸಿದ್ದಾರೆ. ಅರುಣ್ ಲಾಲ್ ಎಂಬಾತ ಕೊಲೆಯಾದ ಇಂಜಿನಿಯರ್​. ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಟಿನು ಎಂಬಾತ ಬಂಧಿತ ಆರೋಪಿ.

ತ್ರಿಶೂರ್​ ಜಿಲ್ಲೆಯ ಪುಟ್ಟೆಕ್ಕರ ಎಂಬಲ್ಲಿ ಬಂಧಿತ ಆರೋಪಿ ಟಿನು ಹಾಗೂ ಅರುಣ್ ಲಾಲ್ ಎಂದಿನಂತೆ ಸಂಜೆಯ ವೇಳೆ ಒಟ್ಟಾಗಿ ಮದ್ಯಪಾನ ಮಾಡುತ್ತಿದ್ದರು. ಈ ವೇಳೆ ಟಿನು ಎಂಬಾತ ತಾನು ಪ್ರೀತಿಸುತ್ತಿದ್ದ ಹುಡುಗಿಯ ವಿಚಾರವನ್ನು ಪ್ರಸ್ತಾಪ ಮಾಡಿದ್ದಾನೆ. ಈ ವೇಳೆ ಅರುಣ್ ಲಾಲ್ ಪ್ರೀತಿ ಹಾಗೂ ಹುಡುಗಿಯ ವಿಚಾರವನ್ನು ಮುಂದಿಟ್ಟುಕೊಂಡು ಗೇಲಿ ಮಾಡಿದ್ದಾನೆ. ಇವರಿಬ್ಬರ ಮಾತುಕತೆ ನಡೆದ ನಂತರದಲ್ಲಿ ಯುವತಿ ಟಿನು ಸಿಕ್ಕಾಗೆಲ್ಲಾ ಮಾತನಾಡದೆ ಹಿಂದೆ ಸರಿದಿದ್ದಾಳೆ. ಸಾಧ್ಯವಾದಷ್ಟು ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದಾಳೆ. ತನ್ನ ಪ್ರೇಯಸಿವ ಈ ರೀತಿಯ ವರ್ತನೆಗೆ ಅರುಣ್ ಲಾಲ್ ಎಂದು ಟಿನು ನಿರ್ಧರಿಸಿದ್ದಾನೆ. ಇದು ಆತನಲ್ಲಿ ಅರುಣ್ ಲಾಲ್ ಬಗೆಗೆ ದ್ವೇಷ ಬೆಳೆಯಲು ಕಾರಣವಾಗಿದೆ.

ತಾನು ಪ್ರೀತಿಸುತ್ತಿರುವ ಹುಡುಗಿ ಅಂತರ ಕಾಯ್ದುಕೊಳ್ಳಲು ಆರಂಭಿಸಿರುವುದರಿಂದ ಟಿನು ಹತಾಷನಾಗಿದ್ದ. ಇದಕ್ಕೆ ಕಾರಣ ಅರುಣ್ ಲಾಲ್ ಎಂದೇ ಭಾವಿಸಿಕೊಂಡಿದ್ದ. ಇದರಿಂದ ಕೋಪಕೊಂಡ ಟಿನು, ಅರುಣ್​ ಲಾಲ್​ನನ್ನು ಕೊಲೆ ಮಾಡಲು ನಿರ್ಧರಿಸಿದ್ದಾನೆ.

ತನ್ನ ನಿರ್ಧಾರದಂತೆ ಟಿನು, ಅರುಣ್​ ಲಾಲ್​ನನ್ನು ಜತೆಗೆ ಕರೆದುಕೊಂಡು ಬಾರ್​ಗೆ ಹೋಗಿದ್ದಾನೆ. ಅಲ್ಲಿ ಇಬ್ಬರೂ ಎಂದಿನ ಶೈಲಿಯಲ್ಲೇ ಹರಟೆ ಹೊಡೆಯುತ್ತಾ ಕುಡಿದಿದ್ದಾರೆ. ಕೊನೆಗೆ ನಾನೇ ನಿನ್ನನ್ನು ಮನೆಗೆ ಬಿಡುತ್ತೇನೆ ಎಂದು ಟಿನು ತನ್ನ ಬೈಕ್ ಹತ್ತಿಸಿಕೊಂಡಿದ್ದಾನೆ. ಅದರಂತೆ ದಾರಿ ಮಧ್ಯೆ ಬೈಕ್ ನಿಲ್ಲಿಸಿ, ಅರುಣ್​ ಲಾಲ್​ನನ್ನು ನೆಲಕ್ಕೆ ತಳ್ಳಿದ್ದಾನೆ. ನಂತರ ತಲೆ ಹಾಗೂ ಹೊಟ್ಟೆಯ ಭಾಗಕ್ಕೆ ಥಳಿಸಿದ್ದಾನೆ. ಟಿನುವಿನ ಥಳಿತದಿಂದ ಗಂಭೀರವಾಗಿ ಗಾಯಕೊಂಡ ಅರುಣ್ ಲಾಲ್ ಅಸ್ವಸ್ಥಗೊಂಡು, ಮೃತಪಟ್ಟಿದ್ದಾನೆ. (ಏಜೆನ್ಸೀಸ್)