ನ್ಯೂಸ್

ಪತ್ನಿ ಜತೆ ಅಕ್ರಮ ಸಂಬಂಧ: ಶಿಕ್ಷಕನನ್ನು ಅಪಹರಿಸಿ 7 ಅಡಿ ಗುಂಡಿಯಲ್ಲಿ ಜೀವಂತ ಸಮಾಧಿ ಮಾಡಿದ ಪತಿ! Yoga Teacher

Yoga Teacher : ತನ್ನ ಪತ್ನಿಯ ಜತೆ ವಿವಾಹೇತರ ಸಂಬಂಧ ಹೊಂದಿದ್ದ ಯೋಗ ಶಿಕ್ಷಕನನ್ನು ಅಪಹರಿಸಿ ಸುಮಾರು 7 ಅಡಿ ಆಳದ ಗುಂಡಿ ತೋಡಿ, ಜೀವಂತವಾಗಿ ಹೂತು ಹಾಕಿದ ಘಟನೆ ಹರಿಯಾಣದಿಂದ ವರದಿಯಾಗಿದೆ. ಆಘಾತಕಾರಿ ಸಂಗತಿ ಏನೆಂದರೆ, ಈ ಘಟನೆ ನಡೆದ ಮೂರು ತಿಂಗಳ ನಂತರ ಯೋಗ ಶಿಕ್ಷಕನ ಶವವನ್ನು ಹೊರಕ್ಕೆ ತೆಗೆಯಲಾಗಿದೆ.

ಕೊಲೆಯಾದ ಯೋಗ ಶಿಕ್ಷಕನನ್ನು ಜಗದೀಪ್​ ಎಂದು ಗುರುತಿಸಲಾಗಿದೆ. ಈತ ರೋಹ್ಟಕ್‌ನ ಖಾಸಗಿ ಕಾಲೇಜೊಂದರಲ್ಲಿ ಯೋಗ ಶಿಕ್ಷಕನಾಗಿದ್ದ. ಆತನನ್ನು ಅಪಹರಿಸಿ 7 ಅಡಿ ಆಳದ ಗುಂಡಿಯಲ್ಲಿ ಜೀವಂತವಾಗಿ ಹೂಳಲಾಗಿದೆ. ಈ ಅಪರಾಧ ನಡೆದ ಮೂರು ತಿಂಗಳ ನಂತರ ಅಂದರೆ, ಮಾರ್ಚ್ 24ರಂದು ಪೊಲೀಸರು ಜಗದೀಪ್​ ಶವವನ್ನು ವಶಪಡಿಸಿಕೊಂಡಿದ್ದಾರೆ.

ಪೊಲೀಸರ ಹೇಳಿಕೆ ಪ್ರಕಾರ, 2024, ಡಿಸೆಂಬರ್ 24ರಂದು ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಜಗದೀಪ್ ಅವರನ್ನು ಕಿಡ್ನಾಪ್​ ಮಾಡಲಾಯಿತು. ದುಷ್ಕರ್ಮಿಗಳು ಜಗದೀಪ್​ ಅವರ ಕೈಕಾಲುಗಳನ್ನು ಕಟ್ಟಿ, ಯಾವುದೇ ಶಬ್ದ ಮಾಡದಂತೆ ಬಾಯಿಗೆ ಟೇಪ್ ಸುತ್ತಿ, ಆತನನನ್ನು ಬಲವಂತಾಗಿ ನಿರ್ಜನ ಪ್ರದೇಶಕ್ಕೆ ಹೊತ್ತೊಯ್ದರು. ಅಲ್ಲಿ ಆರೋಪಿಗಳು ಬೋರ್​ವೆಲ್​ಗೆ ಅಂತ ಹೇಳಿ ಆಳವಾದ ಗುಂಡಿಯನ್ನು ತೋಡಿಸಿ, ಆ ಗುಂಡಿಯಲ್ಲಿ ಜಗದೀಪ್​ನನ್ನು ಜೀವಂತವಾಗಿ ಹೂತು ಹಾಕಿದ್ದರು.

ಅಪಹರಣವಾದ 10 ದಿನಗಳ ನಂತರ ಅಂದರೆ, ಫೆಬ್ರವರಿ 3ರಂದು ಜಗದೀಪ್ ನಾಪತ್ತೆ ಪ್ರಕರಣ ದಾಖಲಾಯಿತು. ಪೊಲೀಸರು ಸುಮಾರು 3 ತಿಂಗಳ ಕಾಲ ತನಿಖೆ ನಡೆಸಿದರು. ಜಗದೀಪ್ ಅವರ ಫೋನ್​ ಕಾಲ್​ ದಾಖಲೆಗಳು ಪ್ರಕರಣದಲ್ಲಿ ನಿರ್ಣಾಯಕ ಸುಳಿವನ್ನು ನೀಡಿತು. ಅಂತಿಮವಾಗಿ ಪೊಲೀಸರು ಧರ್ಮಪಾಲ್ ಮತ್ತು ಹರ್ದೀಪ್ ಎಂಬ ಇಬ್ಬರು ಶಂಕಿತರನ್ನು ಬಂಧಿಸಿದರು.

ಇಬ್ಬರ ವಿಚಾರಣೆಯ ಸಮಯದಲ್ಲಿ, ಆರೋಪಿಗಳು ಕೊಲೆಯ ಭಯಾನಕ ವಿವರಗಳನ್ನು ಬಹಿರಂಗಪಡಿಸಿದರು. ಆರೋಪಿಗಳ ತಪ್ಪೊಪ್ಪಿಗೆಯ ಪ್ರಕಾರ, ಜಗದೀಪ್ ಬಾಡಿಗೆ ಕಟ್ಟಡದಲ್ಲಿ ವಾಸಿಸುತ್ತಿದ್ದ. ಅಲ್ಲಿಯೇ ವಾಸವಿದ್ದ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ಕಾರಣಕ್ಕೆ ಆಕೆಯ ಪತಿ ಜಗದೀಪ್​ನನ್ನು ಅಪಹರಿಸಿ ಕೊಲೆ ಮಾಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಕುಲದೀಪ್ ತಿಳಿಸಿದ್ದಾರೆ.

ಜಗದೀಪ್ ಅವರನ್ನು ಜೀವಂತವಾಗಿ ಹೂಳುವ ಮೊದಲು ಹರಿತವಾದ ಆಯುಧದಿಂದ ಹಲ್ಲೆ ಮಾಡಲಾಗಿದೆಯೇ ಎಂಬುದರ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)