ಶ್ರೇಯಸ್ ಅಯ್ಯರ್​ ನಿಸ್ವಾರ್ಥ ಆಟ: ತಂಡಕ್ಕಾಗಿ ಶತಕವನ್ನೇ ತ್ಯಾಗ ಮಾಡಿದ ಪಂಜಾಬ್​ ಕಿಂಗ್ಸ್​ ನಾಯಕ! Shreyas Iyer

Shreyas Iyer
Published on

Shreyas Iyer : ಪಂಜಾಬ್ ಕಿಂಗ್ಸ್ ತಂಡದ ನಾಯಕ ಮತ್ತು ಟೀಮ್ ಇಂಡಿಯಾ ಸ್ಟಾರ್ ಆಟಗಾರ ಶ್ರೇಯಸ್ ಅಯ್ಯರ್ ಐಪಿಎಲ್-2025 ಅನ್ನು ಭರ್ಜರಿಯಾಗಿ ಆರಂಭಿಸಿದ್ದಾರೆ. ನಿನ್ನೆ (ಮಾರ್ಚ್​ 25) ಅಹಮದಾಬಾದ್‌ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ, ಅಯ್ಯರ್ ಭರ್ಜರಿ ಪ್ರದರ್ಶನ ನೀಡಿದರು. ಕ್ರೀಸ್‌ಗೆ ಪ್ರವೇಶಿಸಿದ ಕ್ಷಣದಿಂದಲೇ ಬೌಂಡರಿಗಳ ಮಳೆ ಸುರಿಸಿದರು.

ಅಯ್ಯರ್​ ಆರ್ಭಟವನ್ನು ತಡೆಯಲು ಯಾರಿಂದಲೂ ಸಾಧ್ಯವಾಗಲಿಲ್ಲ. ಆದರೆ, ಅದ್ಭುತ ಇನ್ನಿಂಗ್ಸ್ ಆಡಿದ ಶ್ರೇಯಸ್ ಅಯ್ಯರ್ ತಮ್ಮ ಮೊದಲ ಐಪಿಎಲ್ ಶತಕವನ್ನು ತಲುಪಲು ಸಾಧ್ಯವಾಗಲಿಲ್ಲ. ಮೂರು ರನ್‌ಗಳ ಅಂತರದಲ್ಲಿ ಶತಕ ವಂಚಿತರಾದರು. 42 ಎಸೆತಗಳಲ್ಲಿ 5 ಬೌಂಡರಿ ಮತ್ತು 9 ಸಿಕ್ಸರ್‌ಗಳೊಂದಿಗೆ 97 ರನ್ ಗಳಿಸಿ ಅಜೇಯರಾಗಿ ಉಳಿದರು.

ಶ್ರೇಯಸ್ ಅಯ್ಯರ್ ನಿಸ್ವಾರ್ಥ

ಈ ಪಂದ್ಯದಲ್ಲಿ, ಅಯ್ಯರ್ ಶತಕ ಗಳಿಸುವ ಅವಕಾಶವಿತ್ತು. ಆದರೆ, ತಂಡದ ಹಿತದೃಷ್ಟಿಯಿಂದ ಅವರು ನಾನ್-ಸ್ಟ್ರೈಕರ್ ಆಗಿ ಉಳಿದರು. ಅಯ್ಯರ್ ತಮ್ಮ ಶತಕಕ್ಕಿಂತ ತಂಡಕ್ಕೆ ರನ್ ಗಳಿಸುವುದು ಮುಖ್ಯ ಎಂದು ನಿರ್ಧರಿಸಿದರು. ಈ ಅನುಕ್ರಮದಲ್ಲಿ, ಸ್ಟ್ರೈಕ್‌ಗೆ ಅಂಟಿಕೊಳ್ಳುವ ಅವಕಾಶ ಕೊನೆಯ ಓವರ್‌ನಲ್ಲಿ ಸಿಕ್ಕರೂ ಅಯ್ಯರ್ ಎರಡನೇ ರನ್‌ ಓಡಿ ಶಶಾಂಕ್ ಸಿಂಗ್‌ಗೆ ಸ್ಟ್ರೈಕ್ ನೀಡಿದರು.

ನನ್ನ ಶತಕದ ಬಗ್ಗೆ ಯೋಚಿಸಬೇಡಿ, ಕೇವಲ ನಿಮ್ಮ ಆಟದ ಕಡೆ ಗಮನ ನೀಡಿ ಎನ್ನುವ ಮೂಲಕ ಅಯ್ಯರ್, ಶಶಾಂಕ್‌ಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದರು. ಇದರೊಂದಿಗೆ, ಶಶಾಂಕ್ ಕೊನೆಯ ಓವರ್‌ನಲ್ಲಿ 23 ರನ್ ಗಳಿಸಿದರು. ಅಂತಿಮವಾಗಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 243 ರನ್ ಗಳಿಸಿತು. ಈ ಅನುಕ್ರಮದಲ್ಲಿ ನಿಸ್ವಾರ್ಥ ಇನ್ನಿಂಗ್ಸ್ ಆಡಿದ ಅಯ್ಯರ್ ಅವರನ್ನು ಎಲ್ಲರು ಕೊಂಡಾಡುತ್ತಿದ್ದಾರೆ.

ಪಂದ್ಯದ ವಿಚಾರಕ್ಕೆ ಬರುವುದಾದರೆ, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 243 ರನ್‌ಗಳ ಬೃಹತ್ ಸ್ಕೋರ್ ಗಳಿಸಿತು. 244 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಪ್ರತಿದಾಳಿ ನಡೆಸಿ ಸೋತಿತು. 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 232 ರನ್ ಗಳಿಸಿತು.

ಗುಜರಾತ್​ ಪರ ಆರಂಭಿಕ ಆಟಗಾರ ಸಾಯಿ ಸುದರ್ಶನ್ ಅದ್ಭುತ ಬ್ಯಾಟಿಂಗ್ ಮಾಡಿದರು. ಕೇವಲ 41 ಎಸೆತಗಳಲ್ಲಿ 74 ರನ್ ಗಳಿಸಿದರು. ಜೋಸ್ ಬಟ್ಲರ್ ಅರ್ಧಶತಕದೊಂದಿಗೆ ಮಿಂಚಿದರು. ಅವರು 33 ಎಸೆತಗಳಲ್ಲಿ 54 ರನ್ ಗಳಿಸಿದರು. ರುದರ್ಫೋರ್ಡ್ (46) ಹಾಗೂ ಶುಭಮನ್​ ಗಿಲ್ (33) ಉತ್ತಮವಾಗಿ ಬ್ಯಾಟಿಂಗ್ ಮಾಡಿದರು. ಕೊನೆಯ ಓವರ್‌ನಲ್ಲಿ 27 ರನ್‌ಗಳ ಅಗತ್ಯವಿದ್ದಾಗ, ವಿಕೆಟ್‌ಗಳು ಬಿದ್ದವು. ಹೀಗಾಗಿ ಗುಜರಾತ್ ಸೋಲಬೇಕಾಯಿತು.

ಇದಕ್ಕೂ ಮೊದಲು ಪಂಜಾಬ್ ತಂಡದ ನಾಯಕ ಶ್ರೇಯರ್ ಅಯ್ಯರ್ ವಿನಾಶಕಾರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಸಿಕ್ಸರ್ ಮತ್ತು ಬೌಂಡರಿಗಳ ಮಳೆಗರೆದರು. 42 ಎಸೆತಗಳಲ್ಲಿ 97 ರನ್ ಗಳಿಸಿದರು. ಆದಾಗ್ಯೂ, ಅವರಿಗೆ ಶತಕ ಗಳಿಸುವ ಅವಕಾಶವಿತ್ತು. ಆದರೆ, ಅವರು ಶತಕ ಗಳಿಸಲಿಲ್ಲ. ಇದರೊಂದಿಗೆ, ಅವರು ಐಪಿಎಲ್‌ನಲ್ಲಿ ತಮ್ಮ ಮೊದಲ ಶತಕವನ್ನು ಸ್ವಲ್ಪದರಲ್ಲೇ ತಪ್ಪಿಸಿಕೊಂಡರು. ಅಯ್ಯರ್ ಅವರ ಇನ್ನಿಂಗ್ಸ್‌ನಲ್ಲಿ 9 ಸಿಕ್ಸರ್ ಮತ್ತು 5 ಬೌಂಡರಿಗಳು ಸೇರಿದ್ದವು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net