ಸೇಲಂ : ಸರಿಯಾಗೇ ಓದಿದಿರಿ. ಮಮತಾ ಬ್ಯಾನರ್ಜಿ ಮದುವೆ, ಸೋಷಿಯಲಿಸಂ ಜೊತೆಗೆ! ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ಜೂನ್ 13 ರಂದು ಮದುವೆಗೆ ತಯಾರಾಗಿರುವ ವಧುವರರ ಹೆಸರು ಇದೇ - 'ಮಮತಾ ಬ್ಯಾನರ್ಜಿ', 'ಸೋಷಿಯಲಿಸಂ'! ಕಳೆದ ಕೆಲವು ದಿನಗಳಿಂದ ಇವರ ಮದುವೆ ಆಮಂತ್ರಣ ಪತ್ರಿಕೆಯ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಸಿಬಿಐ)ನ ಸೇಲಂ ಜಿಲ್ಲಾ ಕಾರ್ಯದರ್ಶಿ ಮೋಹನ್ ಎಂಬುವರ ಮಗನ ಹೆಸರು ಸೋಷಿಯಲಿಸಂ! ಅಂದ ಹಾಗೆ ತಾವು ನಂಬಿದ ಸಿದ್ಧಾಂತಕ್ಕೆ ತಕ್ಕಂತೆ ಅವರ ಇನ್ನಿಬ್ಬರು ಪುತ್ರರಿಗೂ ಅವರು 'ಕಮ್ಯುನಿಸಂ', 'ಲೆನಿನಿಸಂ' ಅಂತ ಹೆಸರಿಟ್ಟಿದ್ದಾರೆ. ಅವರ ಮೊಮ್ಮಗ(ಕಮ್ಯುನಿಸಂ ಅವರ ಮಗ)ನ ನಾಮಧೇಯ 'ಮಾರ್ಕ್ಸಿಸಂ' ಎಂದು!
ಕಳೆದ 80 ವರ್ಷಗಳಿಂದ ಸೇಲಂನ ಕಟ್ಟೂರ್ ಪ್ರದೇಶದಲ್ಲಿ ಕಮ್ಯುನಿಸ್ಟ್ ಸಿದ್ಧಾಂತ ಮತ್ತು ಮಾರ್ಕ್ಸ್ವಾದವನ್ನು ನಂಬಿರುವ ಜನ ಹೆಚ್ಚಿದ್ದು, ತಮ್ಮ ಕುಟುಂಬದಲ್ಲಿ ನಾಲ್ಕು ಪೀಳಿಗೆಗಳಿಂದ ಈ ಅಭಿಮಾನ ನೆಲೆಸಿದೆ ಎಂದು ತಿಳಿಸಿರುವ ಮೋಹನ್, ಕಟ್ಟೂರಿನಲ್ಲಿ ವಿಯೆಟ್ನಾಮ್, ಮಾಸ್ಕೊ, ರಷ್ಯಾ ಎಂಬ ವಿಶಿಷ್ಟ ಹೆಸರಿನ ಜನರಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನು ಅಪ್ಪನ ಸಿದ್ಧಾಂತವನ್ನೇ ಪಾಲಿಸುತ್ತಿರುವ ಕಮ್ಯುನಿಸಂ, ಲೆನಿನಿಸಂ ಮತ್ತು ಸೋಷಿಯಲಿಸಂ ಸಿಪಿಐ(ಎಂ)ನ ಸದಸ್ಯರಾಗಿದ್ದಾರಂತೆ.
ಇದೀಗ ಕಮ್ಯುನಿಸ್ಟ್ ಮತ್ತು ಕಾಂಗ್ರೆಸ್ ಇತಿಹಾಸ ಹೊಂದಿದ ಸಂಬಂಧಿಕರ ಪುತ್ರಿ, ಮಮತಾ ಬೇನರ್ಜಿ ಹೆಸರಿನ ಯುವತಿಯನ್ನು ತಮ್ಮ ಮಗನಿಗೆ ವಧುವಾಗಿ ತರಲು ನಿರ್ಧರಿಸಿದ್ದಾರೆ. ಇವರ ಮದುವೆಗೆ ಸಿಪಿಐ(ಎಂ)ನ ರಾಜ್ಯ ಕಾರ್ಯದರ್ಶಿ ಮುತ್ತರಸನ್ ಮತ್ತು ಸಹಾಯಕ ಕಾರ್ಯದರ್ಶಿ ಸುಬ್ಬರಾಯನ್ ಅವರು ವಿಶೇಷ ಅತಿಥಿಗಳಾಗಿ ಆಗಮಿಸಲಿದ್ದಾರೆ. ತಮ್ಮ ಸಿದ್ಧಾಂತದ ಹೆಸರಿಡುವ ಕೆಲಸವನ್ನು ಮುಂದುವರಿಸುವೆ ಎಂದಿರುವ ಮೋಹನ್, ಮುಂದೊಂದು ಮೊಮ್ಮಗಳು ಹುಟ್ಟಿದರೆ ಅವಳಿಗೆ 'ಕ್ಯೂಬಾಯಿಸಂ' ಎಂದು ಹೆಸರಿಡುವ ಆಸೆ ಹೊಂದಿದ್ದಾರೆ! (ಏಜೆನ್ಸೀಸ್)