ನ್ಯೂಸ್

ಗೃಹಜ್ಯೋತಿ ಯೋಜನೆ| ದೇಶ ಸುರಕ್ಷಿತವಾಗಿರಬೇಕೆಂದರೆ I.N.D.I.A ಮೈತ್ರಿಕೂಟ ಅಧಿಕಾರಕ್ಕೆ ಬರಬೇಕು: ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ: ಕಾಂಗ್ರೆಸ್​ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲಾ ಜನತೆಗೆ ಹೊಸ ಕಾರ್ಯಕ್ರಮವನ್ನು ಒದಗಿಸಿದೆ ಎಂದು ರಾಜ್ಯಸಭೆ ವಿಪಕ್ಷ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಕಲಬುರಗಿ ನಗರದಲ್ಲಿ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ದೇಶ ಉಳಿಯಬೇಕಾದರೆ I.N.D.I.A ಮೈತ್ರಿಕೂಟ ಅಧಿಕಾರಕ್ಕೆ ಬರಬೇಕು ಎಂದಿದ್ದಾರೆ.

ನಾವು ಅಧಿಕಾರಕ್ಕೆ ಬಂದಾಗಲೆಲ್ಲಾ ಬಡವರಿಗೆ, ರೈತರಿಗೆ, ಮಹಿಳೆಯರಿಗೆ, ಕೂಲಿ ಕಾರ್ಮಿಕರಿಗಾಗಿ ಹೊಸ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದೇವೆ. ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗಲೂ ಅನೇಕ ಕಾರ್ಯಕ್ರಮಗಳನ್ನು ಕೊಟ್ಟಿದ್ಧೇವೆ. ಆದರೆ, ನಮ್ಮ ದುರ್ದೈವ ಜನರು ನಮ್ಮ ಮೇಲೆ ಮುನಿಸಿಕೊಂಡಿದ್ದರು ಎಂದು 2018ರ ಚುನಾವಣೆಯ್ಲಲಿ ಆದ ಸೋಲಿನ ಕುರಿತು ಪರೋಕ್ಷವಾಗಿ ಮಾತನಾಡಿದ್ದಾರೆ.

ಬಿಜೆಪಿ ಸರ್ಕಾರ ಬಡವರಿಗಾಗಿ ಯಾವುದೇ ಯೋಜನೆಯನ್ನು ಜಾರಿ ಮಾಡಿಲ್ಲ. ಕಾಂಗ್ರೆಸ್​ ಪಕ್ಷದ ಐದು ಗ್ಯಾರಂಟಿಗಳಿಗೆ ಇಡೀ ದೇಶದಲ್ಲೇ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಾವು ಜನತೆಗೆ ಬೋಗಸ್​ ಭರವಸೆಗಳನ್ನು ಕೊಟ್ಟಿಲ್ಲ. ನಾವು ಕೊಟ್ಟ ಮಾತಿನಂತೆ ಕಾರ್ಯಕ್ರಮಗಳನ್ನು ಜಾರಿ ಮಾಡುತ್ತಿದ್ದೇವೆ.

ಹಿಂದೆ ಪ್ರಧಾನಿ ಮೋದಿ ವರ್ಷಕ್ಕೆ ಎರಡು ಕೋಟಿ ಉದ್ಯೋಗ, ಕುಟುಂಬ ಒಂದಕ್ಕೆ 15 ಲಕ್ಷ ರೂಪಾಯಿ ಹಣ ಹಾಕುತ್ತೇವೆ ಎಂದು ಹೇಳಿದ್ದರು. ಆದರೆ, ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರಾ. ಪ್ರಧಾನಿ ಮೋದಿ ಎಲ್ಲೆಲ್ಲಿ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೋ ಅಲ್ಲೆಲ್ಲಾ ಗ್ಯಾರಂಟಿ ಯೋಜನೆಯ ಬಗ್ಗೆ ಮಾತಾಡಿ ಕರ್ನಾಟಕ ದಿವಾಳಿ ಆಗುತ್ತೆ ಅಂತಾ ಹೇಳಿದ್ದಾರೆ. ಮೋದಿಯವರ ಕೈಕೆಳಗಡೆ ಅನೇಕ ಸರ್ಕಾರಿ ಸಂಸ್ಥೆಗಳಿವೆ. ಕಾಂಗ್ರೆಸ್​ ಸರ್ಕಾರದ ಯೋಜನೆಗಳು ಕೆಲಸ ಮಾಡುತ್ತಿದೆಯೋ ಇಲ್ಲವೋ ಎಂದು ಮಾಹಿತಿ ಪಡೆಯಲಿ. ನಿಜಾಂಶ ತಿಳಿದರೆ ಅವರು ಎಂದು ಈ ಮಾತನ್ನು ಹೇಳುವುದಿಲ್ಲ ಎಂದಿದ್ದಾರೆ.

ಸರ್ಕಾರಿ ಯೋಜನೆಗಳು ಏನೇ ಇದ್ದರೂ ಮೈಸೂರು ಹಾಗೂ ಕನಕಪುರದವರಿಗೆ ಬೇಗ ಸಿಗುತ್ತವೆ. ಈ ನಗರಗಳು ಬೆಂಗಳೂರಿನಿಂದ 100-150 ಕಿಲೋಮೀಟರ್​ ದೂರದಲ್ಲಿವೆ. ಆದರೆ, ಕಲಬುರಗಿ ಹಾಗೂ ಬೀದರ್​ ನಗರಗಳು ಬೆಂಗಳೂರಿನಿಂದ ಸಾವಿರಾರು ಕಿಲೋಮೀಟರ್​ ದೂರವಿದೆ. ಏನೇ ಕಾರ್ಯಕ್ರಮ ಮಾಡಿದರೂ ಕಲ್ಯಾಣ ಕರ್ನಾಟಕದಿಂದ ಮಾಡಿಕೊಂಡು ಹೋಗಿ. ಈ ಕಡೆ ನೀವು ಹೆಚ್ಚಿನ ಗಮನ ಹರಿಸಿದರೆ ನಾಳೆ ನಮಗೂ ಅನುಕೂಲವಾಗುತ್ತದೆ ಎಂದು ಸಿಎಂ-ಡಿಸಿಎಂಗೆ ಸಲಹೆ ನೀಡಿದ್ದಾರೆ.

ದೇಶ ಉಳಿಯಬೇಕಾದರೆ I.N.D.I.A ಮೃತ್ರಿಕೂಟ ಅಧಿಕಾರಕ್ಕೆ ಬರಬೇಕು. ಒಬ್ಬ ವ್ಯಕ್ತಿಗಾಗಿ ಮೈತ್ರಿಕೂಟ ಅಧಿಕಾರಕ್ಕೆ ಬರಬೇಕೆಂದು ಈ ಮಾತನ್ನು ಹೇಳುತ್ತಿಲ್ಲ. ಬಡವರು, ರೈತರು, ಕೂಲಿ ಕಾರ್ಮಿಕರು, ದಲಿತರು, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಈ ಮೈತ್ರಿಕೂಟ ಅಧಿಕಾರಕ್ಕೆ ಬರಬೇಕಿದೆ.

ಬಿಜೆಪಿಯವರು ನನ್ನ ಬಗ್ಗೆ ಕಪ್ಪು ಇದ್ದಾರೆ ಅಂತೆಲ್ಲಾ ಹೇಳುತ್ತಿದ್ದಾರೆ. ಅವರ ಬಗ್ಗೆ ನಾನೇನು ಮಾತನಾಡುವುದಕ್ಕೆ ಹೋಗುವುದಿಲ್ಲ. ಬಡವರ, ದೀನ ದಲಿತರ ಹಿತಕ್ಕಾಗಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಾವೆಲ್ಲರೂ ಬೆಂಬಲ ಸೂಚಿಸಬೇಕು. ನಾನು ಸರ್ಕಾರಿ ವೇದಿಕೆಯನ್ನು ಪಕ್ಷದ ವೇದಿಕೆಯಾಗಿ ಬಳಸಿಕೊಳ್ಳುತ್ತಿಲ್ಲ. ರಾಜ್ಯ ಸಭೆಯ ಸದಸ್ಯನಾಗಿ ಮಾತನಾಡುತ್ತಿದ್ದೇನೆ ಎಂದು ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.