ಇಸ್ಲಾಮಾಬಾದ್: ತೀವ್ರ ಆರ್ಥಿಕ ಕೊರತೆ ಎದುರಿಸುತ್ತಿರುವ ಪಾಕಿಸ್ತಾನವು ಆರ್ಥಿಕ ಪುನಶ್ಚೇತನಕ್ಕೆ ನಾನಾ ಕಸರತ್ತುಗಳನ್ನು ಮಾಡುತ್ತಿದ್ದು, ಅದರ ಭಾಗವಾಗಿ ಮಾರುಕಟ್ಟೆಗಳು, ಮಾಲ್ಗಳು ಮತ್ತು ಮದುವೆ ಮಂಟಪಗಳನ್ನು ಬೇಗನೆ ಮುಚ್ಚುವುದಾಗಿ ಘೋಷಿಸಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಇಂಧನ ಸಂರಕ್ಷಣಾ ಯೋಜನೆಗೆ ಪಾಕ್ ಸಚಿವ ಸಂಪುಟ ಮಂಗಳವಾರ ಅನುಮೋದನೆ ನೀಡಿದೆ. ‘ಮಾರುಕಟ್ಟೆಗಳು, ಮಾಲ್ಗಳು ರಾತ್ರಿ 8.30ಕ್ಕೆ, ಮದುವೆ ಹಾಲ್ಗಳು ರಾತ್ರಿ 10 ಗಂಟೆಗೆ ಮುಚ್ಚಲ್ಪಡುತ್ತವೆ. ಇದರಿಂದ 60 ಶತಕೋಟಿ ರೂ. ಉಳಿತಾಯವಾಗುತ್ತದೆ’ ಎಂದು ಪಾಕ್ನ ರಕ್ಷಣಾ ಸಚಿವ ಖ್ವಾಜಾ ಆಸಿಫ್ ತಿಳಿಸಿದ್ದಾರೆ. ಮಂಗಳವಾರ ನಡೆದ ಸಂಪುಟ ಸಭೆಯಲ್ಲಿ ಯಾವುದೇ ದೀಪಗಳು ಉರಿಯಲಿಲ್ಲ. ಸಂಪೂರ್ಣ ಸೂರ್ಯನ ಬೆಳಕಿನಿಂದಲೇ ನಡೆದಿದೆ ಎಂದು ರಕ್ಷಣಾ ಸಚಿವರು ಇಂಧನ ಉಳಿತಾಯದ ಉದಾಹರಣೆ ನೀಡಿದರು.
ಆರ್ಥಿಕ ಸಂಕಷ್ಟದಲ್ಲಿ ಪಾಕ್: ಪಾಕ್ನಲ್ಲಿ ಹಣದುಬ್ಬರವು ಈವರ್ಷ ಶೇ.21-23ರ ಮಧ್ಯೆ ಇರಬಹುದು. ಪ್ರಸಕ್ತ ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳಲ್ಲಿ (ಜುಲೈ-ಅಕ್ಟೋಬರ್) ದೇಶದ ವಿತ್ತೀಯ ಕೊರತೆಯು ಶೇ. 115ಕ್ಕಿಂತ ಹೆಚ್ಚಾಗುತ್ತದೆ ಎಂದು ವರದಿಯೊಂದು ತಿಳಿಸಿದೆ.
ಬಲೂನ್ಗಳಲ್ಲಿ ಅಡುಗೆ ಅನಿಲ!: ಅಡುಗೆ ಅನಿಲ ಸಂಗ್ರಹಣೆಯಲ್ಲಿ ಭಾರಿ ಕೊರತೆ ಉಂಟಾಗಿದ್ದು, ಜನರು ಪ್ಲಾಸ್ಟಿಕ್ ಬಲೂನ್ಗಳಲ್ಲಿ ಅನಿಲ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದಾರೆ. ಇಂಥದ್ದೊಂದು ಸನ್ನಿವೇಶ ಪಾಕ್ನ ವಾಯುವ್ಯ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಕಂಡುಬಂದಿದೆ. ದೇಶದ ಅನಿಲ ಪೈಪ್ಲೈನ್ ಜಾಲಕ್ಕೆ ಸಂಪರ್ಕ ಹೊಂದಿದ್ದ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿ ಅಡುಗೆ ಅನಿಲ ತುಂಬಿಸಲಾಗುತ್ತದೆ. ಈ ಅನಿಲ ಚೀಲಗಳು ಗ್ಯಾಸ್ ಸ್ಪೋಟಕ್ಕೆ ಕಾರಣವಾಗುವ ಎಚ್ಚರಿಕೆ ನೀಡಲಾಗಿದೆ. ಆದಾಗ್ಯೂ ದುಬಾರಿ ಸಿಲಿಂಡರ್ ಖರೀದಿಸಲು ಸಾಧ್ಯವಿಲ್ಲ. ಹಾಗಾಗಿ ನಮಗೆ ಬೇರೆ ಆಯ್ಕೆಗಳಿಲ್ಲ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.
ಉಗ್ರರ ವಿರುದ್ಧ ಕಠಿಣ ಕ್ರಮಗಳಿಗೆ ಬೆಂಬಲ ನೀಡುವುದನ್ನು ಮುಂದುವರಿಸಿದರೆ ಆಡಳಿತಾರೂಢ ಒಕ್ಕೂಟದ ಎರಡು ಪ್ರಮುಖ ಪಕ್ಷಗಳ ನಾಯಕರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗುವುದು ಎಂದು ನಿಷೇಧಿತ ತೆಹ್ರೀಕ್ -ಎ- ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಬೆದರಿಕೆ ಹಾಕಿದೆ. ಪ್ರಧಾನಿ ಶೆಹಬಾಜ್ ಷರೀಪ್ ಅವರ ಪಾಕಿಸ್ತಾನ್ ಮುಸ್ಲಿಂ ಲೀಗ್ -ನವಾಜ್ (ಪಿಎಂಎಲ್-ಎನ್ ) ಮತ್ತು ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ -ಜರ್ದಾರಿ ನೇತೃತ್ವದ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ)ಗೆ ಟಿಟಿಪಿ ಈ ಎಚ್ಚರಿಕೆ ನೀಡಿದೆ. ದೇಶದ ನಾಗರಿಕ-ಮಿಲಿಟರಿ ನಾಯಕತ್ವವು ರಾಷ್ಟ್ರೀಯ ಭದ್ರತಾ ಸಮಿತಿಯಡಿ ಸಭೆ ಸೇರಿ ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆ ತೋರಿಸುವುದಾಗಿ ಪ್ರತಿಜ್ಞೆ ಮಾಡಿದ ಕೆಲವೇ ದಿನಗಳಲ್ಲಿ ಈ ಎಚ್ಚರಿಕೆಯ ಸಂದೇಶ ರವಾನೆಯಾಗಿದೆ. ಈ ಎರಡು ಪಕ್ಷಗಳು ತಮ್ಮ ನಿಲುವಿನಲ್ಲಿ ದೃಢವಾಗಿ ಉಳಿದು ಸೇನೆಯ ಗುಲಾಮರಾಗಿ ಮುಂದುವರಿದರೆ, ಆ ಪಕ್ಷಗಳ ಪ್ರಮುಖ ನಾಯಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಜನರು ಇಂತಹ ವ್ಯಕ್ತಿಗಳಿಗೆ ಹತ್ತಿರವಾಗುವುದನ್ನು ತಪ್ಪಿಸಬೇಕು ಎಂದು ಅಲ್ -ಖೈದಾಗೆ ನಿಕಟವಾಗಿದೆ ಎಂದು ನಂಬಲಾಗಿರುವ ಉಗ್ರಗಾಮಿ ಗುಂಪು ಹೇಳಿಕೆಯಲ್ಲಿ ತಿಳಿಸಿದೆ. ಟಿಟಿಪಿಯು ಪಾಕಿಸ್ತಾನದಲ್ಲಿ ‘ಜಿಹಾದ್’ ಮಾತ್ರ ನಡೆಸುತ್ತಿದೆ. ದೇಶವನ್ನು ಆಕ್ರಮಿಸಿಕೊಂಡಿರುವ ಭದ್ರತಾ ಏಜೆನ್ಸಿಗಳು ನಮ್ಮ ಗುರಿಯಾಗಿದೆ ಎಂದು ಅದು ಹೇಳಿದ್ದು, ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋಗೆ ವಿಶೇಷ ಎಚ್ಚರಿಕೆ ನೀಡಿದೆ. ಬಿಲಾವಲ್ ತಾಯಿ ಹಾಗೂ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ 2007ರಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹತ್ಯೆಯಾಗಿದ್ದರು. ಬಿಲಾವಲ್ ಇನ್ನೂ ಚಿಕ್ಕವನಾಗಿದ್ದು, ಯುದ್ಧದ ಸ್ಥಿತಿಯನ್ನು ಇನ್ನೂ ನೋಡಿಲ್ಲ. ಅಮೆರಿಕವನ್ನು ಓಲೈಸಲು ಪ್ರಧಾನಿ ಷರೀಪ್ ಟಿಟಿಪಿ ವಿರುದ್ಧದ ಸಮರದಲ್ಲಿ ತಮ್ಮ ಇಡೀ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ ಎಂದು ಅದು ಆರೋಪಿಸಿದೆ.