ನ್ಯೂಸ್

ಸೋಮವಾರದಿಂದ ಬದಲಾವಣೆಗಳ ಅಬ್ಬರ; ಆರ್ಥಿಕ ಕ್ಷೇತ್ರದಲ್ಲೂ ಹಲವು ಮಾರ್ಪಾಡು

Webdesk - Manjunatha B

ನವದೆಹಲಿ: ಇನ್ನೊಂದು ದಿನ ಕಳೆದರೆ, ಇಸವಿ ಬದಲಾಗಿರುತ್ತದೆ. ಹೊಸ ಕ್ಯಾಲೆಂಡರ್ ವರ್ಷದಲ್ಲಿ ಒಂದಷ್ಟು ಹೊಸ ಬದಲಾವಣೆಗಳಾದರೆ, ಇನ್ನೊಂದಷ್ಟರ ಗಡುವು ಮುಗಿದಿರುತ್ತದೆ. ಅದರಲ್ಲೂ ಜನರ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುವಂಥ ಕೆಲ ಬದಲಾವಣೆ-ಬೆಳವಣಿಗೆಗಳ ಕುರಿತ ಸಂಕ್ಷಿಪ್ತ ವಿವರ ಇಲ್ಲಿದೆ. ಈ ಪೈಕಿ ಹಲವು 2024ರ ಜನವರಿಯಿಂದ ಜಾರಿಗೆ ಬರಲಿವೆ.

ವಿದ್ಯಾರ್ಥಿಗಳಿಗೆ ಕೆನಡಾ ದುಬಾರಿಅಧ್ಯಯನಕ್ಕಾಗಿ ಬರುವ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ನಿಯಮಗಳಲ್ಲಿ 2024 ಜ.1ರಿಂದ ಬದಲಾವಣೆಗಳನ್ನು ತರಲು ಕೆನಡಾ ಸರ್ಕಾರ ನಿರ್ಧರಿಸಿದೆ. ಈ ಬದಲಾವಣೆಯಿಂದಾಗಿ ವಿದೇಶಿ ವಿದ್ಯಾರ್ಥಿಗಳ ವೆಚ್ಚ ದುಬಾರಿ ಆಗಲಿದೆ. ಇದು ಕೆನಡಾಕ್ಕೆ ಆಗಮಿಸುವ ವಿದ್ಯಾರ್ಥಿಗಳ ಸಂಖ್ಯೆ ಮೇಲೆ ಪರಿಣಾಮ ಬೀರಲಿದೆ. ಕೆನಡಾದಲ್ಲಿ ಶಿಕ್ಷಣ ಪಡೆಯುವ ಆಸಕ್ತ ವಿದ್ಯಾರ್ಥಿಗಳು ತಮ್ಮ ಬಳಿ 20,635 ಡಾಲರ್ ಇದೆ (ಅಂದಾಜು 13 ಲಕ್ಷ ರೂ.) ಎನ್ನುವುದನ್ನು ತೋರಿಸಬೇಕಾಗುತ್ತದೆ. ಅಂದಾಜು 2 ದಶಕಗಳಿಂದ ಆ ಮೊತ್ತ 10,000 ಡಾಲರ್ ಆಗಿತ್ತು.

ನಿಷ್ಕ್ರಿಯ ಯುಪಿಐ ಐಡಿಗಳ ರದ್ದು: ಒಂದು ವರ್ಷದಿಂದ ನಿಷ್ಕ್ರಿಯವಾಗಿರುವ ಯುಪಿಐ ಐಡಿಗಳನ್ನು ರದ್ದುಗೊಳಿಸುವಂತೆ ಬ್ಯಾಂಕ್​ಗಳು ಮತ್ತು ಪೇಮೆಂಟ್ ಆಪ್​ಗಳಾದ ಗೂಗಲ್​ಪೇ, ಪೇಟಿಎಂ ಮುಂತಾದವುಗಳಿಗೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೆರೇಷನ್ ಆಫ್ ಇಂಡಿಯಾ (ಎನ್​ಪಿಸಿಐ) ಡಿ.31ರ ಗಡುವು ನೀಡಿದೆ. ಹೀಗಾಗಿ ಒಂದು ವರ್ಷದಿಂದ ನಿಷ್ಕ್ರಿಯವಾಗಿರುವ ಯುಪಿಐ ಐಡಿಗಳು ಜ.1ರಿಂದ ಸ್ಥಗಿತಗೊಳ್ಳಲಿವೆ.

ವಿಮೆ ಪರಿಷ್ಕೃತ ಮಾಹಿತಿ: ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್​ಡಿಎ) ನಿಯಮಗಳನ್ನು ಸ್ಪಷ್ಟಗೊಳಿಸುವ ನಿಟ್ಟಿನಲ್ಲಿ ಗ್ರಾಹಕ ಮಾಹಿತಿ ಪಟ್ಟಿಯನ್ನು ಪರಿಷ್ಕರಿಸಿದ್ದು, ಪಾಲಿಸಿದಾರರು ಹೊಸದಾಗಿ ವಿವರವನ್ನು ಸಲ್ಲಿಸಲು ಜ.1ರಿಂದ ಅನ್ವಯಿಸುವಂತೆ ಅವಕಾಶ ನೀಡಿದೆ.

ಮಿಕ್ಕಿ, ಮಿನಿ ಮೌಸ್ ಮುಕ್ತ ಬಳಕೆ: ಡಿಸ್ನಿ ಕ್ಯಾರೆಕ್ಟರ್​ಗಳಾದ ಮಿಕ್ಕಿ ಆಂಡ್ ಮಿನಿ ಮೌಸ್​ನ ಕಾಪಿರೈಟ್ ಅವಧಿ ಡಿ.31ಕ್ಕೆ ಮುಗಿಯಲಿದೆ. ಹೀಗಾಗಿ ವ್ಯಂಗ್ಯಚಿತ್ರಕಾರರು, ಲೇಖಕರು ಮತ್ತು ಸಿನಿಮಾ ಕ್ಷೇತ್ರ ಮುಂತಾದವರು ಇದನ್ನು ಜ.1ರಿಂದ ಮುಕ್ತವಾಗಿ ಬಳಸಬಹುದು.

ಆಧಾರ್ ಉಚಿತ ತಿದ್ದುಪಡಿ: ಆಧಾರ್ ವಿವರಗಳನ್ನು ಆನ್​ಲೈನ್​ನಲ್ಲಿ ಉಚಿತವಾಗಿ ಸಕಾಲಿಕಗೊಳಿಸುವ ಗಡುವು ಡಿ.31ಕ್ಕೆ ಮುಕ್ತಾಯವಾಗಲಿದೆ. ಅದರ ನಂತರ ಈ ಪ್ರಕ್ರಿಯೆಗೆ 50 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ.

ಬ್ಯಾಂಕ್ ಲಾಕರ್ ಒಪ್ಪಂದ: ಪರಿಷ್ಕೃತ ಬ್ಯಾಂಕ್ ಲಾಕರ್ ಒಪ್ಪಂದಕ್ಕೆ ಡಿ.31ರ ಒಳಗೆ ಸಹಿ ಹಾಕದಿದ್ದರೆ ಅವರ ಲಾಕರ್​ಗಳು ಸ್ಥಗಿತಗೊಳ್ಳುತ್ತವೆ (ಫ್ರೀಜ್) ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಎಚ್ಚರಿಸಿದೆ.

ಸಿಮ್ ಕಾರ್ಡ್ ಕೆವೈಸಿ: ಮೊಬೈಲ್ ಫೋನ್ ಬಳಕೆದಾರರು ಹೊಸ ಸಿಮ್ ಖರೀದಿಸಬೇಕಾದರೆ ಸಲ್ಲಿಸುವ ಪೇಪರ್-ಆಧಾರಿತ ಗ್ರಾಹಕರ ವಿವರ (ಕೆವೈಸಿ) ಡಿ.31ರ ನಂತರ ಪ್ರಯೋಜನಕ್ಕೆ ಬರುವುದಿಲ್ಲ ಎಂದು ದೂರಸಂಪರ್ಕ ಇಲಾಖೆ ಸ್ಪಷ್ಟಪಡಿಸಿದೆ.

ಸಣ್ಣ ಉಳಿತಾಯ ಬಡ್ಡಿದರ ಹೆಚ್ಚಳ: ಸುಕನ್ಯಾ ಸಮೃದ್ಧಿ ಸೇರಿದಂತೆ ಕೆಲ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ. ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿದರವನ್ನು 20 ಮೂಲಾಂಶಗಳಷ್ಟು ಮತ್ತು ಮೂರು ವರ್ಷಗಳ ಅವಧಿ ಠೇವಣಿಯ ಬಡ್ಡಿದರವನ್ನು 10 ಮೂಲಾಂಶಗಳಷ್ಟು ಡಿ.29ರಂದೇ ಪರಿಷ್ಕರಿಸಲಾಗಿದೆ. ಈ ಬದಲಾವಣೆ ಜನವರಿ-ಮಾರ್ಚ್ ತ್ರೖೆಮಾಸಿಕಕ್ಕೆ ಅನ್ವಯಿಸಿ ಜಾರಿಗೆ ಬರಲಿದೆ. ಈ ಮೂಲಕ ಸುಕನ್ಯಾ ಸಮೃದ್ಧಿ ಯೋಜನೆ ಬಡ್ಡಿದರ ಶೇ. 8ರಿಂದ ಶೇ. 8.2ಗೆ ಮತ್ತು ಮೂರು ವರ್ಷಗಳ ಅವಧಿ ಠೇವಣಿ ಬಡ್ಡಿದರ ಶೇ.7ರಿಂದ ಶೇ. 7.1ಕ್ಕೆ ಏರಲಿದೆ.

ಐಟಿಆರ್ ಸಲ್ಲಿಕೆಗೆ ನಾಳೆಯೇ ಕಡೇದಿನ: ಆದಾಯ ತೆರಿಗೆ ವಿವರ ಸಲ್ಲಿಕೆ ಮಾಡದವರಿಗೆ ಆದಾಯ ತೆರಿಗೆ ಇಲಾಖೆಯು ಇತ್ತೀಚೆಗೆ ಡಿ.31ರವರೆಗೆ ಗಡುವು ವಿಸ್ತರಿಸಿ ಇನ್ನೊಂದು ಅವಕಾಶ ನೀಡಿತ್ತು. 2022-23ನೇ ಆರ್ಥಿಕ ವರ್ಷದ ಐಟಿ ರಿಟರ್ನ್ಸ್ ಫೈಲ್ ಮಾಡಿರದವರು ಡಿ.31ರ ಒಳಗೆ ಮಾಡಿಕೊಳ್ಳಬಹುದು.

ಕಾರುಗಳ ಬೆಲೆ ಏರಿಕೆ: ಆಟೋಮೊಬೈಲ್ಸ್ ಕ್ಷೇತ್ರದ ಮುಂಚೂಣಿ ಕಂಪನಿಗಳಾದ ಮಾರುತಿ ಸುಜುಕಿ, ಟಾಟಾ ಮೋಟರ್ಸ್, ಹ್ಯುಂಡೈ, ಮರ್ಸಿಡಿಸ್ ಮತ್ತು ಆಡಿ ಕಂಪನಿಗಳು ಈಗಾಗಲೇ ದರ ಏರಿಕೆಯನ್ನು ಘೋಷಣೆ ಮಾಡಿದ್ದು, ಪರಿಷ್ಕೃತ ದರ ಜ.1ರಂದು ಜಾರಿಗೆ ಬರಲಿದೆ.