ನ್ಯೂಸ್

ಟೀಕೆಗಳ ನಡುವೆಯೂ ವೃದ್ಧಿಸುತ್ತಿರುವ ಮೋದಿ ಪರಿವಾರ; ಕಾಂಗ್ರೆಸ್ ಮುಖ್ಯಸ್ಥರಾಗಿದ್ದವರೇ ಬಿಜೆಪಿಗೆ ಸೇರ್ಪಡೆ

ಗಾಂಧಿನಗರ: ವಿಪಕ್ಷಗಳ ಇಂಡಿಯಾ ಒಕ್ಕೂಟ ಪ್ರಧಾನಿ ನರೇಂದ್ರ ಮೋದಿ ಅವರ ಕುಟುಂಬದ ಕುರಿತು ಮಾತನಾಡಿದ ಪರಿಣಾಮ ದೇಶಾದ್ಯಂತ ಸೃಷ್ಟಿಯಾಗಿರುವ ‘ಮೋದಿ ಕಾ ಪರಿವಾರ್’ ಅಲೆ, ಇದೀಗ ಮೋದಿ ಪರಿವಾರವನ್ನು ವೃದ್ಧಿಸುತ್ತಿದೆ. ವಿಪಕ್ಷಗಳಿಂದ ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್​ನಿಂದ ಬಿಜೆಪಿಗೆ ಪಕ್ಷಾಂತರ ಆಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಗುಜರಾತ್​ನಲ್ಲಿ ಕಾಂಗ್ರೆಸ್ ಮುಖ್ಯಸ್ಥರಾಗಿದ್ದ, ಮಾಜಿ ಶಾಸಕ ಅರ್ಜುನ್ ಮೊಧ್ವಾಡಿಯಾ ಹಾಗೂ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿದ್ದ ಅಂಬರೀಷ್ ದೇರ್ ಇಬ್ಬರೂ ಮಂಗಳವಾರ ಬಿಜೆಪಿಗೆ ಸೇರಿದ್ದಾರೆ. ಸೋಮವಾರವಷ್ಟೇ ಇವರು ಕಾಂಗ್ರೆಸ್​ಗೆ ರಾಜೀನಾಮೆ ನೀಡಿ, ಆ ಪಕ್ಷದಿಂದ ಅಧಿಕೃತವಾಗಿ ಹೊರಬಂದಿದ್ದರು.

ರಾಜ್ಯ ಬಿಜೆಪಿಯ ಪ್ರಧಾನ ಕಚೇರಿ ‘ಕಮಲಂ’ನಲ್ಲಿ ರಾಜ್ಯ ಬಿಜೆಪಿ ಮುಖ್ಯಸ್ಥ ಸಿ.ಆರ್.ಪಾಟೀಲ್ ಮತ್ತಿತರ ನಾಯಕರ ಸಮ್ಮುಖದಲ್ಲಿ ಇವರು ಕಮಲ ಪಾಳಯಕ್ಕೆ ಸೇರ್ಪಡೆಗೊಂಡರು. ಅಯೋಧ್ಯೆಯಲ್ಲಿನ ರಾಮಮಂದಿರ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಕಾಂಗ್ರೆಸ್ ಬಹಿಷ್ಕರಿಸಿದ್ದ ಬೇಸರದಿಂದ ಪಕ್ಷ ತೊರೆಯುತ್ತಿರುವುದಾಗಿ ಇವರು ಹೇಳಿಕೊಂಡಿದ್ದರು. ಕಾಂಗ್ರೆಸ್​ನ ಭಾರತ್ ಜೋಡೋ ನ್ಯಾಯಯಾತ್ರೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಗುಜರಾತ್​ಗೆ ಪ್ರವೇಶಿಸಲು 3 ದಿನಗಳಿರುವಾಗಲೇ ಇವರು ಬಿಜೆಪಿಗೆ ಸೇರಿರುವುದು ಗಮನ ಸೆಳೆದಿದ್ದು, ರಾಹುಲ್​ಗೆ ಮುಜುಗರ ಉಂಟು ಮಾಡುವ ಪರಿಸ್ಥಿತಿ ಸೃಷ್ಟಿಯಾಗಿದೆ.

ಇವರಿಬ್ಬರು ರಾಜೀನಾಮೆ ನೀಡುವ ಒಂದು ದಿನ ಮೊದಲು ಮಾಜಿ ಕೇಂದ್ರ ಸಚಿವ ನರನ್ ರಥ್ವಾ ಅವರು ತಮ್ಮ ಪುತ್ರ ಮತ್ತು ಅಪಾರ ಬೆಂಬಲಿಗರ ಸಹಿತ ಬಿಜೆಪಿಗೆ ಸೇರಿದ್ದರು. ಅರ್ಜುನ್ ಮೊಧ್ವಾಡಿಯಾ 40 ವರ್ಷಗಳಿಂದ ಕಾಂಗ್ರೆಸ್​ನಲ್ಲಿದ್ದರು. ದೇರ್ 2017ರಿಂದ 2022ರ ವರೆಗೆ ಅಮ್ರೇಲಿ ಜಿಲ್ಲೆಯ ರಜೌಲ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಶಾಸಕರಾಗಿದ್ದರು.

ಮೋದಿ ಕ್ಷೇತ್ರದ ಮಾಜಿ ಸಂಸದ ಬಿಜೆಪಿಗೆ: ಉತ್ತರಪ್ರದೇಶದ ಕಾಂಗ್ರೆಸ್ ನಾಯಕ, ವಾರಾಣಸಿ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ರಾಜೇಶ್ ಮಿಶ್ರಾ ಕಾಂಗ್ರೆಸ್​ಗೆ ರಾಜೀನಾಮೆ ನೀಡಿ, ಮಂಗಳವಾರ ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಸಚಿವ ಅಮಿತ್ ಷಾ ಅವರಿಗೆ ಕೃತಜ್ಞತೆ ಸಲ್ಲಿಸಿದ ರಾಜೇಶ್, ಮುಂದಿನ ರಾಜಕೀಯ ಜೀವನ ಬಿಜೆಪಿಯಲ್ಲೇ ಕಳೆಯುವುದಾಗಿ ಹೇಳಿದರು. ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ಮುಂದಿನ ಚುನಾವಣೆಯಲ್ಲಿ ವಿಪಕ್ಷದವರಿಗೆ ಬೂತ್​ಗಳಲ್ಲಿ ಪೋಲಿಂಗ್ ಏಜೆಂಟ್ ಕೂಡ ಸಿಗದಂತೆ ಮಾಡುವುದು ನನ್ನ ಗುರಿ ಎಂದರು. ಪ್ರಧಾನಿ ಮೋದಿ ಈ ಸಲ ಮೂರನೇ ಬಾರಿಗೆ ಈ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ.