ನ್ಯೂಸ್

ಮಹಾರಾಷ್ಟ್ರದ ಉದ್ಧಟತನ; ಬೆಳಗಾವಿಯಲ್ಲಿ ಹಸ್ತಕ್ಷೇಪಕ್ಕೆ ತಕ್ಕ ತಿರುಗೇಟು ಅಗತ್ಯ

‘ಬೆಳಗಾವಿಯು ಕರ್ನಾಟಕದ ಅವಿಭಾಜ್ಯ ಅಂಗ’ ಎಂದು ಮಹಾಜನ್ ಆಯೋಗ ಸೇರಿದಂತೆ ಈವರೆಗಿನ ಎಲ್ಲ ಆಯೋಗಗಳು ಸ್ಪಷ್ಟಪಡಿಸಿದ್ದರೂ, ಬೆಳಗಾವಿಯಲ್ಲಿ ಮೂಗು ತೂರಿಸುವ ಮಹಾರಾಷ್ಟ್ರ ಸರ್ಕಾರದ ಹಾಗೂ ಕೆಲವು ಮರಾಠಿ ಪಟ್ಟಭದ್ರ ಹಿತಾಸಕ್ತಿಗಳ ಹಳೇ ಚಾಳಿ ಆಗಾಗ ಮರುಕಳಿಸುತ್ತಲೇ ಇದೆ. ಮರಾಠಿಗರ ಹಸ್ತಕ್ಷೇಪವು ಪ್ರತಿ ಬಾರಿ ವಿಧಾನಸಭೆ ಅಧಿವೇಶನ ನಡೆಯುವ ಸಂದರ್ಭದಲ್ಲಿ ಸಮಾವೇಶ, ಪ್ರತಿಭಟನೆ, ಕೂಗಾಟಗಳಿಗೆ ಸೀಮಿತವಾಗಿರುತ್ತಿತ್ತು. ಮಹಾರಾಷ್ಟ್ರದ ಕೆಲವು ರಾಜಕಾರಣಿಗಳು ಬೆಳಗಾವಿಗೆ ಬಂದು ‘ಉರಿಯುವ ಬೆಂಕಿಗೆ ತುಪ್ಪ ಸುರಿದು’ ಹೋಗುತ್ತಿದ್ದರು. ಆದರೆ ಈಗ ಮಹಾರಾಷ್ಟ್ರದವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ತಮ್ಮ ಸರ್ಕಾರದ ‘ಮಹಾತ್ಮ ಜ್ಯೋತಿರಾವ್ ಫುಲೆ ಜನಾರೋಗ್ಯ ವಿಮಾ ಯೋಜನೆ’ಯ ನಾಲ್ಕಾರು ಕೇಂದ್ರಗಳನ್ನು ಬೆಳಗಾವಿಯಲ್ಲಿ ತೆರೆಯುವ ಮೂಲಕ ಉದ್ಧಟತನ ಮೆರೆದಿದ್ದಾರೆ. ಎಲ್ಲ ಕಡೆ ಎಂಇಎಸ್ ಶಿಫಾರಸು ಪತ್ರ ನೀಡಿಕೆ, ಸಹಾಯವಾಣಿ ಸ್ಥಾಪನೆ, ಅರ್ಜಿ ವಿತರಣೆ-ಸ್ವೀಕಾರ ಮುಂತಾದ ಕಾರ್ಯಗಳು ಸಾಂಗೋಪಾಂಗವಾಗಿ ನಡೆದಿವೆ. ಕನ್ನಡಪರ ಹೋರಾಟಗಾರರು ಬಹಿರಂಗಪಡಿಸಿದ ನಂತರವಷ್ಟೇ ಈ ವಿಷಯ ಸ್ಥಳೀಯ ಆಡಳಿತದ ಗಮನಕ್ಕೆ ಬಂದಿದ್ದು, ನೋಟಿಸ್ ಜಾರಿಗೊಳಿಸಲು ಬೆಳಗಾವಿ ಜಿಲ್ಲಾಧಿಕಾರಿ ಮುಂದಾಗಿದ್ದಾರೆ. ಇನ್ನೊಂದೆಡೆ, ಅಂಗಡಿ-ಮುಂಗಟ್ಟುಗಳ ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ಪ್ರಥಮ ಆದ್ಯತೆ ಜತೆಗೆ ಶೇ. 60ರಷ್ಟು ಕನ್ನಡವನ್ನು ಬಳಸಬೇಕೆಂಬ ಕರ್ನಾಟಕ ಸರ್ಕಾರದ ಆದೇಶಕ್ಕೂ ಬೆಳಗಾವಿಯಲ್ಲಿ ಬೆಲೆ ಇಲ್ಲದಂತಾಗಿದೆ. ಹಲವಾರು ಅಂಗಡಿಕಾರರು ಕನ್ನಡ ಭಾಷೆ ಬಳಸುವುದಕ್ಕೆ ಒಪ್ಪುತ್ತಲೇ ಇಲ್ಲ. ಬಹಳಷ್ಟು ಅಂಗಡಿಗಳಿಗೆ ಮರಾಠಿಗರೇ ಮಾಲೀಕರಾಗಿರುವುದು ಇದಕ್ಕೆ ಕಾರಣ. ಈ ರೀತಿಯ ಅಸಹಕಾರ ಅಕ್ಷಮ್ಯ.

ಇದೆಲ್ಲದರ ಹಿಂದೆ ಮಹಾರಾಷ್ಟ್ರದ ರಾಜಕಾರಣಿಗಳ ಕುಮ್ಮಕ್ಕು ಇರುವುದು ಸ್ಪಷ್ಟವಾಗಿದೆ. ಏಕೆಂದರೆ, ಇತ್ತೀಚೆಗಷ್ಟೇ ‘ನಾಮಫಲಕದಲ್ಲಿ ಕನ್ನಡ ಅನುಷ್ಠಾನ’ ಆದೇಶದ ವಿರುದ್ಧ ಮಹಾರಾಷ್ಟ್ರದಲ್ಲಿ ಬಹಿರಂಗವಾಗಿಯೇ ಕೆಲವರು ಪ್ರತಿಭಟನೆ ನಡೆಸಿದ್ದಾರೆ. ಆ ಮೂಲಕ ಬೆಳಗಾವಿಯ ಮರಾಠಿಗರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಬೆಳಗಾವಿಯಲ್ಲಿ ನೆಲೆಸಿರುವ ಮರಾಠಿ ಭಾಷಿಕರನ್ನು ಭಾವನಾತ್ಮಕವಾಗಿ ಮಹಾರಾಷ್ಟ್ರದತ್ತ ಸೆಳೆಯುವುದು ಅವರ ಕುತಂತ್ರ. ‘ನಿಮ್ಮ ಬಗ್ಗೆ ಕರ್ನಾಟಕ ಸರ್ಕಾರ ನಿರ್ಲಕ್ಷ್ಯ ವಹಿಸಿದೆ, ನಿಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದೆ’ ಎಂಬುದಾಗಿ ಮರಾಠಿಭಾಷಿಕರ ಮನಸ್ಸಿನಲ್ಲಿ ವಿಷ ಬಿತ್ತುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ‘ಮಹಾರಾಷ್ಟ್ರ ಸರ್ಕಾರದ ಯೋಜನೆಗಳ ಲಾಭವನ್ನು ಬೆಳಗಾವಿಯ ಮರಾಠಿಗರೂ ಪಡೆಯುತ್ತಿದ್ದಾರೆ’ ಎಂಬುದಾಗಿ ಸುಪ್ರೀಂ ಕೋರ್ಟಿನಲ್ಲಿ ಬಿಂಬಿಸುವ ಹುನ್ನಾರವೂ ಇದರ ಹಿಂದೆ ಇದೆ. ಇಂತಹ ನಡೆಗಳನ್ನು ಕರ್ನಾಟಕ ಸರ್ಕಾರ ನೋಡುತ್ತ ಕುಳಿತುಕೊಳ್ಳಬಾರದು. ಮೂಲದಲ್ಲೇ ಚಿವುಟಿಹಾಕಬೇಕು. ಕರ್ನಾಟಕ-ಕನ್ನಡ ವಿರೋಧಿ ನಡವಳಿಕೆಗೆ ಕಡಿವಾಣ ಹಾಕಬೇಕು. ಬೆಳಗಾವಿಯ ಕನ್ನಡಿಗರು ಧ್ವನಿ ಎತ್ತಿದಾಗ, ಸರ್ಕಾರ ಕೂಡಲೇ ಅದಕ್ಕೆ ಸ್ಪಂದಿಸಬೇಕು. ಆಗ ಮಾತ್ರ ನಿಜವಾದ ಅರ್ಥದಲ್ಲಿ ಬೆಳಗಾವಿಯು ಕರ್ನಾಟಕದ ಅವಿಭಾಜ್ಯ ಅಂಗವಾಗಿರಲು ಸಾಧ್ಯ.