ನ್ಯೂಸ್

ಒಟಿಟಿಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ 'ಮಹಾರಾಜ'! ವಿಜಯ್​ ಸೇತುಪತಿ ಚಿತ್ರಕ್ಕೆ ತಲೆಬಾಗಿದ ಸಿನಿಪ್ರಿಯರು

ಮೋಹನ್​ ಶೆಟ್ಟಿ

ತಮಿಳುನಾಡು: ಜೂನ್​ 14ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡ ತಮಿಳು ನಟ ವಿಜಯ್ ಸೇತುಪತಿ ಅಭಿನಯದ ‘ಮಹಾರಾಜ’ ಸಿನಿಮಾ ಇತ್ತೀಚೆಗಷ್ಟೇ ಅಧಿಕೃತವಾಗಿ ಒಟಿಟಿ ಪ್ಲಾಟ್​ಫಾರ್ಮ್ ಆದ​ ನೆಟ್​ಫ್ಲಿಕ್ಸ್​ಗೆ ಎಂಟ್ರಿ ಕೊಟ್ಟಿತು. ಸೇತುಪತಿ ಅಭಿನಯದ 50ನೇ ಚಿತ್ರ ಇದಾಗಿದ್ದು, ಬಾಕ್ಸ್ ಆಫೀಸ್​ನಲ್ಲಿ ಹೆಚ್ಚಿನ ಭರವಸೆ ಮೂಡಿಸದೇ ಹೋದರೂ ಒಟಿಟಿಯಲ್ಲಿ ಸ್ಟ್ರೀಮಿಂಗ್​ ಆದ ಮೊದಲ ದಿನದಿಂದಲೂ ಸಖತ್ ಸದ್ದು ಮಾಡುತ್ತಿದೆ. ಚಿತ್ರದಲ್ಲಿ ಸೇತುಪತಿ ಅವರ ಅಭಿನಯಕ್ಕೆ ಫಿದಾ ಆಗಿರುವ ಪ್ರೇಕ್ಷಕರು, ಯಾವ ಪಾತ್ರ ಕೊಟ್ಟರು ಅದಕ್ಕೆ ಜೀವ ತುಂಬುವ ನಟರಲ್ಲಿ ನೀವು ಒಬ್ಬರು, ಇಂತಹ ಒಳ್ಳೊಳ್ಳೆ ಪಾತ್ರಗಳು ನಿಮಗೇ ಸಿಗಲಿ ಎಂದು ಆಶಿಸಿದ್ದರು. ಈ ಬೆನ್ನಲ್ಲೇ ಒಟಿಟಿಯಲ್ಲಿ ಹೊಸ ದಾಖಲೆ ಬರೆದಿರುವ 'ಮಹಾರಾಜ', ಈ ವಿಷಯದಲ್ಲಿ ಹಿಂದಿನ ಸೂಪರ್​ಹಿಟ್​ ಸಿನಿಮಾಗಳನ್ನು ಹಿಂದಿಕ್ಕುವ ಮೂಲಕ ಇದೀಗ ನೋಡುಗರ ಹುಬ್ಬೇರಿಸಿದೆ. ಅಸಲಿಗೆ ಸೇತುಪತಿ ಚಿತ್ರ ಮಾಡಿದ ದಾಖಲೆ ಏನು? ಹೀಗಿದೆ ವಿವರ.

ಭಾರತೀಯ ಚಿತ್ರರಂಗದಲ್ಲಿ ತನ್ನದೇ ವಿಶೇಷ ಅಭಿಮಾನಿಗಳ ಬಳಗವನ್ನು ಹೊಂದಿರುವ ವಿಜಯ್ ಸೇತುಪತಿ, ಸಿನಿಪ್ರೇಕ್ಷಕರು ಅತಿಯಾಗಿ ಇಷ್ಟಪಡುವ ಪ್ರಮುಖ ಸ್ಟಾರ್​ ನಟರಲ್ಲಿ ಒಬ್ಬರು. ಯಾವುದೇ ಕಥಾಹಂದರವಿರಲಿ, ಎಂತಹ ಪಾತ್ರವಿರಲಿ, ಕೊಟ್ಟ ಪಾತ್ರಕ್ಕೆ ಜೀವ ತುಂಬುವ ಕೆಲಸ ಮಾಡುವ ಸೇತುಪತಿ, ಅದ್ಭುತ ನಟನೆಯಿಂದಲೇ ನೋಡುಗರ ಮನಗೆಲ್ಲುತ್ತಾರೆ. ಸರಳ ಅಭಿನಯ, ಪಾತ್ರ ಹಾಗೂ ಕಥೆಯ ಆಯ್ಕೆಯಲ್ಲೇ ಮೊದಲ ಗೆಲುವು ನೋಡುವ ವಿಜಯ್​, ಸಿನಿಮಾ ರಿಲೀಸ್ ಆದ ನಂತರ ಅಭಿಮಾನಿಗಳ ಖುಷಿ, ಪ್ರಶಂಸೆಗಳನ್ನು ಪಡೆಯುವ ಮುಖೇನ ದೊಡ್ಡ ಗೆಲುವನ್ನು ಸಾಧಿಸುತ್ತಾರೆ. ಈಗ 'ಮಹಾರಾಜ'ನ ವಿಷಯದಲ್ಲಿಯೂ ಅವರು ಮುಂಚೂಣಿಯಲ್ಲಿದ್ದಾರೆ.

ನಿಥಿಲನ್ ಸ್ವಾಮಿನಾಥನ್ ನಿರ್ದೇಶನದ 'ಮಹಾರಾಜ' ಚಿತ್ರ ಇದೀಗ 2024ರಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಅತಿ ಹೆಚ್ಚು ವೀಕ್ಷಿಸಲಾದ ಭಾರತೀಯ ಚಲನಚಿತ್ರ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಜುಲೈ 12, 2024 ರಂದು ಒಟಿಟಿಗೆ ಎಂಟ್ರಿ ಕೊಟ್ಟ ಈ ಚಿತ್ರವು ಕೇವಲ 6 ವಾರಗಳಲ್ಲಿ ಈ ಮೈಲಿಗಲ್ಲು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಇದಲ್ಲದೆ, 'ದಿ ಕ್ರೂ' ಮತ್ತು 'ಲಾಪಟಾ ಲೇಡೀಸ್‌'ನಂತಹ ಬಾಲಿವುಡ್ ಹಿಟ್‌ಗಳ ಸಿನಿಮಾಗಳ ಒಟ್ಟು ವೀಕ್ಷಣೆಗಳನ್ನು ಮೀರಿಸಿ, ಮುನ್ನುಗ್ಗಿದೆ. ಈ ಕುರಿತು ಸ್ವತಃ ಚಿತ್ರತಂಡವೇ ತನ್ನ ಅಧಿಕೃತ ಜಾಲತಾಣದ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

ಇತ್ತೀಚಿನ ವರದಿಯ ಪ್ರಕಾರ, ವಿಜಯ್ ಸೇತುಪತಿ ಅಭಿನಯದ ಈ ಚಿತ್ರವು ನೆಟ್‌ಫ್ಲಿಕ್ಸ್‌ನಲ್ಲಿ ಒಟ್ಟು 18.6 ಮಿಲಿಯನ್ ವೀಕ್ಷಣೆಯೊಂದಿಗೆ ಅತಿ ಹೆಚ್ಚು ಸ್ಟ್ರೀಮ್​ ಮಾಡಲಾದ ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದಿದೆ. ತದನಂತರದಲ್ಲಿ 'ದಿ ಕ್ರ್ಯೂ' 17.9 ಮತ್ತು 'ಲಾಪಟಾ ಲೇಡೀಸ್‌' 17.1 ಮಿಲಿಯನ್ ವೀಕ್ಷಣೆ ಪಡೆಯುವ ಮೂಲಕ ಎರಡನೇ ಹಾಗೂ ಮೂರನೇ ಸ್ಥಾನವನ್ನು ಅಲಂಕರಿಸಿದೆ. ಚಿತ್ರದಲ್ಲಿ ಅನುರಾಗ್ ಕಶ್ಯಪ್, ಮಮತಾ ಮೋಹನ್ ದಾಸ್, ನಟರಾಜನ್ ಸುಬ್ರಮಣ್ಯಂ, ಅಭಿರಾಮಿ ಗೋಪಿಕುಮಾರ್, ಸಿಂಗಂಪುಲಿ, ಅರುಲ್ದಾಸ್, ಮುನಿಷ್ಕಾಂತ್ ಸೇರಿದಂತೆ ಮುಂತಾದವರ ತಾರಾಗಣವಿದೆ,(ಏಜೆನ್ಸೀಸ್).