ನ್ಯೂಸ್

ಮಹಾ 60%, ಜಾರ್ಖಂಡ 67% ಮತದಾನ; 23ರಂದು ಮತ ಎಣಿಕೆ

ಮುಂಬೈ: ಮಹಾರಾಷ್ಟ್ರದಲ್ಲಿ ಬುಧವಾರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಒಟ್ಟಾರೆ ಶೇ. 60 ಮತದಾರರು ಹಕ್ಕು ಚಲಾಯಿಸಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ. ಈ ಅಂಕಿ-ಅಂಶಗಳು ತಾತ್ಕಾಲಿಕವಾಗಿದ್ದು, ಪ್ರಕ್ರಿಯೆ ಮುಗಿದ ನಂತರ ನಿಖರ ಪ್ರಮಾಣ ತಿಳಿದುಬರಲಿದೆ. 2019ರ ಚುನಾವಣೆಯಲ್ಲಿ ಶೇ. 61.74ರಷ್ಟು ಮತದಾನ ದಾಖಲಾಗಿತ್ತು. ಎಲ್ಲಾ 288 ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿ ಸಂಜೆ 6 ಗಂಟೆಗೆ ಮುಕ್ತಾಯವಾಯಿತು. ನ. 23 ರಂದು ಮತ ಎಣಿಕೆ ನಡೆಯಲಿದೆ. ಪರ್ಲಿ ಮತ್ತು ಬೀಡ್ ಜಿಲ್ಲೆಯ ಕೆಲವು ಸ್ಥಳಗಳಲ್ಲಿ ಸಣ್ಣ ಪ್ರಮಾಣದ ಹಿಂಸಾಚಾರ ನಡೆದಿದೆ. ಇದರಿಂದ ಕೆಲಕಾಲ ಮತದಾನಕ್ಕೆ ಅಡ್ಡಿ ಉಂಟಾಯಿತು. ಕೆಲವು ಸ್ಥಳಗಳಲ್ಲಿ ಆಡಳಿತ ಮತ್ತು ಪ್ರತಿಸ್ಪರ್ಧಿ ಪಕ್ಷದ ಬೆಂಬಲಿಗರ ನಡುವೆ ಘರ್ಷಣೆ ನಡೆಯಿತು.

ನಾಸಿಕ್ ಜಿಲ್ಲೆಯ ನಂದಗಾಂವ್​ನಲ್ಲಿ ಶಿವಸೇನಾ ಅಭ್ಯರ್ಥಿ ಸುಹಾಸ್ ಕಾಂಡೆ ಮತ್ತು ಸ್ವತಂತ್ರ ಅಭ್ಯರ್ಥಿ ಸಮೀರ್ ಭುಜಬಲ್ ನಡುವೆ ವಾಗ್ವಾದ ನಡೆದಿದೆ. ಪರ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಮತಗಟ್ಟೆಯನ್ನು ಧ್ವಂಸಗೊಳಿಸುವ ಯತ್ನ ನಡೆಯಿತು. ಈ ವೇಳೆ ಶರದ್ ಪವಾರ್ ನೇತೃತ್ವದ ಎನ್​ಸಿಪಿ ಕಾರ್ಯಕರ್ತನ ಮೇಲೆ ಹಲ್ಲೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನಂದೂರಿನ ಮತಗಟ್ಟೆಗೆ ನುಗ್ಗಿದ ಕೆಲವರು ಇವಿಎಂ ಅನ್ನು ನೆಲಕ್ಕೆ ಎಸೆದು ಮತಗಟ್ಟೆಯಲ್ಲಿದ್ದ ಪೀಠೋಪಕರಣಗಳಿಗೆ ಹಾನಿ ಮಾಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ನಾಸಿಕ್ ಜಿಲ್ಲೆಯ ನಂದಗಾಂವ್​ನಲ್ಲಿ ಮತಗಟ್ಟೆಯೊಂದರಲ್ಲಿ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್​ನಲ್ಲಿ ತಾಂತ್ರಿಕ ದೋಷ ಕಂಡುಬಂದ ಕಾರಣ ಮತದಾನ ಸ್ವಲ್ಪ ವಿಳಂಬವಾಯಿತು.

ಜಾರ್ಖಂಡದಲ್ಲಿ ಅಂತಿಮ ಹಂತ: ಜಾರ್ಖಂಡದಲ್ಲಿ ಬುಧವಾರ ನಡೆದ ಎರಡನೇ ಮತ್ತು ಅಂತಿಮ ಹಂತದ ವಿಧಾನಸಭಾ ಚುನಾವಣೆಯಲ್ಲಿ 38 ಸ್ಥಾನಗಳಲ್ಲಿ ಶಾಂತಿಯುತ ಮತದಾನ ನಡೆದಿದ್ದು, ಶೇ.68 ಮತದಾರರು ಹಕ್ಕು ಚಲಾಯಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2019ರಲ್ಲಿ ಮತದಾನದ ಪ್ರಮಾಣ ಶೇ. 67.04 ಆಗಿತ್ತು. ಈ ವರ್ಷ ಇದಕ್ಕೂ ಮೀರಿ ಮತದಾನವಾಗಿದೆ. ನ. 13ರಂದು 43 ಸ್ಥಾನಗಳಿಗೆ ಮೊದಲ ಹಂತದ ಮತದಾನ ನಡೆದಿತ್ತು. ಶೇ. 66 ಮತದಾರರು ಹಕ್ಕು ಚಲಾಯಿಸಿದ್ದರು. ಜಮ್ತಾರಾ ಜಿಲ್ಲೆಯಲ್ಲಿ ಶೇ. 76.16 ಮತದಾನವಾಗಿದ್ದು, ರಾಜ್ಯದಲ್ಲಿ ಗರಿಷ್ಠವಾಗಿದೆ. ಬೊಕಾರೊ ಜಿಲ್ಲೆಯಲ್ಲಿ ಶೇ. 60.97 ಮತದಾನವಾಗಿದ್ದು, ಅತ್ಯಂತ ಕನಿಷ್ಠ ಪ್ರಮಾಣದ್ದಾಗಿದೆ.

ಬುರ್ಖಾ ಬಗ್ಗೆ ಆರೋಪ-ಪ್ರತ್ಯಾರೋಪ: ಉತ್ತರ ಪ್ರದೇಶದ ಉಪಚುನಾವಣೆಯಲ್ಲಿ ಬುರ್ಖಾ ಹಾಕಿಕೊಂಡು ಬರುವ ಮತದಾರರ ಗುರುತಿನ ಚೀಟಿಗಳನ್ನು ಕಡ್ಡಾಯವಾಗಿ ಪರಿಶೀಲನೆ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ಕೊಡಬೇಕು ಎಂದು ಬಿಜೆಪಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ. ಬುರ್ಖಾದಾರಿಗಳು ಹಲವು ಬಾರಿ ಮತದಾನ ಮಾಡಿರುವುದು, ಪುರುಷರು ಬುರ್ಖಾ ಧರಿಸಿ ಮತದಾನ ಮಾಡಿರುವ ಸಾಕಷ್ಟು ಉದಾಹರಣೆ ಇದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಬಿಜೆಪಿ ಆಗ್ರಹಿಸಿದೆ. ಈ ಬೆನ್ನಲ್ಲೇ ಸಮಾಜವಾದಿ ಪಕ್ಷ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದೆ. ಇಬ್ಬರು ಪೊಲೀಸ್ ಸಿಬ್ಬಂದಿ ಬುರ್ಖಾಧಾರಿ ಮಹಿಳೆಯರ ಗುರುತಿನ ಚೀಟಿಯನ್ನು ಪರಿಶೀಲನೆ ಮಾಡುತ್ತಿರುವ ವಿಡಿಯೋ ಇದಾಗಿದೆ. ಚುನಾವಣಾ ಅಧಿಕಾರಿಗಳು ಮಾತ್ರ ಐಡಿ ತಪಾಸಣೆ ಮಾಡಬೇಕು. ಪೊಲೀಸ್ ಸಿಬ್ಬಂದಿ ಮತದಾರರನ್ನು ಬೆದರಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಈ ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದಾಗಿ ಪೊಲೀಸ್ ಇಲಾಖೆ ನಂತರ ಸ್ಪಷ್ಟನೆ ನೀಡಿದೆ.

ಸೆಲೆಬ್ರಿಟಿಗಳಿಂದ ಮತದಾನ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಉದ್ಯಮಿಗಳು, ಸಿನಿಮಾ ತಾರೆಯರು, ಪ್ರಮುಖ ರಾಜಕಾರಣಿಗಳು ಸಹಿತ ಅನೇಕ ಸೆಲೆಬ್ರಿಟಿಗಳು ಮತದಾನ ಮಾಡಿದ್ದಾರೆ. ಆರ್​ಎಸ್​ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ನಾಗಪುರದ ಮಹಲ್ ಪ್ರದೇಶದ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು. ಎನ್​ಸಿಪಿ ನಾಯಕ ಅಜಿತ್ ಪವಾರ್ ಮತ್ತು ಅವರ ಪತ್ನಿ ಸುನೇತ್ರಾ ಪವಾರ್ ಪುಣೆ ಜಿಲ್ಲೆಯ ಬಾರಾಮತಿ ಪ್ರದೇಶದ ಕಟೆವಾಡಿಯಲ್ಲಿ ಮತದಾನ ಮಾಡಿದರು. ಉದ್ಧವ್ ಠಾಕ್ರೆ ಕುಟುಂಬದ ಸದಸ್ಯರ ಜತೆ ಆಗಮಿಸಿ ಮತ ಚಲಾಯಿಸಿದರು. ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ದಕ್ಷಿಣ ಮುಂಬೈನಲ್ಲಿರುವ ತಮ್ಮ ನಿವಾಸದ ಬಳಿಯ ಬೂತ್​ನಲ್ಲಿ ಪತ್ನಿಯೊಂದಿಗೆ ಹಕ್ಕು ಚಲಾಯಿಸಿದರು. ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಕುಟುಂಬ, ಎಚ್​ಡಿಎಫ್​ಸಿಯ ಮಾಜಿ ಅಧ್ಯಕ್ಷ ದೀಪಕ್ ಪರೇಖ್, ಟಾಟಾ ಸನ್ಸ್ ಅಧ್ಯಕ್ಷ ಎನ್.ಚಂದ್ರಶೇಖರನ್, ಕೈಗಾರಿಕೋದ್ಯಮಿ ಅಜಯ್ ಪಿರಾಮಲ್, ರೇಮಂಡ್ ಸಂಸ್ಥೆ ಮುಖ್ಯಸ್ಥ ಗೌತಮ್ ಸಿಂಘಾನಿಯಾ ಇನ್ನಿತರ ಉದ್ಯಮಿಗಳು ಮತ ಚಲಾಯಿಸಿದರು. ಬಾಲಿವುಡ್ ನಟರಾದ ಶಾರುಖ್ ಖಾನ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಸುನಿಲ್ ಶೆಟ್ಟಿ ಇನ್ನಿತರರು ಹಕ್ಕು ಚಲಾಯಿಸಿದರು.

ಸಿಎಂ ಏಕನಾಥ ಶಿಂಧೆ ಪ್ರತಿಸ್ಪರ್ಧಿ ವಿರುದ್ಧ ಕೇಸ್: ಮದ್ಯ ಮತ್ತು ನಗದು ಹೊಂದಿದ್ದ ಆರೋಪದ ಮೇಲೆ ಮುಖ್ಯಮಂತ್ರಿ ಏಕನಾಥ ಶಿಂಧೆ ವಿರುದ್ಧ ಸ್ಪರ್ಧಿಸಿರುವ ಕೊಪ್ರಿ-ಪಚ್ಪಖಾಡಿ ಕ್ಷೇತ್ರದ ಶಿವಸೇನಾ (ಯುಬಿಟಿ) ಅಭ್ಯರ್ಥಿ ಕೇದಾರ್ ದಿಘ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ದಿಘ ಮತ್ತು ಇತರ ಕೆಲವರನ್ನು ನಗದು ಮತ್ತು ಮದ್ಯದೊಂದಿಗೆ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಬಂಧಿಸ ಲಾಗಿದೆ. ಇವರು ಮತದಾರರಿಗೆ ಹಣ, ಮದ್ಯ ಹಂಚಲು ಮುಂದಾಗಿದ್ದರು ಎನ್ನಲಾಗಿದೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 174 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಲ್ಲು ತೂರಾಟ: ಉತ್ತರ ಪ್ರದೇಶದ 9, ಪಂಜಾಬ್​ನ 4, ಕೇರಳದ ಮತ್ತು ಉತ್ತರಖಂಡದಲ್ಲಿ ತಲಾ ಒಂದು ವಿಧಾನಸಭಾ ಕ್ಷೇತ್ರಕ್ಕೆ ಬುಧವಾರ ಮತದಾನ ನಡೆದಿದೆ. ಉತ್ತರ ಪ್ರದೇಶದ ಮೀರಾಪುರ ಕ್ಷೇತ್ರದಲ್ಲಿ ಕಲ್ಲು ತೂರಾಟ ನಡೆದ ಘಟನೆ ವರದಿಯಾಗಿದೆ. ಕೆಲವು ಮತಗಟ್ಟೆಗಳಲ್ಲಿ ಪೊಲೀಸರು ಮತದಾರರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಮಾಜವಾದಿ ಪಕ್ಷ ಆರೋಪ ಮಾಡಿದೆ. ಆದರೆ ಇದನ್ನು ಅಧಿಕಾರಿಗಳು ನಿರಾಕರಿಸಿದ್ದಾರೆ.

ಎರಡೂ ಕಡೆ ಬಿಜೆಪಿ ಮೈತ್ರಿಕೂಟ: ಮಹಾರಾಷ್ಟ್ರದ ಎಲ್ಲ 288 ಸ್ಥಾನಗಳು ಹಾಗೂ ಜಾರ್ಖಂಡ್​ನ 38 ವಿಧಾನಸಭಾ ಸ್ಥಾನಗಳಿಗೆ ಬುಧವಾರ ಸಂಜೆ ಮತದಾನ ಮುಗಿಯುತ್ತಿದ್ದಂತೆ ಪ್ರಕಟವಾದ ಮತದಾನೋತ್ತರ ಸಮೀಕ್ಷೆಗಳು ಎರಡೂ ಕಡೆ ಬಿಜೆಪಿ ಮೈತ್ರಿಕೂಟಕ್ಕೆ ಬಹುಮತದ ಭವಿಷ್ಯ ನುಡಿದಿವೆ. ಜಾರ್ಖಂಡ್ ಅಸೆಂಬ್ಲಿ ಒಟ್ಟು 81 ಸ್ಥಾನಗಳನ್ನು ಹೊಂದಿದ್ದು, ಬಾಕಿ 43 ಕ್ಷೇತ್ರಗಳಿಗೆ ನ. 13ರಂದು ಮತದಾನ ನಡೆದಿತ್ತು. ನ.23ರಂದು ಎಲ್ಲ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ. ಬಹುತೇಕ ಸಮೀಕ್ಷೆಗಳು ಮಹಾರಾಷ್ಟ್ರದಲ್ಲಿ ಮಹಾಯುತಿಗೆ (ಬಿಜೆಪಿ, ಶಿವಸೇನೆ (ಏಕನಾಥ ಶಿಂಧೆ ಬಣ) ಹಾಗೂ ಎನ್​ಸಿಪಿ (ಅಜಿತ್ ಪವಾರ್ ಬಣ) ಜೈಕಾರ ಹೇಳಿವೆ. ಮಾರ್ಟಿಜ್, ಪೀಪಲ್ಸ್ ಪಲ್ಸ್, ಚಾಣಕ್ಯ ಮುಂತಾದ ಸಂಸ್ಥೆಗಳು ಮಹಾಯುತಿ ಸ್ಪಷ್ಟ ಬಹುಮತ ಗಳಿಸಿ ಮರಳಿ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿವೆ. ಆದರೆ ಮೂರು ಸಂಸ್ಥೆಗಳು ಅತಂತ್ರ ವಿಧಾನಸಭೆಯನ್ನು ಅಂದಾಜಿಸಿವೆ. ಸ್ವತಂತ್ರ ಅಭ್ಯರ್ಥಿಗಳ ಬೆಂಬಲವಿಲ್ಲದೆ ಸರ್ಕಾರ ರಚನೆ ಅಸಾಧ್ಯ ಎಂಬುದು ಈ ಸಮೀಕ್ಷೆಗಳ ಇಂಗಿತ. ಮಹಾ ವಿಕಾಸ ಅಘಾಡಿ (ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ) ಹಾಗೂ ಎನ್​ಸಿಪಿ (ಶರದ್ ಪವಾರ್ ಬಣ)ಯ ಅಧಿಕಾರದ ಕನಸು ಈಡೇರುವ ಸಾಧ್ಯತೆ ಕಡಿಮೆ ಎಂಬುದು ಬಹುತೇಕ ಸಮೀಕ್ಷೆಗಳ ಒಟ್ಟಾರೆ ಸಾರಾಂಶ.

ದೆಹಲಿ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಗ್ಲೋಬಲ್ ಸ್ಟಡಿಸ್ (ಸಿಜಿಎಸ್) ಕೂಡ ಎರಡೂ ರಾಜ್ಯಗಳಲ್ಲಿ ಬಿಜೆಪಿ ಮೈತ್ರಿ್ರೂಟದ ಗೆಲುವನ್ನು ಊಹಿಸಿದೆ. ಜಾರ್ಖಂಡ್​ನಲ್ಲಿ ಕೂಡ ಹೆಚ್ಚಿನ ಸಮೀಕ್ಷೆಗಳು ಎನ್​ಡಿಎ ಮೈತ್ರಿಕೂಟದ ಗೆಲುವನ್ನು ಅಂದಾಜಿಸಿವೆ. ವಿಶೇಷವಾಗಿ ಉತ್ತರ ಮತ್ತು ದಕ್ಷಿಣ ಛೋಟಾನಾಗ್ಪುರದಲ್ಲಿ ಎನ್​ಡಿಎ ಮತ್ತು ಸಂತಾಲ್ ಪರಗಣದಲ್ಲಿ ಇಂಡಿಯಾ ಒಕ್ಕೂಟಕ್ಕೆ ಹೆಚ್ಚು ಸೀಟುಗಳು ದಕ್ಕಬಹುದು ಎನ್ನಲಾಗಿದೆ. ಒಂದು ಸಮೀಕ್ಷೆಯು ಜೆಎಂಎಂ ಮೈತ್ರಿಗೆ ಹೆಚ್ಚು ಸ್ಥಾನಗಳನ್ನು ನೀಡಿದೆ. 2019ರಲ್ಲಿ ಜೆಎಂಎಂ ನೇತೃತ್ವದ ಮೈತ್ರಿಕೂಟ 47 ಸೀಟುಗಳನ್ನು ಹಾಗೂ ಎನ್​ಡಿಎ ಮೈತ್ರಿಕೂಟ 25 ಸೀಟುಗಳನ್ನು ಗೆದ್ದಿದ್ದವು.

ಹೃದಯಾಘಾತದಿಂದ ಅಭ್ಯರ್ಥಿ ಸಾವು: ಮಹಾರಾಷ್ಟ್ರದ ಮತಗಟ್ಟೆಯೊಂದರಲ್ಲಿ ಮತ ಚಲಾಯಿಸಲು ಸರದಿಯಲ್ಲಿ ಕಾಯುತ್ತಿದ್ದ ಬೀಡ್​ನ ಸ್ವತಂತ್ರ ಅಭ್ಯರ್ಥಿಗೆ ತೀವ್ರ ಹೃದಯಾಘಾತವಾಗಿ, ಮೃತಪಟ್ಟಿದ್ದಾರೆ. ಮೃತದೇಹ ವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಜಾಪ್ರತಿನಿಧಿ ಕಾಯಿದೆ 1951ರ ಪ್ರಕಾರ, ಚುನಾವಣಾ ಸಮಯದಲ್ಲಿ ಅಭ್ಯರ್ಥಿಯು ಮರಣಹೊಂದಿದರೆ, ಸೆಕ್ಷನ್ 52ರ ಅಡಿಯಲ್ಲಿ ಮತದಾನವನ್ನು ಮುಂದೂಡಬಹುದು. ಬೀಡ್ ವಿಧಾನಸಭಾ ಕ್ಷೇತ್ರ ಶರದ್ ಪವಾರ್ ಅವರ ಎನ್​ಸಿಪಿಯ ಭದ್ರಕೋಟೆಯಾಗಿತ್ತು. ಈಗ ಪಕ್ಷದ ವಿಭಜನೆಯ ನಂತರ ಅಜಿತ್ ಪವಾರ್ ಬಣ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದೆ.

ಮತ ಸೆಳೆಯಲು ಬಿಟ್​ಕಾಯಿನ್ ಹಣ?: ಮಹಾರಾಷ್ಟ್ರದಲ್ಲಿ ಮತದಾನ ನಡೆಯುತ್ತಿದ್ದ ಸಮಯದಲ್ಲಿ ಬಿಟ್​ಕಾಯಿನ್ ಪ್ರಕರಣ ಮತ್ತೆ ಚರ್ಚೆಗೆ ಬಂದಿದೆ. ಎನ್​ಸಿಪಿ ನಾಯಕಿ ಸುಪ್ರಿಯಾ ಸುಲೆ ಹಾಗೂ ಕಾಂಗ್ರೆಸ್ ಮಹಾರಾಷ್ಟ್ರ ಅಧ್ಯಕ್ಷ ನಾನಾ ಪಟೊಲೆ ನಡುವೆ ನಡೆದಿದೆ ಎನ್ನಲಾದ ಆಡಿಯೋ ಸಂಭಾಷಣೆ ಹರಿದಾಡಿದ್ದು, ರಾಜಕೀಯ ಚರ್ಚೆಗೆ ಕಾರಣವಾಗಿದೆ. ಪುಣೆಯ ಐಪಿಎಸ್ ಅಧಿಕಾರಿ ರವೀಂದ್ರನಾಥ ಪಾಟೀಲ ಎಂಬುವರು ಆಡಿಯೋ ಕ್ಲಿಪ್ ಬಿಡುಗಡೆ ಮಾಡಿದ್ದಾರೆ. 2018ರಲ್ಲಿ ನಡೆದಿದ್ದ ಬಿಟ್​ಕಾಯಿನ್ ಹಗರಣದ ಮೊತ್ತವನ್ನು ಮಹಾರಾಷ್ಟ್ರ ಚುನಾವಣೆ ವೇಳೆ ಮತದಾರರನ್ನು ಸೆಳೆಯಲು ಬಳಸಿಕೊಳ್ಳುವ ಬಗ್ಗೆ ಸುಪ್ರಿಯಾ ಮತ್ತು ನಾನಾ ಪಟೋಲೆ ಮಾತನಾಡಿಕೊಳ್ಳುತ್ತಿರುವುದು ಇದರಲ್ಲಿ ದಾಖಲಾಗಿದೆ. ಅಮಿತ್ ಗುಪ್ತಾ ಎಂಬ ಮಾಜಿ ಪೊಲೀಸ್ ಕಮಿಷನರ್ ಕೂಡ ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪ ಮಾಡಲಾಗಿದೆ. ಆಡಿಯೋದಲ್ಲಿರುವ ಧ್ವನಿ ತನ್ನ ಸಹೋದರಿ ಸುಪ್ರಿಯಾ ಅವರದ್ದೇ ಎಂದು ಎನ್​ಸಿಪಿ ನಾಯಕ ಅಜಿತ್ ಪವಾರ್ ಹೇಳಿದ್ದಾರೆ.

ಈ ವಿವಾದ ಕುರಿತು ಪ್ರತಿಕ್ರಿಯೆ ನೀಡಿರುವ ಸುಪ್ರಿಯಾ, ಆಡಿಯೋ ಸಂಪೂರ್ಣ ನಕಲಿಯಾಗಿದೆ. ಅದರಲ್ಲಿ ಇರುವುದು ನನ್ನ ಧ್ವನಿ ಅಲ್ಲ. ಈ ಬಗ್ಗೆ ಕ್ರಿಮಿನಲ್ ಪ್ರಕರಣ ದಾಖಲು ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಮತ್ತೊಂದೆಡೆ ಬಿಟ್​ಕಾಯಿನ್ ಎಂದರೆ ಏನು ಎಂಬುದು ಗೊತ್ತೇ ಇಲ್ಲ ಎಂದು ನಾನಾ ಪಟೋಲೆ ಹೇಳಿದ್ದಾರೆ. ಈ ಬೆಳವಣಿಗೆಗಳ ನಡುವೆ ಬಿಟ್ ಕಾಯಿನ್ ಹಗರಣದ ಪ್ರಮುಖ ಆರೋಪಿ ಗೌರವ ಮೆಹ್ತಾ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ರಾಹುಲ್ ಉತ್ತರಿಸಲಿ: ಪ್ರಕರಣ ಹಿಂದೆ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಇರುವ ಸಾಧ್ಯತೆ ಇದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಆರೋಪ ಮಾಡಿದ್ದಾರೆ. ಇದಕ್ಕೆ ರಾಹುಲ್ ಗಾಂಧಿ ಸ್ಪಷ್ಟನೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಸುಮಾರು 235 ಕೋಟಿ ರೂಪಾಯಿ ದುಬೈನಿಂದ ಅಕ್ರಮವಾಗಿ ಬಿಟ್​ಕಾಯಿನ್ ಮುಖಾಂತರ ಭಾರತಕ್ಕೆ ತರಲಾಗಿದೆ ಎಂದು ಅವರು ಆರೋಪ ಮಾಡಿದ್ದಾರೆ.

ಮಹಾರಾಷ್ಟ್ರ, ಜಾರ್ಖಂಡ್ ಮತದಾನೋತ್ತರ ಸಮೀಕ್ಷೆಗಳು ಹೊರಬಿದ್ದಿದ್ದು ಎರಡೂ ರಾಜ್ಯಗಳಲ್ಲಿ ಅಧಿಕಾರಕ್ಕೆ ಬರುತ್ತೇವೆ. ಜಾರ್ಖಂಡ್​ನಲ್ಲಿ ಸ್ಪಷ್ಟ ಬಹುಮತ ಬರಲಿದೆ. ಸಮೀಕ್ಷೆಗಳು ಕೂಡ ಅದನ್ನೇ ಹೇಳಿವೆ. ನಮ್ಮ ಲೆಕ್ಕಾಚಾರವೂ ಅದೇ ಆಗಿದೆ.

| ಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ