ನ್ಯೂಸ್

ಭೀಕರ ರಸ್ತೆ ಅಪಘಾತದಲ್ಲಿ ಪ್ಯಾಟೆ ಹುಡ್ಗೀರ್​ ಹಳ್ಳಿ ಲೈಫ್​ ರಿಯಾಲಿಟಿ ಶೋ ವಿಜೇತೆ ಮಬೀನಾ ಮೈಕೆಲ್ ಸಾವು​​

ಮಂಡ್ಯ: ಕನ್ನಡ ಕಿರುತೆರೆ ಲೋಕದ ಪ್ರಖ್ಯಾತ ರಿಯಾಲಿಟಿ ಶೋ ಪ್ಯಾಟೆ ಹುಡ್ಗೀರ್​ ಹಳ್ಳಿ ಲೈಫ್​ ವಿಜೇತೆ ಮಬೀನಾ ಮೈಕೆಲ್​​ ರಸ್ತೆ ಅಪಘಾತದಲ್ಲಿಂದು (ಮಂಗಳವಾರ) ಸಾವಿಗೀಡಾಗಿದ್ದಾರೆ.

ನಾಗಮಂಗಲ ತಾಲೂಕಿನ ದೇವಿಹಳ್ಳಿ ಬಳಿಯ ಎನ್​ಎಚ್​-75 ಹೇವೇಯಲ್ಲಿ ಟ್ರಾಕ್ಟರ್-ಕಾರು ಮುಖಾಮುಖಿ ಡಿಕ್ಕಿಯಾಗಿ ಮಬೀನಾ ನಿಧನರಾಗಿದ್ದಾರೆ. ಸಂಜೆ 4:30ರ ವೇಳೆಯಲ್ಲಿ ಅವಘಡ ಸಂಭವಿಸಿದೆ.

ಮಡಿಕೇರಿ ಮೂಲದ ಮಬೀನಾ ಬೆಂಗಳೂರಿನಿಂದ ಸೋಮವಾರಪೇಟೆಗೆ ಇಬ್ಬರು ಸ್ನೇಹಿತರೊಂದಿಗೆ ತೆರಳುತ್ತಿದ್ದರು. ಈ ವೇಳೆ ಟ್ರಾಕ್ಟರ್‌ಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಮೆಬೀನಾ ಅವರನ್ನು ಮೊದಲು ಆದಿಚುಂಚನಗಿರಿ ಆಸ್ಪತ್ರೆಗೆ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನಿಸುವ ವೇಳೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್ ರಿಯಾಲಿಟಿ ಶೋನ ನಾಲ್ಕನೇ ಆವೃತ್ತಿಯ ವಿಜೇತೆಯಾಗಿದ್ದರು. ಅಲ್ಲದೆ, ಕೆಲವು ಚಿತ್ರಗಳಲ್ಲಿ ಸಹ ಕಲಾವಿದೆಯಾಗಿ ನಟಿಸಿದ್ದರು. ಬೆಳ್ಳೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)