ಲೂಧಿಯಾನ: ಗಂಡ-ಹೆಂಡತಿ ಅಂದಮೇಲೆ ಅಲ್ಲಿ ಜಗಳ ಮಾಮೂಲಿ. ಆದರೆ, ಒಬ್ಬರನ್ನೊಬ್ಬರು ಸರಿಯಾಗಿ ಅರ್ಥ ಮಾಡಿಕೊಂಡು, ಪರಸ್ಪರ ಗೌರವಿಸುತ್ತಾ, ಸರಿ-ತಪ್ಪುಗಳನ್ನು ಸ್ವೀಕರಿಸುವ ಮನೋಭಾವ ಬೆಳಸಿಕೊಂಡು, ಅಹಂ ಭಾವನೆಯನ್ನು ಬದಿಗಿಟ್ಟು ಒಟ್ಟಿಗೆ ಹೆಜ್ಜೆ ಹಾಕಿದರೆ ವೈವಾಹಿಕ ಜೀವನ ಹಾಲು ಜೇನಿನಂತೆ ಇರುತ್ತದೆ. ಆದರೆ, ಇದನ್ನು ಮರೆಯುವ ಕೆಲವರು ದಾಂಪತ್ಯ ಜೀವನವೆಂಬ ಪರಿಶುದ್ಧ ಕನ್ನಡಿಯನ್ನು ಡಿವೋರ್ಸ್ನಿಂದ ಹೊಡೆದು ಬಿಡುತ್ತಾರೆ. ಆದರೆ, ತಪ್ಪನ್ನು ತಿದ್ದಿ ಹೇಳುವವರಿದ್ದರೆ ಒಂದು ಸಂಸಾರವನ್ನೇ ಉಳಿಸಬಹುದು ಎಂಬುದಕ್ಕೆ ಈ ಘಟನೆ ತಾಜಾ ಉದಾಹರಣೆಯಾಗಿದೆ.
ಅನೇಕ ದಂಪತಿ ತಮ್ಮ ಕೌಟುಂಬಿಕ ಕಲಹವನ್ನು ಇತ್ಯರ್ಥ ಪಡೆಸಿಕೊಳ್ಳಲು ಪೊಲೀಸ್ ಠಾಣೆಗೆ ಬರುತ್ತಾರೆ. ಅಂಥವರಿಗೆ ಪೊಲೀಸರು ವಿಶೇಷ ಸಮಾಲೋಚನೆ ನೀಡಿ, ಮನಸ್ತಾಪಗಳನ್ನು ತೊಡೆದುಹಾಕಿ ಮತ್ತೆ ಒಟ್ಟಾಗಿ ಹೆಜ್ಜೆ ಹಾಕಲು ದಾರಿ ಮಾಡಿಕೊಡುತ್ತಾರೆ. ಅದರಂತೆ ಪ್ರೇಮಿಗಳ ದಿನದಂದು ಪಂಜಾಬ್ನ ಲೂಧಿಯಾನ ಪೊಲೀಸ್ ಠಾಣೆಗೆ ಅನೇಕ ದಂಪತಿ ಡಿವೋರ್ಸ್ ವಿಚಾರವಾಗಿ ಆಗಮಿಸಿದ್ದರು.
ಠಾಣೆಗೆ ಆಗಮಿಸಿದ ಅನೇಕ ದಂಪತಿಗಳಿಗೆ ಆಪ್ತ ಸಮಾಲೋಚನೆ ನೀಡಲಾಯಿತು. ಈ ವೇಳೆ 20 ದಂಪತಿ ತಮ್ಮ ಮನಸ್ಸನ್ನು ಬದಲಿಸಿಕೊಂಡು ಒಟ್ಟಿಗೆ ಜೀವನ ನಡೆಸಲು ನಿರ್ಧರಿಸಿದರು. ಅಂದು ಪ್ರೇಮಿಗಳ ದಿನವಾದ್ದರಿಂದ ಪೊಲೀಸ್ ಠಾಣೆ ವತಿಯಿಂದಲೇ 20 ದಂಪತಿಗೂ ಉಚಿತವಾಗಿ ಸಿನಿಮಾ ಟಿಕೆಟ್ ನೀಡಲಾಯಿತು.
ಕೌಟುಂಬಿಕ ಸಮಸ್ಯೆಯನ್ನು ಬಗೆಹರಿಸಿ, ಅವರಿಗೆ ಸಿನಿಮಾ ಟಿಕೆಟ್ ನೀಡಿದ ಲೂಧಿಯಾನ ಪೊಲೀಸರ ಕಲ್ಪನೆಯನ್ನು ಸ್ಥಳೀಯ ಜನರು ಮೆಚ್ಚಿಕೊಂಡಿದ್ದಾರೆ. ಪೊಲೀಸರು ಇದೇ ರೀತಿ ಜನಸ್ನೇಹಿ ಆಗಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. (ಏಜೆನ್ಸೀಸ್)